ಹೊಸದಿಲ್ಲಿ: ಎರಡನೇ ಬಾರಿ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಕಾರಣ ಭಾರತದ ಖ್ಯಾತ ಶಾಟ್‌ಪುಟ್ ಆ್ಯತ್ಲೀಟ್ ಮನ್‌ಪ್ರೀತ್ ಕೌರ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಚೀನದ ಜಿನ್‌ಹುವಾದಲ್ಲಿ ಎಪ್ರಿಲ್ 24ರಂದು ನಡೆದ ಏಶ್ಯನ್ ಗ್ರ್ಯಾನ್ ಪ್ರಿ ಆ್ಯತ್ಲೆಟಿಕ್ ಕೂಟದ ವೇಳೆ ಪಡೆಯಲಾಗಿದ್ದ ಮನ್‌ಪ್ರೀತ್ ಕೌರ್ ಅವರ ಮೂತ್ರದ ಸ್ಯಾಂಪಲ್‌ನ ಪರೀಕ್ಷೆ ನಡೆಸಲಾಗಿದ್ದು ಅದರಲ್ಲಿಯೂ ಅವರು ನಿಷೇಧಿತ ಸ್ಟಿರಾಯ್ಡ ಮತ್ತು ವೇಗವರ್ಧಕ ಡಿಮಿಥೈಲ್‌ಬ್ಯುಟಿಲಾಮೈನ್ ಸೇವಿಸಿರುವುದು ಪತ್ತೆಯಾಗಿದೆ. 27ರ ಹರೆಯದ ಪಂಜಾಬ್‌ನ ಮನ್‌ಪ್ರೀತ್ ಈ ಕೂಟದಲ್ಲಿ 18.86 ಮೀ. ದೂರ ಎಸೆದು ಚಿನ್ನ ಜಯಿಸಿದ್ದರಲ್ಲದೇ ಆಗಸ್ಟ್ 4ರಿಂದ 13ರ ವರೆಗೆ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಿದ್ದರು. ಮನ್‌ಪ್ರೀತ್ ಭುವನೇಶ್ವರ್‌ನಲ್ಲಿ ನಡೆದ ಏಶ್ಯನ್ ಆ್ಯತ್ಲೆಟಿಕ್ ಕೂಟದಲ್ಲೂ ಚಿನ್ನ ಜಯಿಸಿದ್ದರು.
ಎರಡು ಬಾರಿ ದ್ರವ್ಯ ಸೇವನೆ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದ ಕಾರಣ ಭಾರತೀಯ ಆ್ಯತ್ಲೆಟಿಕ್ ಫೆಡರೇಶನ್ (ಎಎಫ್ಐ) ಮನ್‌ಪ್ರೀತ್ ಅವರನ್ನು ತಾತ್ಕಾಲಿಕವಾಗಿ ಅಮಾನತು ಗೊಳಿಸಿದೆ. ಹಾಗಾಗಿ ಅವರು ವಿಶ್ವ ಚಾಂಪಿಯನ್‌ಶಿಪ್ ಕೂಟದಲ್ಲಿ ಭಾಗವಹಿಸುವುದಿಲ್ಲ. ಈ ಮೊದಲು ಜೂನ್ 1ರಿಂದ 4ರ ವರೆಗೆ ಪಟಿ ಯಾಲದಲ್ಲಿ ನಡೆದ ಫೆಡರೇಶನ್ ಕಪ್ ರಾಷ್ಟ್ರೀಯ ಕೂಟದ ವೇಳೆ ರಾಷ್ಟ್ರೀಯ ಉದ್ದೀಪನ ತನಿಖಾ ಸಂಸ್ಥೆ ಪಡೆದ ಮೂತ್ರದ ಸ್ಯಾಂಪಲ್‌ನ ಪರೀಕ್ಷೆಯಲ್ಲೂ ನಿಷೇಧಿತ ದ್ರವ್ಯ ಡಿಮಿಥೈಲ್‌ಬ್ಯುಟಿಲಾಮೈನ್ ಸೇವಿ ಸಿರುವುದು ಪತ್ತೆಯಾಗಿತ್ತು.
ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿರುವ ವಿಷಯವನ್ನು ಮನ್‌ಪ್ರೀತ್ ಅವರಿಗೆ ತಿಳಿಸಲಾಗಿದೆ. ಅವರನ್ನು ಎಎಫ್ಐ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಅವರನ್ನು ವಿಶ್ವ ಚಾಂಪಿಯನ್‌ಶಿಪ್ ತಂಡದಿಂದ ಕೈಬಿಡಲಾಗಿದೆ ಎಂದು ಎಎಫ್ಐ ಅಧ್ಯಕ್ಷ ಅದಿಲ್ ಸುಮರಿವಾಲ ಹೇಳಿದ್ದಾರೆ.
ಒಂದು ವೇಳೆ “ಬಿ’ ಸ್ಯಾಂಪಲ್‌ನಲ್ಲೂ ಅವರು ಸಿಕ್ಕಿಬಿದ್ದರೆ ಮನ್ ಪ್ರೀತ್ ಅವರು ನಾಲ್ಕು ವರ್ಷಗಳ ಅವಧಿಗೆ ನಿಷೇಧಗೊಳ್ಳುವ ಸಾಧ್ಯತೆಯಿದೆ.