Advertisement

ಮಣ್ಣಪಳ್ಳದಲ್ಲಿ ಕಂಡುಬರುತ್ತಿದೆ ಎಲ್ಲೆಂದರಲ್ಲಿ ತ್ಯಾಜ್ಯ ರಾಶಿ

05:14 PM Feb 05, 2022 | Team Udayavani |

ಮಣಿಪಾಲ: ಜಗತ್ತಿನ 60 ದೇಶಗಳ ವಿದ್ಯಾರ್ಥಿಗಳಿಗೆ ವಿದ್ಯಾಶ್ರಯ ತಾಣವಾದ ಮಣಿಪಾಲಕ್ಕೆ ಸುಂದರ ವಿಹಾರ ತಾಣ ಮಣ್ಣಪಳ್ಳ ಪ್ರಕೃತಿಯ ಕೊಡುಗೆ. ಆದರೆ ಈ ಮಣ್ಣಪಳ್ಳ ಮದಗ ಪರಿಸರವು ತ್ಯಾಜ್ಯ ಕೊಂಪೆಯಾಗುವತ್ತ ಸಾಗುತ್ತಿದೆ.

Advertisement

ಪ್ರಾಕೃತಿಕವಾಗಿ ನಿರ್ಮಾಣಗೊಂಡ ದೊಡ್ಡದಾದ ಕೆರೆಯನ್ನು ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ತಾಣವಾಗಿ ಮಾರ್ಪಡಿಸಿತ್ತು. ಕೆರೆಯಲ್ಲಿ ವರ್ಷಪೂರ್ತಿ ಇರುವ ನೀರು ಕಣ್ಮನ ಸೆಳೆಯುತ್ತದೆ. ಈ ಹಿಂದೆ ಇಲ್ಲಿ ಬೋಟಿಂಗ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮಣಿಪಾಲ ಸುತ್ತಮುತ್ತಲಿನ ಜನಕ್ಕೆ ಇಲ್ಲಿನ ವಾಯು ವಿಹಾರ ಅಚ್ಚುಮೆಚ್ಚು.

ವಿಹಾರಿಗಳಿಗೆ ಕಿರಿಕಿರಿ
ಪ್ರಸ್ತುತ ಮಣ್ಣಪಳ್ಳ ಕೆರೆ ನಿರ್ವಹಣೆ ಸಮಸ್ಯೆ ಯಿಂದಾಗಿ ಗಿಡಗಂಟಿಗಳು ಬೆಳೆದುಕೊಂಡಿವೆ. ತ್ಯಾಜ್ಯ ರಾಶಿಗಳು ಅಲ್ಲಲ್ಲಿ ಹರಡಿಕೊಂಡಿರುವುದು ವಿಹಾರಿಗಳಿಗೆ ಕಿರಿಕಿರಿಯಾಗಿದೆ. ಅಲ್ಲಲ್ಲಿ ಹರಡಿರುವ ತ್ಯಾಜ್ಯ, ಮದ್ಯದ ಬಾಟಲಿ ಸೇರಿದಂತೆ ಇಲ್ಲಿರುವ ಎಲ್ಲ ತ್ಯಾಜ್ಯಗಳು ಕೆರೆ ಪರಿಸರದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಸಾಕಷ್ಟು ಹಾನಿ ಉಂಟು ಮಾಡುತ್ತದೆ. ನೀರು ಸಾಗುವ ತೋಡಿನಲ್ಲಿ ಚಾಕೊಲೆಟ್‌, ಬಿಸ್ಕೆಟ್‌, ಚಾಟ್ಸ್‌ ಮಾಸಾಲ ಪ್ಯಾಕ್ಸ್‌ ತಿಂಡಿಗಳ ರ್ಯಾಪರ್‌ಗಳ ರಾಶಿ ರಾಶಿ ಬಿದ್ದಿವೆ. ಮಳೆ ಸಂದರ್ಭ ಎಲ್ಲ ತ್ಯಾಜ್ಯಗಳು ಕೆರೆಗೆ ಸೇರುತ್ತವೆ. ಇಲ್ಲಿ ವಿದೇಶಗಳಿಂದ ವಿವಿಧ ಜಾತಿಯ ಪಕ್ಷಿಗಳು ವಲಸೆ ಬರುತ್ತವೆ. ಪ್ಲಾಸ್ಟಿಕ್‌ ತ್ಯಾಜ್ಯದಿಂದ ಅವುಗಳ ಆರೋಗ್ಯಕ್ಕೆ ಸಮಸ್ಯೆ ಉಂಟಾಗಬಹುದು.

ಕಸದ ತೊಟ್ಟಿ ಇದ್ರೂ ಪ್ರಯೋಜನವಿಲ್ಲ
ಇಲ್ಲಿ ಬೆಳಗ್ಗೆ ಮತ್ತು ಸಂಜೆ ವಿಹಾರಕ್ಕೆ ಬರುವ ವರ್ಗ ಬೇರೆಯೇ ಇದೆ. ಇವರೆಲ್ಲರೂ ಸುತ್ತಮುತ್ತಲಿನವರು. ಇವರ ಪಾತ್ರ ಬೆಳಗ್ಗೆ, ಸಂಜೆವಿಹಾರಕ್ಕೆ ಮಾತ್ರ ಸೀಮಿತ. ಇನ್ನೊಂದು ವರ್ಗ ದೂರದವರು. ಇವರ ದೃಷ್ಟಿ ಮಣ್ಣಪಳ್ಳದ ಸೌಂದರ್ಯ, ವಿಶ್ರಾಂತಿ ಮತ್ತು ಕಾಲಯಾಪನೆ ಯದ್ದಾಗಿರುತ್ತದೆ. ಇವರಲ್ಲಿ ಕೆಲವರು ತಿಂಡಿ, ಚಾಕೊಲೆಟ್‌. ಆಹಾರ ಪದಾರ್ಥಗಳನ್ನು ತಂದು ಸೇವಿಸುತ್ತಾರೆ. ತ್ಯಾಜ್ಯ ನಿರ್ವಹಣೆ ಜಾಗ್ರತಿ ಇಲ್ಲದ ವರು ಕಸದ ತೊಟ್ಟಿಗೆ ಎಸೆಯದೆ, ಬೇರೆ ಬೇರೆ ಜಾಗದಲ್ಲಿ ಕಸಗಳನ್ನು ಎಸೆಯುತ್ತಾರೆ.

ಮಧ್ಯರಾತ್ರಿ ಮದ್ಯದ “ಪಾರ್ಟಿ’
ಹರಡಿಕೊಂಡಿರುವ ತ್ಯಾಜ್ಯ ರಾಶಿಗಳಲ್ಲಿ ವಿವಿಧ ಮದ್ಯದ ಬಾಟಲಿಗಳು ಕಾಣ ಸಿಗುತ್ತವೆ. ಕಸದ ತೊಟ್ಟಿಯಲ್ಲಿ ಬಿಯರ್‌ ಬಾಟಲಿಗಳೂ ಇವೆ. ರಾತ್ರಿ ವೇಳೆ ಮದ್ಯದ ಪಾರ್ಟಿ ಮಾಡಿದ ಕುರುಹುಗಳಿವೆ. ಅಲ್ಲಲ್ಲಿ ಸಿಗರೇಟು ಪ್ಯಾಕ್‌ಗಳು ಬಿದ್ದುಕೊಂಡಿದ್ದು, ಪರಿಸರದ ಸ್ವತ್ಛಂದವನ್ನು ಹಾಳುಗೆಡವಲಾಗಿದೆ. ಈ ಮಣ್ಣಪಳ್ಳ ಕೆರೆಗೆ ಪ್ರಮುಖ ದ್ವಾರ ಅಲ್ಲದೆ ಬೇರೆ ದಾರಿಗಳು ಇದ್ದು, ಅದನ್ನು ಬಂದ್‌ ಮಾಡಬೇಕು. ರಾತ್ರಿ ನಡೆಯುವ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ವಾಯುವಿಹಾರಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Advertisement

ಬೃಹತ್‌ ಪ್ರಮಾಣದ ತ್ಯಾಜ್ಯ ಗಂಟು
ಕೆರೆಗೆ ಪ್ರವೇಶ ಕೊಡುವ ದ್ವಾರದ ಸಮೀಪ ಬೃಹತ್‌ ಪ್ರಮಾಣದ ತ್ಯಾಜ್ಯದ ಗಂಟುಗಳನ್ನು ತಂದುಎಸೆಯಲಾಗಿದೆ. ಇದೆಲ್ಲವೂ ಒಣ ಕಸವಾಗಿದ್ದು, ರಬ್ಬರ್‌ ಮ್ಯಾಟ್‌ ಸೇರಿದಂತೆ ಫ್ಲೈಬರ್‌, ಪ್ಲಾಸ್ಟಿಕ್‌ನಿಂದ ಕೂಡಿವೆ. ಈ ತ್ಯಾಜ್ಯ ಎಸೆದು ಹಲವು ತಿಂಗಳುಗಳೆ ಕಳೆದಂತಿದೆ. 15ಕ್ಕೂ ಅಧಿಕ ದೊಡ್ಡ ತ್ಯಾಜ್ಯ ಗಂಟುಗಳು ಮಣ್ಣಪಳ್ಳ ಕೆರೆಯ ಸೌಂದರ್ಯ ಅಣಕವಾಡುವಂತಿದೆ.

ಸೂಕ್ತ ನಿರ್ವಹಣೆಗೆ ಗಮನ
ಮಣ್ಣಪಳ್ಳ ಕೆರೆ ಸ್ವಚ್ಛತೆ, ನಿರ್ವಹಣೆಗೆ ಸಂಬಂಧಿಸಿ ಶೀಘ್ರದಲ್ಲಿ ಅಭಿವೃದ್ಧಿ ಸಮಿತಿ ಸಭೆ ಕರೆಸಿ ಮಾತುಕತೆ ನಡೆಸಿ ಸೂಕ್ತ ನಿರ್ವಹಣೆಗೆ ಗಮನ ಹರಿಸಲಾಗುವುದು.
– ಕೂರ್ಮಾ ರಾವ್‌ ಎಂ.,
ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ.


ಸೂಕ್ತ ನಿರ್ವಹಣೆಗೆ ಯೋಜನೆ
ವಿಹಾರ, ವಿಶ್ರಾಂತಿಗೆ ಇದು ಸುಂದರವಾದ ಪರಿಸರ. ಇದರ ಸುತ್ತಮುತ್ತಲಿನ ಪರಿಸರವನ್ನು ಅಚ್ಚುಕಟ್ಟಿನಿಂದ ನಿರ್ವಹಿಸುವ ಅಗತ್ಯವೂ ಇದೆ. ಮೊದಲಿನ ವ್ಯವಸ್ಥೆ ಉತ್ತಮವಾಗಿದ್ದರೂ ಕೋವಿಡ್‌ ಬಳಿಕ ಕುಂಠಿತವಾಗಿದೆ. ಸಾರ್ವಜನಿಕರು ಪರಿಜ್ಞಾನವಿಲ್ಲದೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಮದ್ಯದ ಬಾಟಲಿ, ದೊಡ್ಡ ತ್ಯಾಜ್ಯ ಗಂಟುಗಳು ಪರಿಸರದ ಸೌಂದರ್ಯ ಕೆಡಿಸುತ್ತಿದೆ. ಸಂಬಂಧಪಟ್ಟ ಪ್ರಾಧಿಕಾರವು ಮೊದಲು ಸಂಪೂರ್ಣ ಸ್ವತ್ಛತಾ ಕಾರ್ಯ ನಡೆಸಿ ಅನಂತರ ಸೂಕ್ತ ನಿರ್ವಹಣೆ ಮಾಡಬೇಕು.
– ಬಿ.ಚಂದ್ರಶೇಖರ್‌, ನಿವೃತ್ತ ಬ್ಯಾಂಕ್‌ ಉದ್ಯೋಗಿ, ಸ್ಥಳೀಯ ನಿವಾಸಿ.

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next