Advertisement

ರೈತ ಸಂಘದಿಂದ ಹಲವು ನಿರ್ಣಯ: ರೈತ ಹುತಾತ್ಮ ದಿನಾಚರಣೆ, ಧಾರವಾಡದಲ್ಲಿ ಸಮಾವೇಶ

11:09 PM Jul 21, 2023 | Team Udayavani |

ಧಾರವಾಡ: ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ 43ನೇ ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ ರೈತ ಚಳವಳಿಯ ಮುಂದಿನ ಹೋರಾಟದ ಘೋಷಣ ಸಮಾವೇಶದಲ್ಲಿ ಒಮ್ಮತದಿಂದ ಹಲವು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ರೈತ ವಿರೋಧಿ ಕೇಂದ್ರ ಬಿಜೆಪಿ ಸರಕಾರವನ್ನು ಮುಂದಿನ ಚುನಾವಣೆ ಯಲ್ಲಿ ಕಿತ್ತೂಗೆದು ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆ ಸ್ಥಾಪಿಸಲು ಸಮಾ ವೇಶದಲ್ಲಿ ಸಂಕಲ್ಪ ಮಾಡಲಾಯಿತು.

Advertisement

ರಾಜ್ಯ ಕಾಂಗ್ರೆಸ್‌ ಸರಕಾರವು ಚುನಾವಣ ಪೂರ್ವ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ 5 ಗ್ಯಾರಂಟಿ ಯೋಜನೆಗಳ ಜಾರಿ, ಹಿಂದಿನ ಸರಕಾರ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆದಿರುವ ಕ್ರಮವನ್ನು ಸ್ವಾಗತಿಸಿರುವ ಸಮಾವೇಶವು, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಾಗೂ ಜಾನುವಾರು ಹತ್ಯೆ ಪ್ರತಿಬಂಧಕ, ಸಂರಕ್ಷಣ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದಿದೆ.

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಆತಂಕದ‌ ಸಂಗತಿ. ಸರಕಾರ ಕೂಡಲೇ ರೈತರಿಗೆ ಆತ್ಮಸ್ಥೆರ್ಯ ತುಂಬುವ ಕಾರ್ಯಕ್ರಮಗಳನ್ನು ಘೋಷಿಸಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಅವರ ಕುಟುಂಬಕ್ಕೆ ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿದೆ.

ಸಾಲವಿಲ್ಲದೇ ಕೃಷಿ ವ್ಯವಸ್ಥೆಯನ್ನು ಸ್ಥಾಪಿಸಲು ರೈತ ಆದಾಯ ಕೇಂದ್ರಿತ ಕೃಷಿ ನೀತಿ ರೂಪಿಸಬೇಕು. ಘನತೆ ಮತ್ತು ಗೌರವದಿಂದ ಬದುಕಲು ರೈತ ಕುಟುಂಬಗಳಿಗೆ ಕನಿಷ್ಠ ಆದಾಯ ಖಾತ್ರಿಯನ್ನು ಒದಗಿಸಲು ರೈತ ಆದಾಯ ಆಯೋಗ ರಚಿಸಬೇಕು. ಇದಕ್ಕೆ ಪೂರಕವಾಗಿ ಪ್ರತಿ ಜಿಲ್ಲೆಯಲ್ಲಿ ರೈತ ರಕ್ಷಣಮಂಡಳಿ ರಚಿಸಬೇಕು. ಡಾ|ಎಂ.ಎಸ್‌.ಸ್ವಾಮಿನಾಥನ್‌ ಆಯೋಗದ ವರದಿ ಅನ್ವಯ ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರ ಉತ್ಪನ್ನಗಳನ್ನು ಸಂಪೂರ್ಣವಾಗಿ ಕೊಳ್ಳುವ ವ್ಯವಸ್ಥೆ ರೂಪಿಸಬೇಕು. ಕನಿಷ್ಠ 5 ಸಾವಿರ ಕೋಟಿ ರೂ. ಆವರ್ತ ನಿಧಿ ಸ್ಥಾಪಿಸಬೇಕು ಎಂದು ಆಗ್ರಹಿಸಿದೆ.

2013ರ ಕೇಂದ್ರ ಸ್ವಾಧೀನ ಕಾಯ್ದೆಗೆ ರಾಜ್ಯ ಸರಕಾರ ತಂದಿರುವ ತಿದ್ದುಪಡಿ ಮತ್ತು ರೂಪಿಸಿರುವ ನಿಯಮಗಳು ಕಾಯ್ದೆಯ ಮೂಲ ಉದ್ದೇಶಕ್ಕೆ ವ್ಯತಿರಿಕ್ತವಾಗಿದ್ದು, ಕೂಡಲೇ ಮಾರ್ಪಾಡು ಮಾಡಿ ರೈತಸ್ನೇಹಿಯಾಗಿ ರೂಪಿಸಬೇಕು. ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಶೀಘ್ರ ಅನುಷ್ಠಾನ ಮುಂತಾದ 16 ನಿರ್ಣಯಗಳನ್ನು ಒಮ್ಮತದಿಂದ ಅಂಗೀಕರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next