Advertisement
ಆಹಾರವನ್ನು ಬೇಯಿಸಿ ತಿಂದರೆ ಅದರ ರುಚಿ ಉತ್ತಮವಾಗುತ್ತದೆ. ಆದರೆ ಕೆಲವು ಪೌಷ್ಟಿಕಾಂಶ ಕಳೆದು ಹೋಗುತ್ತದೆ. ಕಚ್ಚಾ ಅಥವಾ ಹಸಿ ಆಹಾರಗಳ ಸೇವನೆ ಉತ್ತಮ. ಆದರೆ ಎಲ್ಲರಿಗೂ ಅಲ್ಲ. ಜತೆಗೆ ಈಗಿನ ಪರಿಸ್ಥಿತಿ ಯಲ್ಲಿ ಬೇಯಿಸಿ ತಿನ್ನುವ ಆಹಾರವೇ ಹೆಚ್ಚು ಸುರಕ್ಷಿತ.
Related Articles
Advertisement
ಹಸಿ ಆಹಾರಗಳು ಜೀರ್ಣಾಂಗ ವ್ಯವಸ್ಥೆಗೆ ಒತ್ತಡ ಉಂಟು ಮಾಡುತ್ತದೆ. ಆದರೆ ಬೇಯಿಸಿದ ಆಹಾರ ಸೇವನೆಯು ಕರುಳಿಗೆ ಸಹಾಯ ಮಾಡುತ್ತದೆ. ಹೊಟ್ಟೆ ಉಬ್ಬುವಿಕೆ, ಗ್ಯಾಸ್ಟ್ರಿಕ್, ಅಜೀರ್ಣ, ಅನಿಯಮಿತ ಕರುಳಿನ ಚಲನೆ, ಮಲಬದ್ಧತೆ, ಪೋಷಕಾಂಶಗಳ ಕೊರತೆ ಇದ್ದರೆ ಹೆಚ್ಚು ಬೇಯಿಸಿದ ಆಹಾರ ಸೇವನೆ ಉತ್ತಮ. ಆಹಾರವನ್ನು ಬೇಯಿಸುವುದರಿಂದ ಅದರಲ್ಲಿರುವ ನಾರಿನಾಂಶವು ದೇಹಕ್ಕೆ ಪೋಷಕಾಂಶ ಹೀರಲು ಸಹಾಯ ಮಾಡುತ್ತದೆ.
ಕೆಲವು ತರಕಾರಿಗಳಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಆಹಾರ ಬೇಯಿಸಿದ ಅನಂತರ ಸೇರಿಕೊಳ್ಳುತ್ತದೆ. ಉದಾ- ಶತಾವರಿಯಲ್ಲಿರುವ ಫೆರುಲಿಕ್ ಆಮ್ಲ, ಕಿತ್ತಳೆ, ಕೆಂಪು ಬಣ್ಣದ ತರಕಾರಿಗಳಲ್ಲಿರುವ ಬೀಟಾ ಕ್ಯಾರೋಟಿನ್. ಆಹಾರವನ್ನು ಬೇಯಿಸುವುದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾ, ರೋಗಕಾರಕ ಅಂಶಗಳು ನಾಶವಾಗುತ್ತವೆ.
ಬೇಯಿಸಿದ ಆಹಾರವು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಯಾಕೆಂದರೆ ಮನೆಯೂಟ ಎನ್ನುವುದು ಬೌದ್ಧಿಕವಾಗಿ ನಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಇದರಿಂದ ಆಹಾರ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮೂಡುತ್ತದೆ. ಮನಸ್ಸನ್ನು ಸಂತೋಷವಾಗಿರಿಸುತ್ತದೆ.
ಹಸಿ ಆಹಾರ: ಹಸಿ ತರಕಾರಿಗಳ ಸೇವನೆ ಉತ್ತಮ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಹಣ್ಣು, ತರಕಾರಿಗಳಿಗೂ ರಾಸಾಯನಿಕ ಸಿಂಪಡಿಸಿಯೇ ಬೆಳೆಸಲಾಗುತ್ತದೆ ಮತ್ತು ಸಂಗ್ರಹಿಸಲಾಗುತ್ತದೆ. ಹೀಗಾಗಿ ಅವುಗಳನ್ನು ಚೆನ್ನಾಗಿ ಸ್ವತ್ಛಗೊಳಿಸಿಯೇ ತಿನ್ನಬೇಕು. ಇಲ್ಲವಾದರೆ ಕ್ಯಾನ್ಸರ್ ಸಂಬಂಧಿ ಕಾಯಿಲೆಗಳಿಗೆ ನಾವು ಆಹ್ವಾನ ನೀಡಿದಂತಾಗುತ್ತದೆ. ಈ ಬಗ್ಗೆ ಆತಂಕವಿರುವು ದರಿಂದ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಸೊಪ್ಪು, ತರಕಾರಿಗಳನ್ನು ಬೇಯಿಸಿ ತಿನ್ನಲು ಸಲಹೆ ನೀಡುತ್ತೇವೆ.
ಟೊಮೆಟೋ, ಕ್ಯಾರೆಟ್, ಮೂಲಂಗಿ, ಮುಳ್ಳು ಸೌತೆ, ಕೆಲವೊಂದು ಸೊಪ್ಪನ್ನು ಹಸಿಯಾಗಿ ತಿನ್ನಬಹುದು. ಆದರೆ ಅದನ್ನು ಆದಷ್ಟು ಸ್ವತ್ಛಗೊಳಿಸುವುದು ಮುಖ್ಯವಾಗುತ್ತದೆ. ಅದಕ್ಕಾಗಿ ತಂದ ಬಳಿಕ ಸ್ವಲ್ಪ ಹೊತ್ತು ಉಗುರು ಬೆಚ್ಚಗಿನ ಉಪ್ಪು ನೀರಿನಲ್ಲಿ ನೆನೆಹಾಕಿ ಬಳಿಕ ಚೆನ್ನಾಗಿ ತೊಳೆದು ಉಪಯೋಗಿಸುವುದು ಒಳ್ಳೆಯದು. ತರಕಾರಿಗಳನ್ನು ಸಿಪ್ಪೆ ಸಮೇತ ತಿನ್ನಬೇಕು ಎಂದು ಹೇಳುತ್ತೇವೆ. ಆದರೆ ಈಗ ಅದನ್ನು ಹೇಳುವುದು ಅಸಾಧ್ಯ. ಯಾಕೆಂದರೆ ಇದರಲ್ಲೂ ರಾಸಾಯನಿಕ ಸೇರಿರಬಹುದು. ಅದಕ್ಕಾಗಿ ತರಕಾರಿಗಳ ತೊಟ್ಟು, ತೆಳ್ಳಗೆ ಸಿಪ್ಪೆ ತೆಗೆದು ಬಳಿಕ ಹಸಿ ತರಕಾರಿಗಳನ್ನು ಬಳಸುವುದು ಉತ್ತಮ.
ಪ್ರಯೋಜನಗಳು
ಹಸಿ ಆಹಾರವು ಕೆಲವು ಜೀವಂತ ಮತ್ತು ಜೀರ್ಣಕಾರಿ ಕಿಣ್ವಗಳನ್ನು ಹೊಂದಿದ್ದು ಅದು ಆಹಾರದ ಸಂಪೂರ್ಣ ಪೋಷಕಾಂಶ ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಹಸಿ ಆಹಾರ ಸೇವನೆಯಿಂದ ಬಹುಬೇಗನೆ ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ. ಇದರಲ್ಲಿರುವ ಫೈಬರ್ ಅಂಶ ದೇಹದ ತೂಕವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.
ಹೆಚ್ಚು ಹೊತ್ತು ಆಹಾರ ಅಗಿಯಬೇಕಿರುವುದರಿಂದ ನಾವು ಕಡಿಮೆ ತಿನ್ನುತ್ತೇವೆ ಮತ್ತು ಹೆಚ್ಚು ಸಮಯ ದವರೆಗೆ ವಿಸ್ತರಿಸುತ್ತೇವೆ. ಇದು ಜೀರ್ಣಾಂಗ ವ್ಯವಸ್ಥೆ ಪ್ರಯೋಜನಕಾರಿಯಾಗಿದೆ. ಆಹಾರ ಅಗಿಯುವಾಗ ಹೆಚ್ಚು ಸಮಯ ತೆಗೆದುಕೊಂಡರೆ ಸಾಕಷ್ಟು ತಿಂದ ಅನುಭವವಾಗುತ್ತದೆ ಮತ್ತು ಹೊಟ್ಟೆ ತುಂಬಿದೆ ಎಂಬ ಸಂಕೇತ ಮೆದುಳಿಗೆ ಸಿಗುತ್ತದೆ.
ಹಸಿ ಆಹಾರದಿಂದ ಸಾಕಷ್ಟು ಪೋಷಕಾಂಶಗಳು ದೊರೆಯುತ್ತದೆ. ಉದಾ- ಫೈಟೊನ್ಯೂಟ್ರಿಯೆಂಟ್ಸ್, ಆ್ಯಂಟಿ ಆಕ್ಸಿಡೆಂಟ್ಸ್, ಕಿಣ್ವಗಳು, ನೀರಿನಲ್ಲಿ ಕರಗುವ ಜೀವಸತ್ವಗಳು- ಬಿ, ಸಿ ಇತ್ಯಾದಿ.
ಕೆಲವು ಆಹಾರಗಳನ್ನು ಬೇಯಿಸಿಯೇ ತಿನ್ನಬೇಕು. ಇನ್ನು ಕೆಲವನ್ನು ಹಸಿಯಾಗಿಯೇ ತಿನ್ನಬೇಕು. ಉದಾ- ಆಲೂಗಡ್ಡೆ ಬೇಯಿಸಿ ತಿಂದರೆ ಉತ್ತಮ. ಅದೇ ರೀತಿ ಕ್ಯಾರೆಟ್ ಹಸಿಯಾಗಿ ತಿನ್ನುವುದು ಒಳ್ಳೆಯದು. ಯಾಕೆಂದರೆ ಕ್ಯಾರೆಟ್ ಬೇಯಿಸಿದಾಗ ಅದರಲ್ಲಿ ಸಕ್ಕರೆ ಅಂಶ ಅಧಿಕವಾಗುತ್ತದೆ. ಹಸಿ ಕ್ಯಾರೆಟ್ ಅನ್ನು ಮಧುಮೇಹಿಗಳೂ ಸೇವಿಸಬಹುದು. ಇನ್ನು ಯಾವ ಸಮಯದಲ್ಲಿ ಯಾವ ಆಹಾರ ಸೇವನೆ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ.
ಒಂದೇ ರೀತಿಯ ಆಹಾರವನ್ನು ಯಾರೂ ಇಷ್ಟಪಡು ವುದಿಲ್ಲ. ಅದಕ್ಕಾಗಿ ಆಹಾರದಲ್ಲಿ ವೈವಿಧ್ಯತೆ ಇರಲಿ. ಬೇಯಿಸಿದ ಅಥವಾ ಹಸಿ ಆಹಾರ ತನ್ನದೇ ಆದ ಗುಣ ಸ್ವಭಾವವನ್ನು ಹೊಂದಿದ್ದು, ಎರಡೂ ನಮ್ಮ ಆಹಾರ ಕ್ರಮಗಳೂ ನಮ್ಮ ಭಾಗವಾಗಿರಲಿ. ಇದರಿಂದ ಆರೋಗ್ಯ ವೃದ್ಧಿ ಸಾಧ್ಯ.
-ಡಾ| ಸುವರ್ಣ ಹೆಬ್ಟಾರ್ ,ಮುಖ್ಯಸ್ಥರು,
ಪಥ್ಯ ಆಹಾರ ವಿಭಾಗ,
ಕೆಎಂಸಿ ಮಣಿಪಾಲ