ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆ ಸಂಬಂಧಿಸಿ ಕರ್ನಾಟಕದ ಹೋರಾಟ ತೀವ್ರವಾಗಿರುವ ವೇಳೆಯಲ್ಲೇ ಗೋವಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡ ಕಣಕುಂಬಿಯಲ್ಲಿರುವ ಮಹದಾಯಿ ಕೊಳ್ಳಕ್ಕೆ ಭಾನುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಕೊನೆ ಕ್ಷಣದಲ್ಲಿ ತಂಡವನ್ನು ಕಳುಹಿಸಿ ಪಣಜಿಯಲ್ಲೆ ಉಳಿದಿರುವುದಾಗಿ ವರದಿಯಾಗಿದೆ.
ಪಣಜಿಯಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ತಂಡದ ಜೊತೆ ಪರಿಕ್ಕರ್ ಹೊರಟಿದ್ದರು ಎಂದು ಹೇಳಲಾಗಿದೆ.
ಗೋವಾ ಸ್ಪೀಕರ್ ಪ್ರಮೋದ್ ಸಾವಂತ್ ,ಡ್ಯೆಪುಟಿ ಸ್ಪೀಕರ್ ಮೈಕಲ್ ಲೋಬೋ , ಶಾಸಕರಾದ ಪ್ರಸಾದ್ ಗಾಂವ್ಕರ್, ರೆನಾಲ್ಡ್ ಲಾರೆನ್ಸ್ ಎನ್‌ಜಿಟಿಸಿ ಸಮಿತಿಯ ಸದಸ್ಯರು ಮತ್ತು ಅಧಿಕಾರಿಗಳು ಗೋವಾ ಭಾಗದಲ್ಲಿರುವ ನದಿ ಪಾತ್ರದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಬಳಿಕ ಕಣಕುಂಬಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗೋವಾ ತಂಡ ಭೇಟಿ ಹಿನ್ನಲೆಯಲ್ಲಿ ಕಣಕುಂಬಿ ಬಳಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಖುದ್ದು ಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದ್ದರು.
ಕೆಲ ದಿನಗಳ ಹಿಂದೆ ಗೋವಾ ನೀರಾವರಿ ಸಚಿವ ವಿನೋದ್ ಪಾಲೇಕರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಹೋರಾಟಗಾರರ ಆಕ್ರೋಶಕ್ಕೆ ಗುರಿಯಾಗಿದ್ದರು.
ಇದೀಗ ಗೋವಾ ತಂಡ ಭೇಟಿ ನೀಡಿರುವ ಹಿನ್ನಲೆಯಲ್ಲಿ ಕನ್ನಡ ಪರ ಹೋರಾಟಗಾರರು ಮತ್ತು ಮಹದಾಯಿ ಹೋರಾಟಗಾರರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.