Advertisement

Rain; ಮಳೆಯಬ್ಬರಕ್ಕೆ ಹಲವು ರಾಜ್ಯಗಳು ಹೈರಾಣ: ಜನಜೀವನ ಅಸ್ತವ್ಯಸ್ತ

10:27 PM Jul 07, 2024 | Team Udayavani |

ಜೂನ್‌ನಲ್ಲಿ ಮಳೆ ಕೊರತೆಯಾಗಿದೆ ಎಂಬ ಸುದ್ದಿಯ ನಡುವೆಯೇ ಪ್ರಸಕ್ತ ತಿಂಗಳಲ್ಲಿ ದೇಶಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮಹಾರಾಷ್ಟ್ರ, ಉತ್ತರಪ್ರದೇಶ, ಗೋವಾ, ಉತ್ತರಾಖಂಡ, ಬಿಹಾರ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ನಿರಂತರ ವರ್ಷಧಾರೆಯಿಂದಾಗಿ ದೇಶದ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ, ರಸ್ತೆ, ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

Advertisement

ಥಾಣೆಯ ರೆಸಾರ್ಟ್‌ನಲ್ಲಿ ಸಿಲುಕಿದ್ದ 49 ಮಂದಿ ರಕ್ಷಣೆ

ಭಾರೀ ಮಳೆಯಿಂದಾಗಿ ಥಾಣೆಯಲ್ಲಿ ಜಲಾವೃತಗೊಂಡಿದ್ದ ರೆಸಾರ್ಟ್‌ವೊಂದರಲ್ಲಿ ಸಿಲುಕಿದ್ದ 49 ಮಂದಿಯನ್ನು ಭಾನುವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ರಕ್ಷಿಸಿದೆ. ಜತೆಗೆ, ಪಾಲ^ರ್‌ನಲ್ಲಿ ಜಲಾವೃತ ಹೊಲದಲ್ಲಿ ಅತಂತ್ರರಾಗಿದ್ದ 16 ಗ್ರಾಮಸ್ಥರನ್ನು ರಕ್ಷಿಸಲಾಗಿದೆ. ಇವರೆಲ್ಲರೂ ವಸಾಯ್‌ನ ಗ್ರಾಮವೊಂದರ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಸಮೀಪದ ತಾನ್ಸಾ ಅಣೆಕಟ್ಟಿನಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ, ಏಕಾಏಕಿ ಹೊಲದಲ್ಲಿ ನೀರು ತುಂಬಿಕೊಂಡಿತ್ತು. 2 ಗಂಟೆಗಳ ಬಳಿಕ ಎನ್‌ಡಿಆರ್‌ಎಫ್ ತಂಡ 8 ಮಹಿಳೆಯರು ಸೇರಿದಂತೆ 16 ಮಂದಿಯನ್ನು ಸುರಕ್ಷಿತವಾಗಿ ಹೊರಕರೆತಂದಿತು.

ರೈಲು ಸೇವೆ ವ್ಯತ್ಯಯ: ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ ರೈಲು ಹಳಿಗಳು ಜಲಾವೃತಗೊಂಡ, ಹಳಿ ಮೇಲೆ ಮರ ಬಿದ್ದ ಘಟನೆಗಳು ನಡೆದ ಕಾರಣ, ಥಾಣೆ ಜಿಲ್ಲೆಯ ಕಸಾರಾ ಮತ್ತು ತಿತ್ವಾಲಾ ಸ್ಟೇಷನ್‌ಗಳ ನಡುವಿನ ಸ್ಥಳೀಯ ರೈಲುಗಳ ಸಂಚಾರವನ್ನು ಭಾನುವಾರ ಸ್ಥಗಿತಗೊಳಿಸಲಾಗಿತ್ತು. ಹಲವು ದೂರ ಪ್ರಯಾಣದ ರೈಲುಗಳ ಮಾರ್ಗ ಬದಲಿಸಲಾಗಿತ್ತು.

ಗೋವಾ ಜಲಪಾತದಲ್ಲಿ 80 ಮಂದಿ ಅತಂತ್ರ

Advertisement

ಗೋವಾದ ಸತ್ತಾರಿ ತಾಲೂಕಿನ ಜಲಪಾತವೊಂದರ ವೀಕ್ಷಣೆಗೆ ತೆರಳಿದ್ದ 80 ಮಂದಿ ಅಲ್ಲೇ ಸಿಲುಕಿಕೊಂಡ ಘಟನೆ ನಡೆದಿದೆ. ನದಿ ದಾಟಿ ಜಲಪಾತ ವೀಕ್ಷಣೆಗೆ ಇವರೆಲ್ಲರೂ ತೆರಳಿದ್ದರು. ಆದರೆ, ಮಳೆಯಿಂದಾಗಿ ಏಕಾಏಕಿ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ, ನದಿ ಮಟ್ಟವೂ ಏರಿಕೆಯಾಗಿದ್ದರಿಂದ ಇವರೆಲ್ಲರೂ ಸಿಲುಕಿಕೊಳ್ಳಬೇಕಾಯಿತು. ಅಗ್ನಿಶಾಮಕ ದಳವು ಸ್ಥಳಕ್ಕೆ ಧಾವಿಸಿ 50 ಮಂದಿಯನ್ನು ರಕ್ಷಿಸಿತು. ಇನ್ನೂ 30 ಮಂದಿ ಅಲ್ಲೇ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲೂ ಧಾರಾಕಾರ ಮಳೆ

ಉತ್ತರಪ್ರದೇಶದಲ್ಲಿ ಮುಂಗಾರು ಚುರುಕುಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಬಹುತೇಕ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಭಾನುವಾರ ಶ್ರಾವಸ್ತಿ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 12 ಮಹಿಳೆಯರನ್ನು ರಕ್ಷಿಸಲಾಗಿದೆ.

ಬಿಹಾರ: ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ

ಬಿಹಾರದಲ್ಲಿ ನಿರಂತರ ಮಳೆಯಾಗುತ್ತಿದ್ದು ಕೋಸಿ, ಮಹಾನಂದ, ಬಾಗಮತಿ, ಗಂಡಕ್‌ ಸೇರಿ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿವೆ. ಈ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದಲ್ಲಿ ವಾಸಿಸುವ ಹಲವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತ್ರಿವೇಣಿ ಘಾಟ್‌ ಆರತಿ ಸ್ಥಳ ತಲುಪಿದ ನೀರು: ಚಾರ್‌ಧಾಮ್‌ ಯಾತ್ರೆ ಸ್ಥಗಿತ

ಉತ್ತರಾಖಂಡದಲ್ಲಿ ಭಾರೀ ಮುಂದುವರಿದಿದ್ದು, ಹವಾಮಾನ ಇಲಾಖೆಯು ಭಾನುವಾರದಿಂದ 2 ದಿನಗಳ ಕಾಲ ಧಾರಾಕಾರ ಮಳೆಯ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಚಾರ್‌ಧಾಮ್‌ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ವರ್ಷಧಾರೆಯಿಂದಾಗಿ ಬದ್ರಿನಾಥ್‌ಗೆ ತೆರಳುವ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ. ಗುಡ್ಡ ಕುಸಿದ ಕಾರಣ ಸಂಚಾರ ಅಸ್ತವ್ಯಸ್ತವಾಗಿದೆ. ಶನಿವಾರ ವಾಹನದ ಮೇಲೆ ಮಣ್ಣು ಕುಸಿದು ಹೈದರಾಬಾದ್‌ನ ಇಬ್ಬರು ಯಾತ್ರಿಗಳು ಮೃತಪಟ್ಟಿದ್ದಾರೆ. ಇನ್ನು, ನಿರಂತರ ಮಳೆಯಿಂದಾಗಿ ಗಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ತ್ರಿವೇಣಿ ಘಾಟ್‌ನ ಆರತಿ ಸ್ಥಳದವರೆಗೆ ನೀರು ತಲುಪಿದೆ. ಈ ಹಿನ್ನೆಲೆಯಲ್ಲಿ ಉತ್ತರಾಖಂಡದಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next