ಮುಂಬೈ: ಮಾವೋವಾದಿ ನಕ್ಸಲರು ಮತ್ತು ಪೊಲೀಸರ ನಡುವೆ ನಡೆದ ಎನ್ ಕೌಂಟರ್ ನಲ್ಲಿ 13 ಮಂದಿ ನಕ್ಸಲರು ಹತ್ಯೆಯಾಗಿದ್ದಾರೆ. ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಈ ಎನ್ ಕೌಂಟರ್ ನಡೆದಿದೆ.
ಬೆಳಗ್ಗೆ 5.30ರ ಸುಮಾರಿಗೆ ಅರಣ್ಯ ಪ್ರದೇಶದ ಕೊಟ್ಮಿ ಎಂಬಲ್ಲಿ ಈ ನಕ್ಸಲರು ಸಭೆ ಸೇರಿದ್ದರು. ಈ ವೇಳೆ ದಾಳಿ ನಡೆಸಿದ ಮಹಾರಾಷ್ಟ್ರ ಪೊಲೀಸರ ಸಿ-60 ಕಮಾಂಡೋಗಳು ಎನ್ ಕೌಂಟರ್ ನಡೆಸಿದರು ಎಂದು ಗಡ್ ಚಿರೋಲಿ ಡಿಐಜಿ ಸಂದೀಪ್ ಪಾಟೀಲ್ ಹೇಳಿದರು.
ಇದನ್ನೂಓದಿ:ವೈಲೆಂಟ್ ಬಿಟ್ಟು ಸೈಲೆಂಟ್ ಆಗಿರೋಣ.. ಮಾನ್ವಿತಾ ಹೇಳಿದ ಲಾಕ್ ಡೌನ್ ಅನುಭವ
ಮಾವೋವಾದಿಗಳ ಸಭೆಯ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರನ್ನು ಕಂಡ ಮಾವೋವಾದಿಗಳು ಗುಂಡಿನ ದಾಳಿ ಆರಂಭಿಸಿದರು ಎಂದರು.
ಮಾವೋವಾದಿಗಳು ಮತ್ತು ಪೊಲೀಸರ ನಡುವಿನ ಎನ್ ಕೌಂಟರ್ ಸುಮಾರು ಒಂದು ಗಂಟೆಗಳ ಕಾಲ ನಡೆದಿತ್ತು. 13 ಮಂದಿ ಸಾವನ್ನಪ್ಪಿದರೆ ಉಳಿದವರು ಅರಣ್ಯ ಪ್ರದೇಶದಲ್ಲಿ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರ ದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಗಡ್ ಚಿರೋಲಿ ಎಸ್ ಪಿ ಅಂಕಿತ್ ಗೋಯಲ್ ಹೇಳಿದ್ದಾರೆ.
ಇದೇ ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆ ಐವರು ನಕ್ಸಲರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿತ್ತು.