ಬೆಂಗಳೂರು: ವಿಧಾನ ಮಂಡಲ ಕಲಾಪ, ಬಜೆಟ್ ಪೂರ್ವ ಸಭೆಗಳ ಗಡಿಬಿಡಿ ಮಧ್ಯೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಕೆಲಹೊತ್ತು ರಿಲ್ಯಾಕ್ಸ್ ಆಗಿ ಕನ್ನಡದ ಹಳೆಯ ಸಿನಿಮಾ ಹಾಡುಗಳ ಮೆಲುಕು ಹಾಕಿದರು. ಫೇಮಸ್ ಡೈಲಾಗ್‌ಗಳನ್ನು ಕೇಳಿ ಖುಷಿಪಟ್ಟರು. ಇದಕ್ಕೆ ವೇದಿಕೆ ಕಲ್ಪಿಸಿದ್ದು ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ ನಿರ್ಮಾಣಗೊಂಡ ಕನ್ನಡ ಚಲನಚಿತ್ರ ಕಲಾವಿದರ ಸಂಘದ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ.
ಕಟ್ಟಡ ಉದ್ಘಾಟಿಸಿದ ಮುಖ್ಯಮಂತ್ರಿಗಳು ನಾಲ್ಕನೇ ಮಹಡಿಯಲ್ಲಿರುವ ಮಿನಿ ಥಿಯೇಟರ್‌ನಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರೊಂದಿಗೆ ಡಾ.ರಾಜ್‌ಕುಮಾರ್ ಅವರ ಕಸ್ತೂರಿ ನಿವಾಸ ಚಿತ್ರದ “ಆಡಿಸಿ ನೋಡು ಬೀಳಿಸಿ ನೋಡು ಉರುಳಿಹೋಗದು…’, “ನೀ ಬಂದು ನಿಂತಾಗ ನಿಂತು ನೀ ನಕ್ಕಾಗ…’, ಅಂಬರೀಷ್ ಅವರ ವೀರಪರಂಪರೆ ಚಿತ್ರದ “ನನ್ನ ಮಣ್ಣಿದು…’ ಸೇರಿದಂತೆ ಎಂದೂಮರೆಯದ ಹಾಡುಗಳಿಗೆ ಕಿವಿಯಾದರು.
ಅಷ್ಟೇ ಅಲ್ಲ, ಡಾ.ರಾಜ್ ಅವರ “ಮಯೂರ’, ಶಂಕರ್‌ನಾಗ್ ಅವರ “ಸಾಂಗ್ಲಿಯಾನ’, ವಿಷ್ಣುವರ್ಧನ್ ಅವರ “ಕೋಟಿಗೊಬ್ಬ’, ಟೈಗರ್ ಪ್ರಭಾಕರ್ ಸೇರಿದಂತೆ ಮತ್ತಿತರ ಮರೆಯಾದ ಕಲಾವಿದರ ಪ್ರಸಿದ್ಧ ಡೈಲಾಗ್‌ಗಳನ್ನು ಆಲಿಸಿದರು. ಸುಮಾರು ಅರ್ಧ ಗಂಟೆ ಮುಖ್ಯಮಂತ್ರಿ ಕನ್ನಡ ಚಿತ್ರರಂಗದ ಕಲಾವಿದರೊಂದಿಗೆ ಕಾಲಕಳೆದರು.
ಈ ವೇಳೆ ನಟರಾದ ಅಂಬರೀಷ್, ದ್ವಾರಕೀಶ್, ಬಿ. ಸರೋಜಾದೇವಿ, ದೊಡ್ಡಣ್ಣ, ಜೈಜಗದೀಶ್, ಸುಂದರ್ ರಾಜ್, ಪ್ರಮೀಳಾ ಜೋಷಾಯ್, ನಿರ್ದೇಶಕ ರಾಜೇಂದ್ರಬಾಬು, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ದುನಿಯಾ ವಿಜಯ್ ಸೇರಿದಂತೆ ಮತ್ತಿತರರು ಸಾಥ್ ನೀಡಿದರು.
“ಕನಸು ನನಸಾಗಿದ್ದು ಖುಷಿ ತಂದಿದೆ’: ಕಾರ್ಯಕ್ರಮದ ನಂತರ ಮಾತನಾಡಿದ ನಟ ಅಂಬರೀಷ್, “ಡಾ.ರಾಜ್‌ಕುಮಾರ್ ಹೆಸರಿನಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದ್ದು, ಬಹುದಿನಗಳ ಕನಸು ನನಸಾಗಿದ್ದು ತುಂಬಾ ಸಂತೋಷವಾಗಿದೆ. ಇದು ಎಲ್ಲ ಕಲಾವಿದರಿಗೆ ಅರ್ಪಣೆ. ಮುಂಬರುವ ಕಲಾವಿದರಿಗೆ ಇದು ಅನುಕೂಲ ಆಗಲಿದೆ’. ಸದ್ಯ ನಾಲ್ಕನೇ ಮಹಡಿಯಲ್ಲಿ ಥಿಯೇಟರ್ ಮಾತ್ರ ನಿರ್ಮಿಸಲಾಗಿದೆ.
ಕೆಳಗಡೆ ಮುಂದಿನ ದಿನಗಳಲ್ಲಿ ಜಿಮ್, ಯೋಗ, ನಟನೆ ಮತ್ತಿತರ ಸೌಲಭ್ಯಗಳು ಇಲ್ಲಿ ಇರಲಿವೆ. ಇದನ್ನು ಉಪಯೋಗಿಸಿಕೊಂಡು ಕಲಾವಿದರು ಬೆಳೆಯಲಿ. ಇದರ ಹಿಂದೆ ಇದಕ್ಕೆ ಎಲ್ಲರ ಶ್ರಮ ಇದೆ. ಅದರಲ್ಲೂ ದೊಡ್ಡಣ್ಣ ಮತ್ತು ರಾಕ್‌ಲೈನ್ ವೆಂಕಟೇಶ್ ಅವರ ಶ್ರಮ ಹೆಚ್ಚಿದೆ. ಇದಕ್ಕೆ ಚಿತ್ರರಂಗ ಅವರಿಗೆ ಋಣಿಯಾಗಿರುತ್ತದೆ ಎಂದು ಸ್ಮರಿಸಿದರು.