ಕಲಬುರಗಿ: ಜಗಜ್ಯೋತಿ ಬಸವಣ್ಣನ ವಚನ ಸಾಹಿತ್ಯ ಜಗತ್ತಿಗೆ ಮತ್ತು ಮಾನವ ಸಂಕುಲಕ್ಕೆ ಅದರಲ್ಲೂ ಮುಂದಿನ ಯುವ ಪೀಳಿಗೆಗೆ ಪರಿಚಯಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಸರ್ಕಾರದ ವತಿಯಿಂದ ಅನುಭವ ಮಂಟಪ ನಿರ್ಮಿಸಲು ಮುಂದಾಗಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ತಿಳಿಸಿದರು.
ಶನಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಬಸವ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ 884ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅನುಭವ ಮಂಟಪ ನಿರ್ಮಿಸಲು ಈಗಾಗಲೇ ಹಿರಿಯ ಸಾಹಿತಿ ಗೋರೂರು ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ಈಗಾಗಲೇ ಕಾರ್ಯೋನ್ಮುಖವಾಗಿದೆ. ಬಸವಾದಿ ಶರಣರ ಸಾಹಿತ್ಯ ಭಂಡಾರ ಅಪಾರವಾಗಿದೆ. ಇಂದಿನ ಯುವ ಜನಾಂಗದಲ್ಲಿ ಬಸವಾದಿ ಶರಣರ ವಚನಗಳ ಬಗ್ಗೆ ಹೆಚ್ಚಿನ ಆಸಕ್ತಿ ಕಂಡುಬರುತ್ತಿಲ್ಲ.
ಅವರಲ್ಲಿ ಆಸಕ್ತಿ ಮೂಡಿಸಲು ಹಾಗೂ ಮುಂದಿನ ಪೀಳಿಗೆಗೆ ಇದನ್ನು ಪರಿಚಯಿಸುವ ಭಾಗವಾಗಿ ಹಾಗೂ ಕೂಡಲ ಸಂಗಮ ಕ್ಷೇತ್ರ ಅಭಿವೃದ್ಧಿಗೊಂಡಂತೆ ಅನುಭವ ಮಂಟಪ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಬಸವಣ್ಣನ ಸಮಗ್ರ ವಚನ ಸಾಹಿತ್ಯವನ್ನು ಈ ಹಿಂದೆ 15 ಸಂಪುಟಗಳಲ್ಲಿ ಪ್ರಕಟಿಸಲಾಗಿತ್ತು. ಅದನ್ನೀಗ ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಅದನ್ನು ಸಂಕ್ಷಿಪ್ತಗೊಳಿಸಿ ಪುಸ್ತಕ ಪ್ರಾಧಿಕಾರದಿಂದ ಎರಡು ಸಂಪುಟಗಳಲ್ಲಿ ಹೊರ ತರಲಾಗಿದೆ ಎಂದು ಹೇಳಿದರು.