Advertisement
ದಿಲ್ಲಿ ಸಭೆಯ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬಸವರಾಜ ರಾಯರೆಡ್ಡಿ, ಕಾಂಗ್ರೆಸ್‌ನಲ್ಲಿ ಅಸಮಾಧಾನ ಎಂಬುದಿಲ್ಲ. ಹೊಸ ಸಚಿವರ ಜತೆ ಸ್ವಲ್ಪ ಸಮನ್ವಯದ ಕೊರತೆ ಇತ್ತು. ಈ ನಿಟ್ಟಿನಲ್ಲಿ ಸಮನ್ವಯ ಸಮಿತಿ ಮಾಡಿದರೆ ತಪ್ಪೇನಿಲ್ಲ. ಶಾಸಕಾಂಗ ಸಭೆ ಕರೆಯಲು ಕೆಲ ಶಾಸಕರು ಸಹಿ ಸಂಗ್ರಹಿಸಿದ್ದರು. ನಾನೂ ಪತ್ರಕ್ಕೆ ಸಹಿ ಮಾಡಿದ್ದೆ. ಆಡಳಿತ ಸುಧಾರಣೆಗೆ ಸಲಹೆ ಕೊಟ್ಟಿದ್ದೇವೆ. ಇದನ್ನು ಸಿಎಂ ಸಹ ತಪ್ಪಾಗಿ ತಿಳಿದುಕೊಂಡಿಲ್ಲ. ದಿಲ್ಲಿಯ ಸಭೆಗೆ ನನಗೆ ಆಹ್ವಾನ ಬಂದಿಲ್ಲ. ಬಂದರೆ ಹೋಗುತ್ತೇನೆ ಎಂದಿದ್ದಾರೆ.
ಇದೇ ವಿಚಾರವಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಪ್ರತಿಕ್ರಿಯಿಸಿದ್ದು, ಸರಕಾರ ಹಾಗೂ ಪಕ್ಷದ ನಡುವೆ ಸಮನ್ವಯ ಸಮಿತಿ ರಚಿಸುವ ಸಂಬಂಧ ಪಕ್ಷದೊಳಗೆ ಯಾವುದೇ ರೀತಿಯ ಚರ್ಚೆ ನಡೆದಿಲ್ಲ. ಅದರ ಅಗತ್ಯವೂ ಕಾಣುತ್ತಿಲ್ಲ. ದಿಲ್ಲಿಯ ಸಭೆಯಲ್ಲಿ ಏನಾಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆ, ಅಭ್ಯರ್ಥಿಗಳ ಆಯ್ಕೆ ಇತ್ಯಾದಿಗಳ ಬಗ್ಗೆ ಚರ್ಚೆಯಾಗಬಹುದು. ಹಿಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದೆ. ಈ ಬಾರಿ ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಸಚಿವರ ಕಾರ್ಯವೈಖರಿ ಬಗ್ಗೆ ಎರಡೇ ತಿಂಗಳಲ್ಲಿ ವರದಿ ಕೊಡಲು ಹೇಗೆ ಸಾಧ್ಯ? ಕನಿಷ್ಠ 6 ತಿಂಗಳಾದರೂ ಬೇಕು ಎಂದರು. ಮುಖ್ಯಮಂತ್ರಿಗೆ ಮನವಿ
ಯಾವುದೇ ಇಲಾಖೆಯಲ್ಲಿ ಏಕಾಏಕಿ ವರ್ಗಾವಣೆಗಳನ್ನು ಮಾಡಲು ಸಾಧ್ಯವಿಲ್ಲ. ಆಡಳಿತಾತ್ಮಕ ಕಾರಣಗಳ ಹಿನ್ನೆಲೆಯಲ್ಲಿ ವರ್ಗಾವಣೆಗಳಾಗುವುದು ಸಹಜ. ಬಹುತೇಕ ಎಲ್ಲ ಇಲಾಖೆಗಳಲ್ಲೂ ವರ್ಗಾವಣೆ ಇತ್ಯಾದಿ ಅಡಳಿತಾತ್ಮಕ ಅಂಶಗಳನ್ನು ಇಟ್ಟುಕೊಂಡು ಕೆಲವು ಅಧಿಕಾರಿಗಳು ನ್ಯಾಯಾಂಗ ಹೋರಾಟ ಕೂಡ ನಡೆಸುತ್ತಿದ್ದಾರೆ ಎಂದ ಸತೀಶ್ ಜಾರಕಿಹೊಳಿ, ರಾಜ್ಯದ ಹಲವೆಡೆ ಮಳೆ ಇತ್ಯಾದಿ ಕಾರಣಗಳಿಂದ ಸಾಕಷ್ಟು ರಸ್ತೆಗಳು ಹಾಳಾಗಿದ್ದು, ಅವುಗಳ ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸಿಎಂ ಅವರಿಗೆ ಮನವಿ ಮಾಡಲಾಗುವುದು ಎಂದರು.