Advertisement

ಯೋಗ ಚಿಕಿತ್ಸೆಯಿಂದ ಹಲವು ರೋಗಗಳು ದೂರ

05:23 PM Sep 20, 2021 | Team Udayavani |

ಯೋಗ ಇಂದು ಸಾಗರ ದಾಟಿ ಬೆಳೆದಿದೆ. ಹಲವು ರಾಷ್ಟ್ರಗಳು ಯೋಗದ ಮಹತ್ವ ಅರಿತಿವೆ. ಯೋಗ ಥೆರಪಿ ಅಥವಾ ಯೋಗ ಚಿಕಿತ್ಸೆ ಹೆಚ್ಚು ಪ್ರಚಲಿತಕ್ಕೆ ಬಂದಿದೆ. ಯಾವುದೇ ಮಾತ್ರೆ, ಚುಚ್ಚುಮದ್ದುಗಳಿಲ್ಲದೆ ನೀಡುವ ಚಿಕಿತ್ಸೆ ಇದು. ಇದರಿಂದ ಅಡ್ಡ ಪರಿಣಾಮಗಳ ಭಯವಿಲ್ಲ. ಹಾಗಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದರತ್ತ ಮನಸ್ಸು ಮಾಡುತ್ತಿದ್ದಾರೆ.

Advertisement

ಮಾನವನ ಸಂರಚನಾತ್ಮಕ ವ್ಯವಸ್ಥೆಗಳಾದ ಭೌತಿಕ, ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಜೀವನ ಶೈಲಿಗಳ ಜತೆಗೆ ಸಾಮರಸ್ಯ ಸೃಷ್ಟಿಸುವುದೇ ಪ್ರಕೃತಿ ಚಿಕಿತ್ಸೆ ಅಥವಾ ಯೋಗ ಚಿಕಿತ್ಸೆ. ಆರೋಗ್ಯ ವೃದ್ಧಿಸಲು, ರೋಗರುಜಿನಗಳನ್ನು ತಡೆಗಟ್ಟಲು ಮತ್ತು
ಶಮನಗೊಳಿಸಲು, ಆರೋಗ್ಯವಂತ ಬದುಕು ಪಡೆಯಲು ಈ ಚಿಕಿತ್ಸಾ ಪದ್ಧತಿ ಸಹಾಯಕ. ಯೋಗ ಶಿಕ್ಷಕರಿಗೆ, ಚಿಕಿತ್ಸಕರಿಗೆ ಇಂದು ಭಾರೀ ಬೇಡಿಕೆ ಇದೆ.

ಯೋಗ ಚಿಕಿತ್ಸೆಯ ಲಾಭಗಳು
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಯಲ್ಲಿ ಹಲವು ಕಾಯಿಲೆಗಳಿಗೆ ಪರಿಹಾರವಿದೆ. ಪ್ರಮುಖವಾಗಿ ಚರ್ಮದ ಅಲರ್ಜಿ, ಅಸ್ತಮಾ, ರಕ್ತಹೀನತೆ, ಆತಂಕ, ಖನ್ನತೆ, ಹೊಟ್ಟೆಯುಬ್ಬರ, ಬೊಜ್ಜು, ಅಧಿಕ ಮತ್ತು ಕಡಿಮೆ ರಕ್ತದೊತ್ತಡ, ಜಠರದ ಉರಿ, ಮಧುಮೇಹ, ಪಾರ್ಶ್ವವಾಯು, ಸೋರಿಯಾಸಿಸ್‌, ಅಸ್ಥಿ ಸಂಧಿವಾತ, ಸಂಧಿವಾತ, ಗರ್ಭದ ಸ್ಪಾಂಡಿಲೋಸಿಸ್‌, ಮಲಬದ್ಧತೆ, ಚರ್ಮದ ಉರಿಯೂತ, ಅಧಿಕ ಆಮ್ಲಿಯತೆ, ಸೊಂಟ ನೋವು, ನಿದ್ರಾಹೀನತೆ, ಬೆನ್ನು ನೋವು, ಪಿಸಿಒಡಿ, ಮುಟ್ಟಿನ ತೊಂದರೆ, ಬಂಜೆತನ, ಮೈಗ್ರೇನ್‌ ತಲೆನೋವು, ಥೈರಾಯ್ಡ, ರಕ್ತನಾಳಗಳ ಸಮಸ್ಯೆಗಳನ್ನು ಪರಿಹರಿಸಬಹುದು ಎನ್ನುತ್ತಾರೆ ಪರಿಣತರು.

ಆನ್‌ಲೈನ್‌ ಯೋಗ
ಕೊರೊನಾ ಸಾಂಕ್ರಮಿಕ ವಿಶ್ವದಾದ್ಯಂತ ಕಾಡಲಾರಂಭಿಸಿದ ಮೇಲೆ ಆನ್‌ಲೈನ್‌ ಯೋಗ ಹೆಚ್ಚು ಮಹತ್ವ ಪಡೆದಿದೆ. ಹಲವು ಯೋಗ ಕೇಂದ್ರಗಳು, ಯೋಗ ಶಿಕ್ಷಕರು ಆನ್‌ಲೈನ್‌ ಮೂಲಕ ಯೋಗ ತರಗತಿ ನಡೆಸುತ್ತಿದ್ದಾರೆ. ಈ ಮೂಲಕ ದೇಶ-ವಿದೇಶಗಳಿಂದ ಶಿಕ್ಷಣಾರ್ಥಿಗಳು ಯೋಗ ಕಲಿಯಲಾರಂಭಿಸಿದ್ದಾರೆ. ಕೊರೊನಾ ವೈರಸ್‌ ಹರಡುವಿಕೆಗೆ ಕಡಿವಾಣ ಹಾಕಲು ಜಾರಿಗೊಳಿಸಲಾದ ಲಾಕ್‌ಡೌನ್‌ನ ಬಳಿಕ ಈ ಆನ್‌ಲೈನ್‌ ಯೋಗ ತರಗತಿಗಳು ಮತ್ತಷ್ಟು ಜನಪ್ರಿಯತೆಯನ್ನು ಪಡೆದಿವೆ.

ಆದರೆ ಪರಿಣತ ಯೋಗ ತಜ್ಞರು ಯೋಗ ಕಲಿಕೆಯ ಈ ಆಧುನಿಕ ವಿಧಾನವನ್ನು ಒಪ್ಪುವುದಿಲ್ಲ. ಯೋಗ ಕೇವಲ ದೈಹಿಕ ಕಸರತ್ತಾಗಿರದೆ ಅತ್ಯಂತ ಸೂಕ್ಷ್ಮ ಚಿಕಿತ್ಸಾ ಮತ್ತು ಅಭ್ಯಾಸ ಕ್ರಮವಾಗಿರುವುದರಿಂದ ಆನ್‌ ಲೈನ್‌ ತರಗತಿಗಳ ಮೂಲಕ ಯೋಗಾಸನ, ಮುದ್ರೆ, ಧ್ಯಾನಗಳ ಕಲಿಕೆ ಅಷ್ಟು ಸಮಂಜಸವಲ್ಲ.

Advertisement

ಮಾತ್ರವಲ್ಲದೆ ಯೋಗ ವಿಜ್ಞಾನದ ಅಡಿಪಾಯಕ್ಕೆ ಸಂಚಕಾರ ತಂದೊಡ್ಡೀತು ಎಂಬ ಆತಂಕ ಅವರದ್ದು. ಪ್ರಾಣಾಯಾಮವನ್ನು ಅಭ್ಯಾಸ ಮಾಡುವಾಗ ಉಸಿರಾಟದ ಏರಿಳಿತದ ಸಂದರ್ಭದಲ್ಲಿ ಪ್ರತಿ ಸೆಕೆಂಡಿಗೂ ಮಹತ್ವ ಇದೆ. ಯೋಗ ಗುರು ಅಥವಾ ಪರಿಣತರಿಲ್ಲದೆ ಆಸನ, ಮುದ್ರೆಗಳ ಕಲಿಕೆ ಸೂಕ್ತ ವಲ್ಲ ಎಂಬುದು ಯೋಗ ತಜ್ಞರ ಸ್ಪಷ್ಟ ನುಡಿ.

Advertisement

Udayavani is now on Telegram. Click here to join our channel and stay updated with the latest news.

Next