ಕುಂದಾಪುರ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮಣೂರು ಪೇಟೆಯ ಬಳಿಯ ಮನೆಯೊಂದರಲ್ಲಿದ್ದ ಒಂಟಿ ಮಹಿಳೆಯನ್ನು ಕೊಲೆ ಮಾಡಿ ಅವರ ಚಿನ್ನಾಭರಣಗಳನ್ನು ದೋಚಿದ ಪ್ರಕರಣದ ಆರೋಪಿ ಕುಂಭಾಶಿಯ ಪ್ರವೀಣ್ ಕೆ.ವಿ. (25) ಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಇದೇ ಪ್ರಕರಣದ ಇನ್ನೋರ್ವ ಆರೋಪಿ ನಿತಿನ್ ಆಚಾರ್ಯನನ್ನು ನ್ಯಾಯಾಧೀಶರು ಖುಲಾಸೆಗೊಳಿಸಿದ್ದಾರೆ.
ಮೃತ ಮಹಿಳೆಯ ದೂರದ ಸಂಬಂಧಿ ರಾಧಾಕೃಷ್ಣ ಉರಾಳ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬ್ರಹ್ಮಾವರದ ಅಂದಿನ ವೃತ್ತ ನಿರೀಕ್ಷಕ ಅರುಣ್ ಬಿ. ನಾಯಕ್ ಅವರು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಒಟ್ಟು 22 ಮಂದಿ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಾದ-ಪ್ರತಿವಾದವನ್ನು ಆಲಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ್ ಕೆ. ಅವರು ಪ್ರಮುಖ ಆರೋಪಿ ಪ್ರವೀಣ್‌ಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲ.ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಇನ್ನೋರ್ವನನ್ನು ಖುಲಾಸೆಗೊಳಿಸಿದ್ದಾರೆ.
ಸರಕಾರದ ಪರ ಮೊದಲು ಸರಕಾರಿ ಅಭಿಯೋಜಕ ಶ್ರೀನಿವಾಸ ಹೆಗ್ಡೆ ಹಾಗೂ ಪ್ರಸ್ತುತ ಹರಿಶ್ಚಂದ್ರ ಉದ್ಯಾವರ ಅವರು ವಾದಿಸಿದ್ದರು.
ಘಟನೆ ಹಿನ್ನೆಲೆ
2014ರ ಆ. 20ರಂದು ಮಣೂರಿನ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಮಹಿಳೆ ಗಿರಿಜಾ ಉರಾಳ (84) ಅವರ ಮನೆಗೆ ಪಕ್ಕದ ಮನೆಯ ನಿತಿನ್ ಆಚಾರ್ಯ (24) ಚಿನ್ನಾಭರಣ ದೋಚುವ ಸಲುವಾಗಿ ತನ್ನ ಮಿತ್ರರಾದ ಕುಂಭಾಶಿಯ ಪ್ರವೀಣ್ ಕೆ.ಎ. ಹಾಗೂ ಸಂಕೇತ್ ಗುಡಿಗಾರ್ ಅವರನ್ನು ಕೂಡಿಕೊಂಡು ಬೈಕಿನಲ್ಲಿ ಬಂದಿದ್ದರು.
ಪ್ರವೀಣ್ ಮತ್ತು ಸಂಕೇತ್ ಮನೆಯ ಬಚ್ಚಲು ಕೋಣೆಯ ಹೆಂಚು ತೆಗೆದು ಒಳ ಹೊಕ್ಕು ಚಿನ್ನಾಭರಣಗಳನ್ನು ದೋಚಲು ಯತ್ನಿಸುತ್ತಿದ್ದಾಗ ಅದನ್ನು ಕಂಡ ಮಹಿಳೆ ಪ್ರತಿಭಟಿಸಿದ್ದರಿಂದ ಅವರ ಮುಖವನ್ನು ಆರೋಪಿಗಳು ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಮಹಿಳೆಯ ಮೈಮೇಲೆ ಹಾಗೂ ಮನೆಯಲ್ಲಿದ್ದ 78 ಸಾವಿರ ರೂ.ಮೌಲ್ಯದ 31.200 ಗ್ರಾಂ. ತೂಕದ ಚಿನ್ನಾಭರಣ ಹಾಗೂ ಮೊಬೈಲ್, ಟಾರ್ಚ್ ಅನ್ನು ದೋಚಿಕೊಂಡು ಮೂವರು ಪರಾರಿಯಾಗಿದ್ದರು. ಪ್ರಕರಣದಲ್ಲಿ ಮೂವರು ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದರು.