Advertisement

ಮಳೆಗಾಲದ ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರಿಕೆ ಇರಲಿ

01:57 AM Jul 20, 2022 | Team Udayavani |

ಕಳೆದ ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ಭಾರೀ ಮಳೆಯಾಗಿದ್ದು, ಅಲ್ಲಲ್ಲಿ ಪ್ರವಾಹವೂ ತಲೆದೋರಿತ್ತು. ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನೆರೆಯ ಮಟ್ಟ ಹೆಚ್ಚಾಗಿಯೇ ಇತ್ತು. ಬಿಟ್ಟು ಬಿಡದೇ ಮಳೆ ಸುರಿದಿರುವುದರಿಂದ ರಾಜ್ಯದಲ್ಲಿ ಡೆಂಗ್ಯೂ, ಚಿಕುನ್‌ಗುನ್ಯಾ ಸೋಂಕಿತರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಪ್ರತೀ ಮಳೆಗಾಲದ ಆರಂಭದಲ್ಲಿಯೂ ಇಂಥ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಈ ಸಂಖ್ಯೆಗಳು ಅಧಿಕವಾಗಿದ್ದರೆ, ಕೆಲವೊಮ್ಮೆ ಸಣ್ಣ ಪ್ರಮಾಣದಲ್ಲಿ ಕಾಣಿಸಿ ಕೊಂಡು ಹಾಗೆಯೇ ಕಡಿಮೆಯಾಗುತ್ತದೆ. ಈ ಬಾರಿ ಮಾತ್ರ ಕಳೆದ 18 ದಿನಗಳಲ್ಲಿ ಡೆಂಗ್ಯೂ ಮತ್ತು ಚಿಕುನ್‌ಗುನ್ಯಾ ಪ್ರಕರಣಗಳು ಹಿಂದಿಗಿಂತ ಎರಡು ಪಟ್ಟು ಹೆಚ್ಚಾಗಿರುವುದು ಕೊಂಚ ಪರಿಸ್ಥಿತಿಯನ್ನು ಗಂಭೀರವಾಗಿ ನೋಡುವಂತಾಗಿದೆ.

ವಿಶೇಷವೆಂದರೆ ಕೊರೊನಾ ಕಾಣಿಸಿಕೊಂಡ 2020ರ ಆರಂಭದಿಂದ ಕಳೆದ ವರ್ಷದ ವರೆಗೂ ರಾಜ್ಯದಲ್ಲಿ ಡೆಂಗ್ಯೂ ಮತ್ತು ಚಿಕುನ್‌ಗುನ್ಯಾ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ಸಂಖ್ಯೆಯಲ್ಲಿ ಸಾಕಷ್ಟು ಕಡಿಮೆಯಾಗಿತ್ತು. ಇದಕ್ಕೆ ಬೇರೆ ಬೇರೆ ಕಾರಣಗಳೂ ಇದ್ದವು. ಅಂದರೆ, ಜನತೆ ಕೊರೊನಾ ಕಾರಣದಿಂದಾಗಿ ತೆಗೆದುಕೊಂಡ ಮುನ್ನೆಚ್ಚರಿಕೆಗಳು ಡೆಂಗ್ಯೂ ಮತ್ತು ಚಿಕುನ್‌ಗುನ್ಯಾ ಸಂಖ್ಯೆಯಲ್ಲಿ ಕಡಿಮೆಯಾಗುವಂತೆ ಮಾಡಿದ್ದವು. ಇದೊಂದೇ ಅಲ್ಲ, ಕಳೆದ ಎರಡು ವರ್ಷಗಳ ಕಾಲವು ಯಾವುದೇ ರೀತಿಯ ಜ್ವರ, ತಲೆನೋವು, ಮೈಕೈನೋವು ಕಾಣಿಸಿಕೊಂಡರೂ ಅದನ್ನು ಕೊರೊನಾ ರೀತಿಯಲ್ಲೇ ನೋಡಿ ಚಿಕಿತ್ಸೆ ನೀಡಲಾಗಿತ್ತು. ಈ ಕಾರಣದಿಂದಲೂ ಡೆಂಗ್ಯೂ ಮತ್ತು ಚಿಕುನ್‌ಗುನ್ಯಾ ಹೆಚ್ಚಾಗಿ ಕಾಣಿಸಿರಲಿಲ್ಲ ಎಂಬ ಅಂದಾಜು ಇದೆ.

ಆರೋಗ್ಯ ಇಲಾಖೆ ಪ್ರಕಾರ, ಕಳೆದ 18 ದಿನಗಳಲ್ಲಿ 1,660 ಡೆಂಗ್ಯೂ ಮತ್ತು 407 ಚಿಕುನ್‌ಗುನ್ಯಾ ಪ್ರಕರಣಗಳು ಕಾಣಿಸಿಕೊಂಡಿವೆ. ಎಪ್ರಿಲ್‌ 1ರಿಂದ ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಇಲ್ಲಿಯವರೆಗೆ 3,384 ಡೆಂಗ್ಯೂ ಮತ್ತು 775 ಚಿಕುನ್‌ಗುನ್ಯಾ ಪ್ರಕರಣಗಳು ಕಾಣಿಸಿಕೊಂಡಿವೆ.

ಉಡುಪಿಯಲ್ಲಿ 356, ಮೈಸೂರು 349, ದಕ್ಷಿಣ ಕನ್ನಡ 176, ದಾವಣಗೆರೆ 163 ಮತ್ತು ಶಿವಮೊಗ್ಗದಲ್ಲಿ 158 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ವಿಜಯಪುರ 136, ಕೋಲಾರ 100, ಹಾಸನದಲ್ಲಿ 53 ಚಿಕುನ್‌ಗುನ್ಯಾ ಪ್ರಕರಣಗಳು ಕಾಣಿಸಿವೆ. ಸಾಮಾನ್ಯವಾಗಿ ಡೆಂಗ್ಯೂ ಉಲ್ಬಣವಾಗುವುದೇ ಹೆಚ್ಚು ಮಳೆಯಾಗುವಾಗ. ಅಂದರೆ, ಡೆಂಗ್ಯೂ ಮತ್ತು ಚಿಕುನ್‌ಗುನ್ಯಾಕ್ಕೆ ಕಾರಣವಾಗುವ ಈಡೀಸ್‌ ಲಾರ್ವಾ ಸೊಳ್ಳೆಯು ಶುದ್ಧ ನೀರಿನಲ್ಲೇ ಬೆಳೆಯುವುದು. ಮನೆಯ ಸುತ್ತ ನೀರು ನಿಲ್ಲಲು ಆಗುವಂಥ ಸ್ಥಳಗಳಲ್ಲಿ ಈ ಸೊಳ್ಳೆಯ ಉತ್ಪತ್ತಿಯಾಗುತ್ತದೆ. ಈಗಾಗಲೇ ಆರೋಗ್ಯ ಇಲಾಖೆಯು ಜನರಲ್ಲಿ ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.

Advertisement

ಕೊರೊನಾ ಇರಲಿ, ಡೆಂಗ್ಯೂ ಇರಲಿ ಅಥವಾ ಚಿಕುನ್‌ಗುನ್ಯಾವೇ ಇರಲಿ. ಯಾವುದೇ ಕಾರಣಕ್ಕೂ ಅಸಡ್ಡೆ ಸಲ್ಲದು. ಈ ರೋಗಗಳ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೆ ಮೊದಲು ವೈದ್ಯರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸರಕಾರವೂ ಈ ಬಗ್ಗೆ ಎಚ್ಚರಿಕೆ ವಹಿಸಲಿ.

Advertisement

Udayavani is now on Telegram. Click here to join our channel and stay updated with the latest news.

Next