Advertisement

ಮರಾಠಾ ಅಭಿವೃದ್ಧಿ ನಿಗಮಕ್ಕೆ ಮುಳೆ ಸಾರಥ್ಯ

11:01 AM Feb 20, 2022 | Team Udayavani |

ಬೀದರ: ಕನ್ನಡಪರ ಸಂಘಟನೆಗಳ ಭಾರೀ ವಿರೋಧದ ನಡುವೆಯೂ ಅಸ್ತಿತ್ವಕ್ಕೆ ಬಂದಿರುವ ಮರಾಠಾ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಅಧ್ಯಕ್ಷರ ಹೆಸರನ್ನು ಪ್ರಕಟಿಸಿದೆ.

Advertisement

ಬಸವಕಲ್ಯಾಣದ ಮಾಜಿ ಶಾಸಕ, ಮರಾಠಾ ಸಮಾಜದ ಹಿರಿಯ ನಾಯಕ ಡಾ| ಮಾರುತಿರಾವ್‌ ಮುಳೆ (ಎಂ.ಜಿ ಮುಳೆ) ಅವರನ್ನು ನಿಗಮದ ಮೊದಲ ಸಾರಥ್ಯವನ್ನು ವಹಿಸಿ ಅಧಿಕೃತವಾಗಿ ಆದೇಶಿಸಿದೆ.

ಮರಾಠಾ ಪ್ರಾಬಲ್ಯ ಹೊಂದಿರುವ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಜಾತಿ ಓಲೈಕೆ ಅಸ್ತ್ರ ಪ್ರಯೋಗಿಸಿದ್ದ ಬಿಜೆಪಿ ಸರ್ಕಾರ, ಕೊನೆಗೆ ಕಲ್ಯಾಣದಲ್ಲಿ ಕಮಲವನ್ನು ಅರಳಿಸಿತ್ತು. ಚುನಾವಣೆ ವೇಳೆ ಮರಾಠಾ ಸಮಾಜದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಜತೆಗೆ ಸಮಾಜದ ಅಭಿವೃದ್ಧಿಗೆ ಅಗತ್ಯ ನೆರವು ನೀಡುವ ಕುರಿತು ಅಂದಿನ ಸಿಎಂ ಬಿಎಸ್‌ವೈ ಘೋಷಿಸಿದ್ದರು. ಈಗ 10 ತಿಂಗಳ ಬಳಿಕ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಿಗಮದ ಅಧ್ಯಕ್ಷರ ಹೆಸರನ್ನು ಘೋಷಿಸಿದ್ದಾರೆ.

ಕ್ಷೇತ್ರದ ಒಂದು ಸಮುದಾಯದ ಓಲೈಕೆಗಾಗಿ “ನಿಗಮ’ ರಚನೆ ಜೇನುಗೂಡಿಗೆ ಕೈ ಹಾಕಿದ ಸಿಎಂ ಬಿಎಸ್‌ವೈ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಕನ್ನಡಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇದರಿಂದ ಕಂಗಾಲಾದ ಸರ್ಕಾರ ಎರಡೇ ದಿನದಲ್ಲಿ ವೀರಶೈವ-ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವ ಮೂಲಕ ಸಂಕಷ್ಟದಿಂದ ಪಾರಾಗಿತ್ತು. ಈ ಮೂಲಕ ಎರಡೂ ಸಮುದಾಯಗಳ ಕೂಗಿಗೆ ಮನ್ನಣೆ ದೊರೆತ್ತಿತ್ತು.

ಯಾರೀವರು ಮುಳೆ?

Advertisement

ಬಸವಕಲ್ಯಾಣ ಮಾತ್ರವಲ್ಲ ಜಿಲ್ಲೆಯಲ್ಲಿ ಮರಾಠಾ ಸಮುದಾಯದ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರುವ ಮೂಳೆ, 1999ರಲ್ಲಿ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್‌ನಿಂದ ಸತತ ಸೋಲುಂಡಿದ್ದ ಅವರು, ಇತ್ತಿಚೆಗೆ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಮತ್ತೆ ಜೆಡಿಎಸ್‌ನ ಕದ ತಟ್ಟಿದ್ದರು. ಆದರೆ, ಟಿಕೆಟ್‌ ಕೈ ತಪ್ಪಿದ್ದರಿಂದ ಎನ್‌ಸಿಪಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದರು. ಮರಾಠಾ ಸಾಂಪ್ರದಾಯಿಕ ಮತಗಳು ಕೈತಪ್ಪಬಹುದೆಂಬ ಆತಂಕ ಆಡಳಿತ ಪಕ್ಷಕ್ಕಿತ್ತು. ಕೊನೆಗೆ ಬಿಜೆಪಿ ನಾಯಕರ ಒತ್ತಡದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಅಂದು ಗೃಹ ಸಚಿವರಾಗಿದ್ದ ಬೊಮ್ಮಾಯಿ ನೇತೃತ್ವದ ಸಮಾಜದ ಸಭೆಯಲ್ಲೇ ಮುಳೆ ಅವರು, ಮರಾಠಾ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ನೇಮಕ ಮಾಡುವುದು, ಮರಾಠಾ ಸಮಾಜವನ್ನು 2ಎ ವರ್ಗಕ್ಕೆ ಸೇರಿಸುವುದು ಮತ್ತು ಕಲ್ಯಾಣದಲ್ಲಿ ಶಿವಾಜಿ ಪಾರ್ಕ್‌ ಸ್ಥಾಪನೆ ಕುರಿತು ಒತ್ತಾಸೆಯಿಟ್ಟಿದ್ದರಲ್ಲದೇ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ಸಿಎಂ ಬೊಮ್ಮಾಯಿ ನಿಗಮ ಅಧ್ಯಕ್ಷರಾಗಿ ಮುಳೆ ಹೆಸರನ್ನು ಘೋಷಿಸಿದ್ದು, ಸರ್ಕಾರದ ಅಧೀನ ಕಾರ್ಯದರ್ಶಿಗಳು ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾರೆ.

ಶಿವಾಜಿ ಮಹಾರಾಜರ ಜಯಂತಿ ದಿನದಂದು ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ತಮ್ಮನ್ನು ಘೋಷಿಸಿರುವುದು ಸಂತಸ ತಂದಿದೆ. ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಸೇರಿ ಸಮಾಜದ ಪ್ರಮುಖ ಬೇಡಿಕೆಗಳಿಗೆ ಮನ್ನಿಸುವ ಮೂಲಕ ಸಿಎಂ ಬೊಮ್ಮಾಯಿ ನೀಡಿದ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಹೊಸ ನಿಗಮದ ಮೊದಲ ಅಧ್ಯಕ್ಷನಾಗಿದ್ದು, ಹಿಂದುಳಿದ ಮರಾಠಾ ಸಮಾಜದ ಅಭಿವೃದ್ಧಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ. ಪ್ರಸಕ್ತ ಬಜೆಟ್‌ನಲ್ಲಿ ನಿಗಮಕ್ಕೆ 200 ಕೋಟಿ ರೂ. ಅನುದಾನ ಬೇಡಿಕೆ ಇಟ್ಟಿದ್ದೇನೆ. -ಮಾರುತಿರಾವ್‌ ಮುಳೆ, ನೂತನ ಅಧ್ಯಕ್ಷ ಮರಾಠಾ ಅಭಿವೃದ್ಧಿ ನಿಗಮ

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next