Advertisement

ಮುಂಗಾರು ಬಿರುಸಿಗೆ ಸಹಕಾರಿ ತಾಪಮಾನ !

10:30 AM May 02, 2020 | sudhir |

ಮಂಗಳೂರು: ಕರಾವಳಿ ಭಾಗದಲ್ಲಿ ಈ ಬಾರಿಯ ಮುಂಗಾರು ಉತ್ತಮವಾಗಿರಲಿದ್ದು, ವಾಡಿಕೆಯಂತೆ ಮಳೆಯಾಗಲಿದೆ. ಇದಕ್ಕೆ ಈ ಪ್ರದೇಶದ ತಾಪಮಾನ ಕೂಡ ಸಹಕಾರಿಯಾಗಲಿದೆ.

Advertisement

ಕರಾವಳಿಯಲ್ಲಿ ಈಗಾಗಲೇ ಪೂರ್ವ ಮುಂಗಾರು ಮಳೆ ಉತ್ತಮ ಆರಂಭ ಪಡೆದಿದ್ದು, ಕೆಲವು ಪ್ರದೇಶಗಳಲ್ಲಿ ಸಂಜೆ ವೇಳೆಗೆ ಮಳೆ ಗುಡುಗು ಸಹಿತ ಮಳೆ ಸುರಿಯುತ್ತಿದೆ. ಮಳೆ ಬಂದರೂ ವಾತಾವರಣದ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆಯಾಗಲಿಲ್ಲ. ಅನೇಕ ಕಡೆಗಳಲ್ಲಿ ಮಧ್ಯಾಹ್ನ ವೇಳೆ 38 ಡಿ.ಸೆ.ನಷ್ಟು ಗರಿಷ್ಠ ಉಷ್ಣಾಂಶ ಏರಿಕೆಯಾಗುತ್ತಿದೆ. ತಾಪಮಾನ ಏರಿದಂತೆ ಗಾಳಿಯಲ್ಲಿ ಒತ್ತಡ ಕಡಿಮೆಯಾಗಿ ತೇವಾಂಶದ ಕಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ತಾಪಮಾನ ಏರಿಕೆಯಾದಂತೆ ಸಮುದ್ರದ ನೀರು ಆವಿಯಾಗಿ ಮೋಡಗಳಾಗಿ ಪರಿವರ್ತನೆ ಆಗುತ್ತದೆ. ಇದರಿಂದಲೂ ಉತ್ತಮ ಮಳೆ ಸುರಿಯಬಹುದು.

ಸಾಮಾನ್ಯವಾಗಿ ಮೇ ಅಂತ್ಯಕ್ಕೆ ಕೇರಳ ಭಾಗಕ್ಕೆ ಮುಂಗಾರು ಆಗಮಿಸಿ, ಜೂನ್‌ ಮೊದಲ ವಾರ ರಾಜ್ಯ ಕರಾವಳಿಗೆ ಅಪ್ಪಳಿಸು ತ್ತದೆ. ಕರಾವಳಿ ಭಾಗದಲ್ಲಿ ಮುಂಗಾರು ವೇಳೆ (ಜೂನ್‌-ಸೆಪ್ಟಂಬರ್‌) 3,019 ಮಿ.ಮೀ. ಮಳೆಯಾಗಬೇಕು. ಕಳೆದ ಎರಡು ವರ್ಷ ಮುಂಗಾರು ಉತ್ತಮವಾಗಿತ್ತು.

ಕಳೆದ ಬಾರಿ ರಾಜ್ಯ ಕರಾವಳಿಗೆ ವಾಡಿಕೆಗಿಂತ ತಡವಾಗಿ ಮುಂಗಾರು ಅಪ್ಪಳಿಸಿತ್ತು. 2019ರಲ್ಲಿ ಜೂನ್‌ 14ಕ್ಕೆ ಕರಾವಳಿ ಭಾಗಕ್ಕೆ ಮುಂಗಾರು ಪ್ರವೇಶ ಪಡೆದಿತ್ತು. ಜೂನ್‌ನಿಂದ ಸೆಪ್ಟಂಬರ್‌ ವರೆಗೆ ಸುರಿಯುವ ಮುಂಗಾರು ಋತುವಿನಲ್ಲಿ ದ.ಕ. ಜಿಲ್ಲೆಯಲ್ಲಿ ಶೇ. 5, ಉಡುಪಿ ಜಿಲ್ಲೆಯಲ್ಲಿ ಶೇ. 21 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 33ರಷ್ಟು ಅಧಿಕ ಮಳೆಯಾಗಿತ್ತು. ಒಟ್ಟು ಕರಾವಳಿ ಭಾಗದಲ್ಲಿ ಶೇ. 22ರಷ್ಟು ಮಳೆ ಪ್ರಮಾಣ ಹೆಚ್ಚಾಗಿತ್ತು.

ಪೂರ್ವ ಮುಂಗಾರು ಉತ್ತಮ ಆರಂಭ
ಹವಾಮಾನ ಇಲಾಖೆಯ ವಾಡಿಕೆಯಂತೆ ಮಾರ್ಚ್‌ ತಿಂಗಳಿನಿಂದ ಮೇ ವರೆಗೆ ಸುರಿಯುವ ಪೂರ್ವ ಮುಂಗಾರು ಮಳೆ ಕರಾವಳಿ ಭಾಗದಲ್ಲಿ ಉತ್ತಮ ಆರಂಭ ಪಡೆದಿದೆ. ಮಾ. 1ರಿಂದ ಎ. 30ರ ವರೆಗಿನ ಅಂಕಿ - ಅಂಶದಂತೆ ದ.ಕ. ಜಿಲ್ಲೆಯಲ್ಲಿ 60 ಮಿ.ಮೀ. ವಾಡಿಕೆ ಮಳೆಯಲ್ಲಿ 64 ಮಿ.ಮೀ. ಮಳೆಯಾಗಿ ಶೇ. 7ರಷ್ಟು ಹೆಚ್ಚಾಗಿದೆ. ಉಡುಪಿ ಜಿಲ್ಲೆಯಲ್ಲಿ 32 ಮಿ.ಮೀ. ವಾಡಿಕೆ ಮಳೆಯಲ್ಲಿ 56 ಮಿ.ಮೀ. ಮಳೆಯಾಗಿ ಶೇ. 74ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿ 25 ಮಿ.ಮೀ. ವಾಡಿಕೆ ಮಳೆಯಲ್ಲಿ 35 ಮಿ.ಮೀ. ಮಳೆಯಾಗಿ ಶೇ. 42ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿದೆ.

Advertisement

ಹವಾಮಾನ ಇಲಾಖೆಯ ಸದ್ಯದ ಮಾಹಿತಿ ಪ್ರಕಾರ ಕರಾವಳಿಯಲ್ಲಿ ವಾಡಿಕೆ ಯಂತೆ ಉತ್ತಮ ಮುಂಗಾರು ಮಳೆ ಸುರಿಯುವ ಸಾಧ್ಯತೆ ಇದೆ. ಜೂನ್‌ ಮೊದಲ ವಾರ ರಾಜ್ಯ ಕರಾವಳಿಗೆ ಮುಂಗಾರು ಅಪ್ಪಳಿಸಬಹುದು. ಉಷ್ಣಾಂಶ ಏರಿಕೆಯಾದಷ್ಟು ಮಳೆ ಬಿರುಸು ಪಡೆಯವ ಸಾಧ್ಯತೆ ಹೆಚ್ಚು.
– ಡಾ| ರಾಜೇಗೌಡ, ಕೃಷಿ ವಿ.ವಿ. ಹವಾಮಾನ ವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next