Advertisement

Price Hike: ಹಾಲಿನ ದರ ಹೆಚ್ಚಿಸಿದರೆ ರೈತರಿಗೆ ನೇರ ಲಾಭ : ಸಹಕಾರ ಸಚಿವ ಕೆ.ಎನ್‌.ರಾಜಣ್ಣ

09:51 PM Sep 14, 2024 | Team Udayavani |

ತುಮಕೂರು: ಮಾಗಡಿಯಲ್ಲಿ ಅಭಿವೃದ್ಧಿ ಕಾಮಗಾರಿ ಚಾಲನೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಲಿನ ದರ ಏರಿಕೆ ಬಗ್ಗೆ ಪ್ರಸ್ತಾಪಿಸಿದ್ದನ್ನು ಸಚಿವ ಕೆ.ಎನ್‌.ರಾಜಣ್ಣ ಸಮರ್ಥಿಸಿಕೊಂಡಿದ್ದು, ದೇಶದಲ್ಲಿನ ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ  ಹಾಲಿನ ದರ ಕರ್ನಾಟಕದಲ್ಲಿ ಕಡಿಮೆ ಇದೆ. ಹಾಗಾಗಿ ಈಗಿರುವ ನಂದಿನಿ ಹಾಲಿನ ದರವನ್ನು ರೈತರ ಹಿತದೃಷ್ಟಿಯಿಂದ 5 ರೂ.ಗೆ ಏರಿಕೆ ಮಾಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಂದಿನಿ ಹಾಲಿನ ದರ 5 ರೂಪಾಯಿ ಹೆಚ್ಚಳ ಮಾಡಿದರೆ ಅದರ ಲಾಭ ನೇರವಾಗಿ ರೈತರಿಗೆ ಸಿಗುತ್ತದೆ. ಯಾವುದೇ ಕಾರಣಕ್ಕೂ ದರ ಹೆಚ್ಚಳದಿಂದ ರಾಜ್ಯ ಸರ್ಕಾರಕ್ಕೆ 1 ರೂ.ಕೂಡ ಲಾಭ ಆಗುವುದಿಲ್ಲ. ಹಾಲಿನ ದರ 5 ರೂ. ಹೆಚ್ಚಳ ಮಾಡಿದರೆ ಅಷ್ಟೂ ಮೊತ್ತವನ್ನು ರೈತರಿಂದ ಸಂಗ್ರಹಿಸುವ ಹಾಲಿಗೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ 10 ರೂ.ನಷ್ಟು ಕಡಿಮೆ ಇದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಇದನ್ನು ಮನಗಂಡು ನಂದಿನಿ ಹಾಲಿನ ದರದಲ್ಲಿ 5 ರೂ. ಏರಿಕೆ ಮಾಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದವರು ತಿಳಿಸಿದರು.

” ಹಾಲಿನ ದರ ಏರಿಕೆ ಬಗೆಗಿನ ಪ್ರಸ್ತಾಪ ಮುಖ್ಯಮಂತ್ರಿಯವರ ಬಳಿ ತೆಗೆದುಕೊಂಡು ಹೋಗಿದ್ದೆ, ದೇಶದ ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ದರ ಕಡಿಮೆ ಇದೆ. ನಮ್ಮ ರಾಜ್ಯಕ್ಕಿಂತ ಇತರ ರಾಜ್ಯಗಳಲ್ಲಿ ಲೀಟರ್‌ ಹಾಲಿಗೆ 10ರೂ. ದರ ಹೆಚ್ಚಳವಿದೆ ಎಂದು ಹೇಳಿದೆ. ಅದಕ್ಕೆ ಸಿಎಂ ಅವರು ಈಗ ದರ ಹೆಚ್ಚಿಸಿದರೆ ಜನರು ಸುಮ್ಮನಿರಲ್ಲ ಎಂದರು. ಆದರೆ ದರ ಏರಿಕೆಯಿಂದ ಗ್ರಾಮೀಣ ಭಾಗದ ಜನರಿಗೆ ಒಳ್ಳೆಯದಾಗುತ್ತೆ ಎಂದು ನಾನು ಸಿಎಂಗೆ ಮನವರಿಕೆ ಮಾಡಿದೆ” ಎಂದು ಸಚಿವ ರಾಜಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next