ಭುವನೇಶ್ವರ: ಢಾಕಾದಲ್ಲಿ ಮುಂದಿನ ತಿಂಗಳ 14ರಿಂದ 22ರ ತನಕ ನಡೆಯಲಿರುವ “ಹೀರೋ ಏಶ್ಯನ್ ಚಾಂಪಿಯನ್ಸ್ ಟ್ರೋಫಿ’ ಹಾಕಿ ಪಂದ್ಯಾವಳಿಯಲ್ಲಿ ಮನ್‌ಪ್ರೀತ್ ಸಿಂಗ್ ಭಾರತ ತಂಡವನ್ನು ಮುನ್ನಡೆ ಸಲಿದ್ದಾರೆ. ಹರ್ಮನ್‌ಪ್ರೀತ್ ಸಿಂಗ್ ಉಪನಾಯಕರಾಗಿದ್ದಾರೆ.
20 ಸದಸ್ಯರ ಈ ತಂಡದಿಂದ ಅನುಭವಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕೃಷ್ಣ ಬಹಾದೂರ್ ಪಾಠಕ್ ಮತ್ತು ಸೂರಜ್ ಕರ್ಕೆರ ಗೋಲ್ ಕೀಪಿಂಗ್ ನಡೆಸಲಿದ್ದಾರೆ.
ಭಾರತ ತನ್ನ ಮೊದಲ ಪಂದ್ಯವನ್ನು ಕೊರಿಯಾ ವಿರುದ್ಧ ಡಿ. 14ರಂದು ಆಡಲಿದೆ. ಬಳಿಕ ಬಾಂಗ್ಲಾದೇಶ (ಡಿ. 15), ಪಾಕಿಸ್ಥಾನ (ಡಿ. 17) ಮಲೇಶ್ಯ (ಡಿ. 18) ಮತ್ತು ಜಪಾನ್ (ಡಿ. 19) ವಿರುದ್ಧ ಸೆಣಸಲಿದೆ. ಡಿ. 21ರಂದು ಸೆಮಿಫೈನಲ್ಸ್, ಡಿ. 22ರಂದು ಫೈನಲ್ ನಡೆಯಲಿದೆ.
ಇದನ್ನೂ ಓದಿ:ಇಬ್ಬಗೆ ನೀತಿ ಬಿಡಿ; ಕಿಡಿಗೇಡಿಗಳ ಶಿಕ್ಷಿಸಿ; ಪಾಕಿಸ್ತಾನ ವಿರುದ್ಧ ಕೇಂದ್ರದ ತರಾಟೆ
ಜಂಟಿ ಚಾಂಪಿಯನ್ಸ್
ಭಾರತ ಮತ್ತು ಪಾಕಿಸ್ಥಾನ ಈ ಕೂಟದ ಹಾಲಿ ಚಾಂಪಿಯನ್ಸ್ ಆಗಿವೆ. ಇತ್ತಂಡಗಳ ನಡುವಿನ ಕಳೆದ ಮಸ್ಕತ್ ಪಂದ್ಯಾವಳಿಯ ಫೈನಲ್ ಪಂದ್ಯ ಭಾರೀ ಮಳೆಯಿಂದ ರದ್ದು ಗೊಂಡಿತ್ತು. ಹೀಗಾಗಿ ಎರಡೂ ತಂಡ ಗಳನ್ನು ಜಂಟಿ ಚಾಂಪಿಯನ್ಸ್ ಎಂದು ಘೋಷಿಸಲಾಗಿತ್ತು.