ಕೋಲ್ಕತ್ತಾ: ಒಂದು ಕಾಲದಲ್ಲಿ ರಣಜಿ ಟ್ರೋಫಿ, ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ರನ್ ಗುಡ್ಡೆ ಹಾಕಿ ಟೀಂ ಇಂಡಿಯಾದ ಕದ ತಟ್ಟಿದ್ದ ಬಂಗಾಲದ ಪ್ರತಿಭಾನ್ವಿತ ಬ್ಯಾಟ್ಸಮನ್ ಮನೋಜ್ ತಿವಾರಿಗೆ ಸರಿಯಾದ ಅವಕಾಶಗಳೇ ಸಿಗಲಿಲ್ಲ.
2008ರಲ್ಲಿ ಟೀಂ ಇಂಡಿಯಾ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ ಮನೋಜ್ ತಿವಾರಿ, ಒಂದು ಪಂದ್ಯದಲ್ಲಿ ಶತಕ ಸಿಡಿಸಿ, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೂ, ಮುಂದಿನ ಪಂದ್ಯದಲ್ಲೇ ತಂಡದಿಂದ ಹೊರಬಿದ್ದರು.
2011ರ ಚೆನ್ನೈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮ್ಯಾಚ್ ವಿನ್ನಿಂಗ್ ಶತಕ ಬಾರಿಸಿದ್ದರು. ಅಂದಿನ ತಿವಾರಿಯ 104 ರನ್ ಬ್ಯಾಟಿಂಗ್ ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. ಆದರೆ ಮುಂದಿನ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ತಿವಾರಿ ಇರಲಿಲ್ಲ. ತಿವಾರಿಗೆ ಅವಕಾಶ ಸಿಕ್ಕಿದ್ದು 14 ಪಂದ್ಯಗಳ ನಂತರ.
ನಾನು ದೇಶಕ್ಕಾಗಿ ಶತಕ ಸಿಡಿಸಿದ ನಂತರವೂ ಮುಂದಿನ 14 ಪಂದ್ಯಗಳಲ್ಲಿ ನನಗೆ ಚಾನ್ಸ್ ಸಿಗುವುದಿಲ್ಲ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಆದರೆ ತಂಡದ ನಾಯಕ ಮತ್ತು ಮ್ಯಾನೇಜ್ ಮೆಂಟ್ ಅನ್ನು ಯಾವತ್ತೂ ಬೆಂಬಲಿಸುತ್ತೇನೆ. ಅವರು ಯಾವುದಾದರೂ ಕಾರಣಕ್ಕೆ ನನ್ನನ್ನು ಕೈಬಿಟ್ಟಿರಬಹುದು. ನಾನು ಭವಿಷ್ಯದಲ್ಲಿ ಈ ಬಗ್ಗೆ ಧೋನಿಯನ್ನು ಕೇಳುತ್ತೇನೆ ಎಂದು ಮನೋಜ್ ತಿವಾರಿ ಹೇಳಿದ್ದಾರೆ.
ಮನೋಜ್ ತಿವಾರಿ 2015ರಲ್ಲಿ ಜಿಂಬಾಬ್ವೆ ವಿರುದ್ಧ ಕೊನೆಯದಾಗಿ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದರು. ಏಳು ವರ್ಷದ ಟೀಂ ಇಂಡಿಯಾ ಜರ್ನಿಯಲ್ಲಿ ತಿವಾರಿ ಆಡಿದ್ದು ಕೇವಲ 12 ಏಕದಿನ ಪಂದ್ಯಗಳನ್ನು ಮಾತ್ರ.