Advertisement

ಐಸಿಸಿ ಕ್ರಿಕೆಟ್‌ ಕೂಟಗಳಲ್ಲಿ ಹಲವು ಬದಲಾವಣೆ

12:15 AM Jun 03, 2021 | Team Udayavani |

ದುಬಾೖ : ಐಸಿಸಿ ಮಂಡಳಿ ಸಭೆಯಲ್ಲಿ ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮುಂದಿನ 2027 ಮತ್ತು 2031 ಆವೃತ್ತಿಗಳ ಪುರುಷರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ತಂಡಗಳ ಸಂಖ್ಯೆಯನ್ನು 14ಕ್ಕೆ ಏರಿಸಿದ್ದು, ಪುರುಷರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ 20 ತಂಡಗಳಿಗೆ ಅವಕಾಶ ನೀಡಲು ನಿರ್ಧರಿಸಿದ್ದು ಇವುಗಳಲ್ಲಿ ಪ್ರಮುಖವಾದುದು. ಹಾಗೆಯೇ 2024ರಿಂದ 2030ರ ವರೆಗೆ ಪ್ರತೀ ಎರಡು ವರ್ಷಗಳಿಗೊಮ್ಮೆ ಟಿ20 ವಿಶ್ವಕಪ್‌ ಟೂರ್ನಿ ನಡೆಸುವ ಯೋಜನೆಯನ್ನೂ ಐಸಿಸಿ ಪ್ರಕಟಿಸಿದೆ.

Advertisement

2027 ಮತ್ತು 2031ರ ಏಕದಿನ ವಿಶ್ವಕಪ್‌ಗ್ಳಲ್ಲಿ ಆಡುವ ತಂಡಗಳ ಸಂಖ್ಯೆ 10ರಿಂದ 14ಕ್ಕೆ ಏರಿಕೆಯಾಗಲಿದೆ. ಇದರಿಂದ ಒಟ್ಟು ಪಂದ್ಯಗಳ ಸಂಖ್ಯೆ 54ಕ್ಕೆ ಏರಲಿವೆ. ಆದರೆ 2023ರ ವಿಶ್ವಕಪ್‌ನಲ್ಲಿ ಹತ್ತೇ ತಂಡಗಳು ಆಡಲಿವೆ. ಇನ್ನು 2024, 2026, 2028 ಮತ್ತು 2030ರ ಟಿ20 ವಿಶ್ವಕಪ್‌ಗ್ಳಲ್ಲಿ 20 ತಂಡಗಳು ಭಾಗವಹಿಸಲಿದ್ದು, ತಲಾ 55 ಪಂದ್ಯಗಳ ಟೂರ್ನಿ ಇದಾಗಿರಲಿದೆ.

8 ವರ್ಷ ಬಳಿಕ ಚಾಂಪಿಯನ್ಸ್‌ ಟ್ರೋಫಿ
ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯನ್ನು 8 ವರ್ಷಗಳ ಬಳಿಕ ಮರಳಿ ಆರಂಭಿಸಲು ನಿರ್ಧರಿಸಲಾಗಿದೆ. ಅದರಂತೆ 2025 ಮತ್ತು 2029ರಲ್ಲಿ ಮತ್ತೆ ಈ ಟೂರ್ನಿ ನಡೆಯಲಿದ್ದು, ಅಗ್ರ 8 ರ್‍ಯಾಂಕಿಂಗ್‌ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ. 2017ರಲ್ಲಿ ಕೊನೆಯ ಬಾರಿ ಈ ಕೂಟ ನಡೆದಿತ್ತು. ಇದು 15 ಪಂದ್ಯಗಳ ಟೂರ್ನಿಯಾಗಿದೆ.

ಉಳಿದಂತೆ ಮುಂದಿನ 8 ವರ್ಷಗಳ ಆವೃತ್ತದಲ್ಲಿ ಇನ್ನೂ 4 ಟೆಸ್ಟ್‌ ಚಾಂಪಿಯನ್‌ಶಿಪ್‌ ನಡೆಯಲಿವೆ ಎಂದು ಐಸಿಸಿ ತಿಳಿಸಿದೆ. ಈ ಟೂರ್ನಿಗಳ ಆತಿಥೇಯ ದೇಶಗಳನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಐಸಿಸಿ ತಿಳಿಸಿದೆ.

ಐಸಿಸಿ ಸಭೆಯ ಮುಖ್ಯಾಂಶಗಳು
1. 2024ರಿಂದ 2030ರ ನಡುವೆ ಎರಡು ವರ್ಷಕ್ಕೊಮ್ಮೆ ಟಿ20 ವಿಶ್ವಕಪ್‌ ಆಯೋಜನೆ. ತಂಡಗಳ ಸಂಖ್ಯೆ 20ಕ್ಕೆ ಏರಿಕೆ.
2. 2025 ಮತ್ತು 2029ರಲ್ಲಿ 8 ತಂಡಗಳ ಚಾಂಪಿಯನ್ಸ್‌ ಟ್ರೋಫಿ ಏಕದಿನ ಕೂಟದ ಆಯೋಜನೆ.
3. 2027 ಮತ್ತು 2031ರ ಏಕದಿನ ವಿಶ್ವಕಪ್‌ನಲ್ಲಿ ತಂಡಗಳ ಸಂಖ್ಯೆ 10ರಿಂದ 14ಕ್ಕೆ ಏರಿಕೆ.
4. 2023ರಿಂದ 2031ರ ವರೆಗೆ 8 ವರ್ಷಗಳಲ್ಲಿ 4 ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಆಯೋಜನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next