Advertisement

ಹಲವು ಭರವಸೆಯ ಜಿಲ್ಲಾ ಬಿಜೆಪಿ ಪ್ರಣಾಳಿಕೆ ಬಿಡುಗಡೆ

03:58 PM May 08, 2018 | Team Udayavani |

ದಾವಣಗೆರೆ: ಸಾಸ್ವೇಹಳ್ಳಿ, ಉಬ್ರಾಣಿ ಏತ ನೀರಾವರಿ ಯೋಜನೆಗೆ ವೇಗ, ಶುದ್ಧ ಕುಡಿಯುವ ನೀರು ಪೂರೈಕೆಗೆ ಒತ್ತು, ಜಿಲ್ಲೆಗೆ ಅನ್ವಯವಾಗುವಂತೆ ಸ್ವತ್ಛ ಭಾರತ್‌ ಮಿಷನ್‌… ಹತ್ತಾರು ಭರವಸೆಯ ನಮ್ಮ ಕ್ಷೇತ್ರಕ್ಕೆ ನಮ್ಮ ವಚನ… ಪ್ರಣಾಳಿಕೆಯನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಸೋಮವಾರ ಬಿಡುಗಡೆ ಮಾಡಿದರು.

Advertisement

ಕೆ.ಬಿ. ಬಡಾವಣೆಯ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಬೂತ್‌ ಮಟ್ಟದಲ್ಲಿನ ಸಮಸ್ಯೆ, ಆಗಬೇಕಾದ ಕೆಲಸಗಳ ಬಗ್ಗೆ ಕಾರ್ಯಕರ್ತರು, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ, ರಾಜ್ಯದ ಮುಖಂಡರ ಜೊತೆಗೆ ಚರ್ಚಿಸಿ, ಜಿಲ್ಲಾ ಮಟ್ಟದ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಅಧಿಕಾರಕ್ಕೆ ಬಂದ ನಂತರ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೀಡಿರುವ ಆಶ್ವಾಸನೆ, ಭರವಸೆಯನ್ನ ಚಾಚೂ ತಪ್ಪದೆ ಕಾರ್ಯಗತಗೊಳಿಸಲಾಗುವುದು ಎಂದರು.

ದಾವಣಗೆರೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯ ಪ್ರಣಾಳಿಕೆಯಲ್ಲಿ 1 ಲಕ್ಷದವರೆಗೆ ರೈತರ ಸಾಲಮನ್ನಾ ಇತರೆ ಪ್ರಮುಖ ಅಂಶಗಳನ್ನು ಜನರು ಮೆಚ್ಚುತ್ತಿದ್ದಾರೆ. 2008 ರಲ್ಲಿ 8 ವಿಧಾನಸಭಾ ಕ್ಷೇತ್ರದಲ್ಲಿ 7 ಕ್ಷೇತ್ರದಲ್ಲಿ ಗೆದ್ದಿದ್ದೆವು. ಈ ಬಾರಿ 8ಕ್ಕೆ 8 ಕ್ಷೇತ್ರ ಗೆಲ್ಲುತ್ತೇವೆ. ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರ ಗೆಲ್ಲುವ ಮೂಲಕ ಅಪ್ಪ ಮತ್ತು ಮಗನನ್ನು ಮನೆಗೆ ಕಳಿಸುತ್ತೇವೆ ಎಂದು ತಿಳಿಸಿದರು.

ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಮಾಜಿ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಜಿಲ್ಲೆಗೆ 5 ಸಾವಿರ ಕೋಟಿ ಅನುದಾನ ತರಲಾಗಿದೆ. ಸಮಗ್ರ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿರುವುದು ಸುಳ್ಳು. ಸ್ವತಃ ಶಾಮನೂರು ಶಿವಶಂಕರಪ್ಪ ಅವರೇ, ನಾಲ್ಕು ರಸ್ತೆ ಮಾಡುವುದೇ ಅಭಿವೃದ್ಧಿ ಅಲ್ಲ ಎಂದಿದ್ದಾರೆ. ಹಾಗಾಗಿ ನಾವು ಬಿಜೆಪಿಯವರು ಅಭಿವೃದ್ಧಿ ಎಂದರೆ ಏನು… ಎಂದು ಪ್ರಶ್ನಿಸುತ್ತಿದ್ದೇವೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕೆಲಸ ಆಗಿಯೇ ಇಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಸ್ಮಾರ್ಟ್‌ಸಿಟಿ ಯೋಜನೆಯ ಪ್ರಥಮ ಪಟ್ಟಿಯಲ್ಲೇ ದಾವಣಗೆರೆ ಆಯ್ಕೆಯಾಗಿ 500 ಕೋಟಿ ಅನುದಾನ ಬಂದಿದೆ. ಒಂದೇ ಒಂದು ರೂಪಾಯಿ ಕೆಲಸ ಆಗಿಲ್ಲ. ಬ್ಯಾಂಕ್‌ ನಲ್ಲಿಟ್ಟಿರುವ ಹಣಕ್ಕೇ 20-30 ಕೋಟಿ ಬಡ್ಡಿ ಬಂದಿದೆ. ಬ್ಯಾಂಕ್‌ನಲ್ಲಿ ಠೇವಣಿ ಇಡಲಿಕ್ಕೆ ಅನುದಾನ ಕೊಟ್ಟಿಲ್ಲ ಎಂದರು.

Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿ ದಾವಣಗೆರೆ ದಕ್ಷಿಣ ಕ್ಷೇತ್ರದ ಮಂಡಕ್ಕಿ ಭಟ್ಟಿ ಪ್ರದೇಶ ಅಭಿವೃದ್ಧಿ ಸೇರ್ಪಡೆ ಮಾಡಲಾಗಿದೆ. ಹಾಗಾಗಿ ನಾವು ನಮ್ಮ ಪ್ರಣಾಳಿಕೆಯಲ್ಲಿ ಮಂಡಕ್ಕಿ ಭಟ್ಟಿ ಪ್ರದೇಶದ ಬಗ್ಗೆ ಪ್ರಸ್ತಾಪಿಸಿಲ್ಲ. ನಾವು ಹೇಳುವುದಿಲ್ಲ, ಮಾಡಿ ತೋರಿಸುತ್ತೇವೆ. 1994 ರಿಂದಲೂ ಅಪ್ಪ-ಮಕ್ಕಳು ಶಾಸಕರು, ಸಚಿವರು ಆಗಿದ್ದಾರೆ. ಆದರೂ, ದಾವಣಗೆರೆಯ ಸಮಗ್ರ ಅಭಿವೃದ್ಧಿ ಆಗಿಲ್ಲ. ಬಿಜೆಪಿಯಲ್ಲಿ ಎಲ್ಲರೂ ಒಂದಾಗಿ, ಒಗ್ಗಟ್ಟಾಗಿದ್ದೇವೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ. 8ಕ್ಕೆ 8 ಕ್ಷೇತ್ರ ಗೆಲ್ಲುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌.ಎನ್‌. ಶಿವಕುಮಾರ್‌, ಸಿ. ರಮೇಶ್‌ನಾಯ್ಕ, ಏಕನಾಥ್‌ ರಾಯ್ಕರ್‌, ಕೆ.ಹೇಮಂತ್‌ಕುಮಾರ್‌, ಎಚ್‌.ಎಸ್‌. ಲಿಂಗರಾಜ್‌, ಎನ್‌. ರಾಜಶೇಖರ್‌, ಬಸವರಾಜ್‌, ಧನುಶ್‌ ರೆಡ್ಡಿ, ಟಿಂಕರ್‌ ಮಂಜಣ್ಣ, ಶಿವನಗೌಡ ಪಾಟೀಲ್‌, ರಾಘವೇಂದ್ರ ಇತರರು ಇದ್ದರು. 

ಮತದಾನ ಸಮೀಪಿಸುತ್ತಲೇ ಪ್ರಚಾರ ಜೋರು
ದಾವಣಗೆರೆ:
ವಿಧಾನಸಭಾ ಚುನಾವಣೆಯ ನಿರ್ಣಾಯಕ ದಿನ ಹತ್ತಿರವಾಗುತ್ತಲೇ ರಾಜಕೀಯ ಪಕ್ಷದ ನಾಯಕರು, ಕಾರ್ಯಕರ್ತರು ಎಡೆಬಿಡದೆ ಕೆಲಸ ಮಾಡುತ್ತಿದ್ದಾರೆ. ಮತದಾನಕ್ಕೆ ಇನ್ನೈದು ದಿನ ಮಾತ್ರ ಬಾಕಿ ಉಳಿದಿರುವಂತೆ ಸೋಮವಾರ ಜಿಲ್ಲೆಯಲ್ಲಿ ಭರ್ಜರಿ ಪ್ರಚಾರ ನಡೆಯಿತು.

ಹರಪನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭರ್ಜರಿ ರೋಡ್‌ ಶೋ ನಡೆಸಿ, ಮತಬೇಟೆ ನಡೆಸಿದರು. ಕಾಂಗ್ರೆಸ್‌ ಅಭ್ಯರ್ಥಿ ಕುಂಚೂರು ಗ್ರಾಮ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು. ಜೆಡಿಎಸ್‌ ಅಭ್ಯರ್ಥಿ ಕೊಟ್ರೇಶ್‌ ಕೆ. ಕಲ್ಲಹಳ್ಳಿ ಭಾಗದಲ್ಲಿ ಪ್ರಚಾರ ಕೈಗೊಂಡರು. ಇತ್ತ ದಾವಣಗೆರೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಚುನಾವಣೆಯ ಜಿಲ್ಲಾ ಪ್ರಣಾಳಿಕೆ ಬಿಡುಗಡೆ ಮಾಡಿತು. ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಪ್ರಣಾಳಿಕೆ ಬಿಡುಗಡೆ ಮಾಡಿದರು.

ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌. ಎ. ರವೀಂದ್ರನಾಥ್‌ ಕುಂದುವಾಡ, ಶಂಕರ್‌ ಮಿಲ್‌ ಭಾಗದಲ್ಲಿ ಪ್ರಚಾರ ನಡೆಸಿದರು. ಅತೃಪ್ತ ಕಾಂಗ್ರೆಸ್‌ ಕಾರ್ಯಕರ್ತರನ್ನು ತಮ್ಮೆಡೆ ಸೆಳೆದುಕೊಂಡರು. 

ಮಾಯಕೊಂಡ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಸ್‌. ಬಸವರಾಜ ಕೊಡಗನೂರು, ಕೆಳವೂರು, ಅತ್ತಿಗೆರೆ, ರಾಮಗೊಂಡನಹಳ್ಳಿಯಲ್ಲಿ ಪ್ರಚಾರ ಕೈಗೊಂಡರು. ಹರಿಹರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಪಿ. ಹರೀಶ್‌ ಮರಾಠಗಲ್ಲಿ, ದೊಡ್ಡಬೀದಿ, ತೆಗ್ಗಿನಕೇರಿ, ಹೊಸಪೇಟೆ ಬೀದಿ, ಕುಂಬಾರ ಓಣಿ ಮುಂತಾದ ಕಡೆ ಪ್ರಚಾರ ಕೈಗೊಂಡರು.

ಹೊನ್ನಾಳಿಯ ಬಿಜೆಪಿ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಪಟ್ಟಣ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡರೆ ಕಾಂಗ್ರೆಸ್‌ ಅಭ್ಯರ್ಥಿ ಡಿ.ಜಿ. ಶಾಂತನಗೌಡ ಚಿನ್ನಿಕಟ್ಟೆ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಾಂತರ ಪ್ರದೇಶದಲ್ಲಿ ಮತಯಾಚನೆ ಮಾಡಿದರು. ಇತ್ತ ಅಧಿಕಾರಿಗಳು ಸಹ ಚುನಾವಣೆಯ ತಯಾರಿಯಲ್ಲಿ ದಿನಪೂರ್ತಿ ಬ್ಯುಸಿಯಾಗಿದ್ದರು. ಚುನಾವಣಾ ಸಿಬ್ಬಂದಿಗೆ ಇವಿಎಂ ತರಬೇತಿ ನೀಡಲಾಯಿತು. ಇದರ ಜೊತೆಗೆ ಮತದಾನ ಜಾಗೃತಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next