Advertisement

ಮಾರನ್‌ ಸೋದರರ ಖುಲಾಸೆ

07:30 AM Mar 15, 2018 | Team Udayavani |

ಚೆನ್ನೈ: ಯುಪಿಎ ಸರ್ಕಾರದ ಅವಧಿಯಲ್ಲಿ ಆಗಿದ್ದ ಟೆಲಿಕಾಂ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರಸಂಪರ್ಕ ಖಾತೆ ಮಾಜಿ ಸಚಿವ ದಯಾನಿಧಿ ಮಾರನ್‌ ಹಾಗೂ ಅವರ ಸಹೋದರ ಕಲಾನಿಧಿ ಮಾರನ್‌ ಸೇರಿದಂತೆ ಪ್ರಕರಣದ ಇತರ ಆರೋಪಿಗಳನ್ನು ಸಿಬಿಐ ವಿಶೇಷ ಕೋರ್ಟ್‌ ಆರೋಪ ಮುಕ್ತಗೊಳಿಸಿದೆ. ನ್ಯಾಯಾಧೀಶ  ಎನ್‌. ನಟರಾಜನ್‌ ಈ ತೀರ್ಪು ನೀಡಿದ್ದಾರೆ.  

Advertisement

2004ರಿಂದ 2006ರ ಅವಧಿಯಲ್ಲಿ, ಟೆಲಿಕಾಂ ಸಚಿವ ದಯಾನಿಧಿ ಮಾರನ್‌ ಅವರ ಚೆನ್ನೈ ನಿವಾಸದಲ್ಲಿ ಅನಧಿಕೃತ ಟೆಲಿಫೋನ್‌ ಎಕ್ಸ್‌ಚೇಂಜ್‌ ಕಚೇರಿ ತೆರೆದು, ಸರ್ಕಾರಕ್ಕೆ 1.78 ಕೋಟಿ ರೂ. ನಷ್ಟವಾಗಿದೆಯೆಂದು ಸಿಬಿಐ ಆರೋಪಿಸಿತ್ತು. 
ಆದರೆ, ಇದನ್ನು ಅಲ್ಲಗಳೆದಿದ್ದ ಮಾರನ್‌ ಸಹೋದರರು, ಪ್ರಕರಣದಲ್ಲಿ ತಮ್ಮನ್ನು ದೋಷಮುಕ್ತಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಮೇಲ್ನೋಟಕ್ಕೆ ತಮ್ಮ ವಿರುದ್ಧ ಯಾವುದೇ ಆರೋಪಗಳಿಲ್ಲದಿರುವ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದ ಅವರು, ಇದೇ ಕಾರಣಕ್ಕಾಗಿ ತಮ್ಮನ್ನು ದೋಷಮುಕ್ತಗೊಳಿಸುವಂತೆ ಕೋರಿದ್ದರು. ಮಾರ್ಚ್‌ 9ರಂದು ವಿಚಾರಣೆ ಅಂತ್ಯಗೊಳಿಸಿ ತೀರ್ಪನ್ನು ಮಾ. 14ಕ್ಕೆ ಮುಂದೂಡಿತ್ತು. 

ಮಾರನ್‌ ಸಹೋದರರಲ್ಲದೆ, ಇದೇ ಪ್ರಕರಣದಲ್ಲಿ ಆರೋಪ ಹೊತ್ತಿದ್ದ ಬಿಎಸ್‌ಎನ್‌ಎಲ್‌ನ ಮಾಜಿ ಮಹಾ ಪ್ರಬಂಧಕ ಕೆ. ಬ್ರಹ್ಮನಾಥನ್‌, ಉಪ ಮಹಾ ಪ್ರಬಂಧಕ ಎಂ.ಪಿ. ವೇಲುಸಾಮಿ ಹಾಗೂ ದಯಾನಿಧಿ ಮಾರನ್‌ ಅವರ ಖಾಸಗಿ ಕಾರ್ಯದರ್ಶಿ ಗೌತಮನ್‌ ಅವರನ್ನೂ ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ತೀರ್ಪಿನ ವಿರುದ್ಧ ಮದ್ರಾಸ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next