Advertisement

ಮಂತ್ರ ಮಾಂಗಲ್ಯ ವಿವಾಹಕ್ಕೆ ಪ್ರೋತ್ಸಾಹ ಅಗತ್ಯ

05:09 PM May 15, 2018 | |

ಸೊರಬ: ಯುವಕರು ಪುರೋಹಿತಶಾಹಿ ಹಾಗೂ ಆಡಂಬರದ ವಿವಾಹದ ಬದಲು ಕುವೆಂಪು ಅವರ ಪರಿಕಲ್ಪನೆಯಡಿಯಲ್ಲಿ ಮಂತ್ರ ಮಾಂಗಲ್ಯ ವಿವಾಹ ಮಾಡಿಕೊಳ್ಳುವತ್ತ ಮುಂದಾಗಬೇಕಿದೆ ಎಂದು ಸಾಹಿತಿ ಡಾ| ಶ್ರೀಕಂಠ ಕೂಡಿಗೆ ಕರೆ ನೀಡಿದರು.

Advertisement

ತಾಲೂಕಿನ ಕುಂದಗಸವಿ ಗ್ರಾಮದಲ್ಲಿ ರವಿಶಂಕರ್‌ ಹಾಗೂ ಸೌಭಾಗ್ಯಾ ಅವರ ಮಂತ್ರ ಮಾಂಗಲ್ಯ ವಿವಾಹ ಮಹೋತ್ಸವದಲ್ಲಿ ವಧು-ವರರಿಗೆ ಮಂತ್ರ ಮಾಂಗಲ್ಯದ ಕುರಿತು ತಿಳಿಸಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಗೇಣಿದಾರರು, ಭೂಮಿ ಇಲ್ಲದವರು ವಿಮೋಚನೆಗೊಳ್ಳುವ ಅಗತ್ಯವಿರುವ ಹೊತ್ತಿನಲ್ಲಿ ವೈದಿಕರ ಹಿಡಿತದಿಂದ ತಪ್ಪಿಸಿಕೊಳ್ಳಲು ಹಾಗೂ ವಧು-ವರರ ಮದುವೆಯಲ್ಲಿ ಪುರೋಹಿತರು ವಾಚಿಸುವ ಸಂಸ್ಕೃತದ ಶ್ಲೋಕ ಅರ್ಥವಾಗದೇ ಇರುವ ಮದುವೆಯನ್ನು ಸರಳಗೊಳಿಸಿ ಮಾನಸಿಕ ದಾಸ್ಯದಿಂದ ಹೊರಬರಲು ಕುವೆಂಪು ಕಂಡುಕೊಂಡ ಸರಳ ಮದುವೆ ಮಂತ್ರ ಮಾಂಗಲ್ಯ ಆಗಿದೆ ಎಂದು ವಿಶ್ಲೇಷಿಸಿದರು.

ಗಂಡು ಹೆಣ್ಣಿನ ನಡುವೆ ಯಾವ ಭಿನ್ನಾಭಿಪ್ರಾಯ ಇರಬಾರದು. ಪರಸ್ಪರ ಒಪ್ಪಿ ಆಗುವ ಮದುವೆಗೆ ಇರುವ ಗೌರವ ಮತ್ಯಾವ ಮದುವೆಗೂ ಇಲ್ಲ. ಪುರುಷನ ಅರಸೊತ್ತಿಗೆಯನ್ನು ಒಪ್ಪಿಕೊಳ್ಳುತ್ತಲೇ, ಅವನ ಬಾಳ ಸಂಗಾತಿಯಾಗಿ ಕುಟುಂಬದ ನೊಗ ಹೊತ್ತ ಮಹಿಳೆಗೆ ಇಂದು ಶೋಷಣೆ ಹೆಚ್ಚಾಗಿದೆ. ಪುತ್ರ ಪ್ರೇಮದ ಕುರುಡುತನ ಹೆಚ್ಚಾಗಿ ಗರ್ಭದಲ್ಲಿ ಹೆಣ್ಣು ಮಗುವನ್ನು ಚಿವುಟಿ ಹಾಕಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಭವಿಷ್ಯದ ಬಗ್ಗೆ ಭರವಸೆ ಹೊಂದಿ ಮದುವೆ ಆಗುವ ದಂಪತಿಗಳು ಕಡ್ಡಾಯವಾಗಿ ವಿವಾಹ ನೋಂದಣಿ ಮಾಡಿಕೊಳ್ಳಬೇಕು. ಕಾನೂನಿನ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಎಂದರು.

Advertisement

ಸಮಾಜ ಚಿಂತಕ ರಾಜಪ್ಪ ಮಾಸ್ತರ್‌ ವಿವಾಹ ಪ್ರಮಾಣ ವಚನ ಬೋಧಿಸಿ ಮಾತನಾಡಿ, ದುಡಿಯುವ ವರ್ಗದ ಮೇಲೆ ಶಾಸ್ತ್ರ, ಪುರಾಣ ಹಾಗೂ ಗೊಡ್ಡು ಸಂಪ್ರದಾಯ ಹೇರಿ ಆರ್ಥಿಕ ಅಭಿವೃದ್ಧಿ ಹಿನ್ನಡೆಗೆ ಕಾರಣವಾಗಿರುವ ಮೇಲ್ಜಾತಿಯ ಹುನ್ನಾರದಿಂದ ಹೊರ ಬರಬೇಕಾದರೆ ಯುವಕರು ಹೊಸ ಚಿಂತನೆಗೆ ಒಳಗಾಗಬೇಕು ಎಂದರು.

ಓಂಕಾರಮ್ಮ ಪ್ರಾರ್ಥಿಸಿದರು. ನೋಪಿಶಂಕರ್‌ ಸ್ವಾಗತಿಸಿದರು. ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ಎಸ್‌.ಎಂ.ನೀಲೇಶ್‌ ಕಾರ್ಯಕ್ರಮ ನಿರ್ವಹಿಸಿದರು.
 
ವರನ ತಂದೆ ಮಸಣಿ ಲಕ್ಕಪ್ಪ, ತಾಯಿ ಶಾರದಮ್ಮ, ವಧುವಿನ ತಂದೆ ಮಾದನ ಬಸಪ್ಪ, ತಾಯಿ ಚಂದ್ರಮ್ಮ, ತಾಪಂ ಸದಸ್ಯ ನಾಗರಾಜ್‌ ಚಿಕ್ಕಸವಿ, ಹುಚ್ಚಪ್ಪ ಕುಂದಗಸವಿ, ಶೇಖರಮ್ಮ ರಾಜಪ್ಪ ಮಾಸ್ತರ್‌, ಸಣ್ಣಮ್ಮ ಶಾತಗೇರಿ, ರೋಟರಿ ಕ್ಲಬ್‌ ಅಧ್ಯಕ್ಷ ನಾಗರಾಜ್‌ ಗುತ್ತಿ, ಶಂಕರ್‌ ಶೇಟ್‌ ಹಾಗೂ ವಧು ವರನ ಕಡೆಯ ಬಂಧು ನೆಂಟರಿಷ್ಟರು, ಗ್ರಾಮಸ್ಥರು, ಗಣ್ಯರು ಮಂತ್ರ ಮಾಂಗಲ್ಯಕ್ಕೆ ಸಾಕ್ಷಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next