Advertisement

ಗ್ರಾಮೀಣ ಗ್ರಂಥಾಲಯ ತೆರೆಯುವುದೇ ಅಪರೂಪ

01:04 PM Oct 24, 2019 | Naveen |

ಮಾನ್ವಿ: ಪಟ್ಟಣದ ಟಿಎಪಿಸಿಎಂಎಸ್‌ ಹತ್ತಿರ ಇರುವ ಕೇಂದ್ರ ಗ್ರಂಥಾಲಯ ವಿದ್ಯಾರ್ಥಿಗಳಿಗೆ, ಓದುಗರಿಗೆ ಅತ್ಯಂತ ಉಪಯುಕ್ತವಾಗಿದೆ. ಆದರೆ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಗ್ರಾಪಂ ಗ್ರಂಥಾಲಯಗಳು ಮಾತ್ರ ತೆರೆಯುತ್ತಿಲ್ಲ. ಇದರಿಂದಾಗಿ ಸರ್ಕಾರ ಒದಗಿಸುತ್ತಿರುವ ಪುಸ್ತಕಗಳು ನಿರುಪಯುಕ್ತವಾಗುತ್ತಿವೆ. ಪಟ್ಟಣದಲ್ಲಿ ನಾಲ್ಕು ಸೇರಿ ತಾಲೂಕಿನ 38 ಗ್ರಾಪಂಗಳ ಪೈಕಿ 25ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಗ್ರಂಥಾಲಯಗಳಿವೆ. ಆದರೆ ಪಟ್ಟಣದ ಟಿಎಪಿಸಿಎಂಎಸ್‌ ಹತ್ತಿರ ಇರುವ ಶಾಖಾ ಗ್ರಂಥಾಲಯ ಹೊರತುಪಡಿಸಿದರೆ ಪಟ್ಟಣದ ಯಾವೊಂದು ಗ್ರಂಥಾಲಯ ಸರಿಯಾಗಿ ತೆರೆಯುತ್ತಿಲ್ಲ.

Advertisement

ಕೆಲವು ಗ್ರಂಥಾಲಯಗಳ ಕಟ್ಟಡಗಳು ಪ್ರಗತಿಯಲ್ಲಿರುವ ಕಾರಣ ಮುಚ್ಚಲಾಗಿದೆ. ಇನ್ನೂ ಗ್ರಾಪಂಗಳ ಗ್ರಂಥಾಲಯಗಳು ತೆರೆಯದೆ ಇರುವುದರಿಂದ ಓದುಗರಿಂದ ದೂರ ಉಳಿದಿವೆ. ಅಲ್ಲದೆ ಗ್ರಾಪಂ ಗ್ರಂಥಾಲಯಗಳಿಗೆ ಸರಬರಾಜು ಆಗುವ ಪುಸ್ತಕಗಳು ಏನಾಗುತ್ತಿವೆ ಎಂಬ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಶಾಖಾ ಗ್ರಂಥಾಲಯ: ಪಟ್ಟಣದ ಟಿಎಪಿಸಿಎಂಎಸ್‌ ಹತ್ತಿರ ಇರುವ ಶಾಖಾ ಗ್ರಂಥಾಲಯ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ದಿನೇ ದಿನೇ ಓದುಗರನ್ನು ಆಕರ್ಷಿಸುತ್ತಿದೆ. ಗ್ರಂಥಾಲಯದಲ್ಲಿ ಕಾದಂಬರಿ, ಸಣ್ಣ ಕಥೆಗಳು, ಕಥೆಗಳು, ಗ್ರಂಥಗಳು, ಸಾಮಾನ್ಯ ಜ್ಞಾನ ಪುಸ್ತಕಗಳು, ಸ್ಪರ್ಧಾತ್ಮಕ ಪುಸ್ತಕಗಳು, ಆರೋಗ್ಯ, ಸಾಹಿತ್ಯ, ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಸಂಬಂಧಿಸಿದ ಪುಸ್ತಕಗಳು ಹಾಗೂ ಮಹಿಳಾ ಮತ್ತು ಮಕ್ಕಳ ಪುಸ್ತಕಗಳು ಸೇರಿದಂತೆ ಸುಮಾರು 36,933 ಪುಸ್ತಕಗಳಿವೆ. ಪ್ರತಿನಿತ್ಯ ರಾಜ್ಯ, ಪ್ರಾದೇಶಿಕ, ಜಿಲ್ಲಾ ಮಟ್ಟದ ದಿನಪತ್ರಿಕೆಗಳು ಸೇರಿ ಸುಮಾರು 25ಕ್ಕೂ ಹೆಚ್ಚು ಪತ್ರಿಕೆಗಳು ಬರುತ್ತವೆ. ಇಲ್ಲಿನ ಸಿಬ್ಬಂದಿ ಅತ್ಯಂತ ಅಚ್ಚುಕಟ್ಟಾಗಿ ಗ್ರಂಥಾಲಯನಿರ್ವಹಣೆ ಮಾಡುತ್ತಿದ್ದಾರೆ.

ಗೋಡೆಗಳ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಭಾವಚಿತ್ರ, ನಾಡಿನ
ಐತಿಹಾಸಿಕ ಸ್ಥಳಗಳ ಛಾಯಾಚಿತ್ರ, ದೇಶದ ಮಹಾನ್‌ ವ್ಯಕ್ತಿಗಳ ಭಾವಚಿತ್ರ ಹಾಕಲಾಗಿದೆ. ಪುಸ್ತಕಗಳನ್ನು ವಿಷಯವಾರು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಅಲ್ಲದೆ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ಸಂಬಂಧಿ ಸಿದ ಪುಸ್ತಕಗಳನ್ನು ಪ್ರತ್ಯೇಕವಾಗಿ ಇಡಲಾಗಿದೆ.

ಸೌಕರ್ಯ ಕೊರತೆ: ಆದರೆ ಗ್ರಂಥಾಲಯ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಕುಡಿಯುವ ನೀರಿಲ್ಲ. ನೀರಿನ ಲಭ್ಯತೆ ಇಲ್ಲದಿರುವುದರಿಂದ ಇರುವ ಶೌಚಾಲಯ ಬಳಸಲು ಆಗುತ್ತಿಲ್ಲ. ದಿನೇ ದಿನೇ ಓದುಗರ ಹಾಗೂ ಮಹಿಳಾ ಓದುಗರ ಸಂಖ್ಯೆ ಹೆಚ್ಚಾಗುತ್ತಿದೆ. ಗ್ರಂಥಾಲಯದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕಿದೆ.

Advertisement

ಇನ್ನೂ ಶಾಖಾ ಗ್ರಮಥಾಲಯಕ್ಕೆ ಆರ್ಥಿಕ ತೊಂದರೆ ಎದುರಾಗಿದೆ. ಪಟ್ಟಣದ ಪುರಸಭೆ ನೀಡಬೇಕಾದ ಹಣ ಬಾರದೆ ದಿನ ಪತ್ರಿಕೆ, ಮಾಸಪತ್ರಿಕೆಗಳ ಬಿಲ್‌ ಕಟ್ಟಲು ಆಗದ ಸ್ಥಿತಿ ಎದುರಿಸುತ್ತಿದೆ.

ಬಾರದ ಹಣ: ಪಟ್ಟಣದ ಪುರಸಭೆಯಿಂದ ಶಾಖಾ ಗ್ರಂಥಾಲಯಕ್ಕೆ 30 ಲಕ್ಷ ರೂ. ಹಣ ಬರಬೇಕಾಗಿದೆ. ಪುರಸಭೆ ಅ ಧಿಕಾರಿಗಳು ಮಾತ್ರ ಅನೇಕ ಬಾರಿ ಪತ್ರ ಬರೆದಿದ್ದರೂ ನೀಡುತ್ತಿಲ್ಲ. ಜಿಲ್ಲಾಧಿಕಾರಿ ಕಚೇರಿ ನಗರಾಭಿವೃದ್ಧಿ ಕೋಶದ ಯೋಜನಾ ಧಿಕಾರಿಗಳಿಂದಲೂ ಪತ್ರ ಹಾಕಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. 30 ಲಕ್ಷ ರೂ. ಪುರಸಭೆ ಗ್ರಂಥಾಲಯ ಕರ ಹೆಸರಿನಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣವಾಗಿದೆ.

ಗ್ರಂಥಾಲಯ ಅಭಿವೃದ್ಧಿಗೆ ನೀಡಲು ಹಿಂದೇಟು ಹಾಕಲಾಗುತ್ತಿದೆ. ಇದರಿಂದಾಗಿ ಪೀಠೊಪಕರಣ ಖರೀದಿಸಲು ಹಾಗೂ ಪತ್ರಿಕೆಗಳಿಗೆ ಬಿಲ್‌ ಪಾವತಿಸಲು ಹಣಕಾಸಿನ ತೊಂದರೆಯಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಗ್ರಂಥಾಲಯ ಕಚೇರಿ ಮುಖ್ಯ ಗ್ರಂಥಾಲಯ ಅಧಿಕಾರಿ ಎಂ.ಎಸ್‌. ರೆಬಿನಾಳ.

ಗ್ರಾಪಂ ಗ್ರಂಥಾಲಯಗಳು: ಇನ್ನು ಗ್ರಾಪಂ ಗ್ರಂಥಾಲಯಗಳ ಸ್ಥಿತಿ ಅಧೋಗತಿ. ಇಲ್ಲಿ ಗ್ರಂಥಪಾಲಕರು ತಮಗೆ ಇಚ್ಚೆ ಬಂದಂತೆ ವರ್ತಿಸುತ್ತಿದ್ದಾರೆ. ತಾಲೂಕಿನಲ್ಲಿ 38 ಗ್ರಾಪಂಗಳ ಪೈಕಿ 25ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಗ್ರಂಥಾಲಯಗಳಿದ್ದು, ತೆರೆಯುವುದು ಮಾತ್ರ ಅಪರೂಪ. ಮೇಲಾಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಪರಿಶೀಲನೆ ಮಾಡದೆ ಇರುವುದರಿಂದ ಅವ್ಯವಸ್ಥೆಗೆ ಕಾರಣವಾಗಿದೆ. ಕೆಲವು ಗ್ರಾಮಗಳಲ್ಲಿ ಗ್ರಂಥಾಲಯಗಳು ಇರುವುದೇ ಗೊತ್ತಿಲ್ಲ. ಆದರೂ ಪ್ರತಿ ವರ್ಷ ಸಾವಿರಾರು ಪುಸ್ತಕಗಳನ್ನು ಸರಬರಾಜು ಮಾಡಲಾಗುತ್ತಿದೆ. ಗ್ರಂಥಪಾಲಕರಿಗೆ ವೇತನ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ.

ಗ್ರಾಪಂಗಳಲ್ಲಿ ಸ್ಥಾಪಿಸಲಾದ ಗ್ರಂಥಾಲಯಗಳನ್ನು ಪಂಚಾಯತ ರಾಜ್‌ ಇಲಾಖೆಗೆ ನೀಡಲಾಗಿದ್ದು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಆದರೆ ಪಿಡಿಒಗಳು ಮಾತ್ರ ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಗ್ರಾಮೀಣ ಭಾಗದ ಗ್ರಂಥಾಲಯಗಳ ಬಗ್ಗೆ ಗಮನಹರಿಸಬೇಕು. ದೂರು ಬರುವವರೆಗೂ ಕಾಯದೆ
ಆಗಾಗ ಗ್ರಾಪಂ ಗ್ರಂಥಾಲಯಗಳನ್ನು ಪರಿಶೀಲಿಸಬೇಕು. ಸರಿಯಾಗಿ ನಿರ್ವಹಣೆ ಮಾಡದ ಗ್ರಂಥಪಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next