Advertisement
ಮಣಿಪಾಲಕ್ಕೆ ಅಂತರ್ಜಲದ ಆಸರೆ ಸುಮಾರು 123 ಎಕ್ರೆ ವಿಶಾಲವಾಗಿ ರೂಪುಗೊಂಡಿರುವ ಮಣ್ಣಪಳ್ಳ ಪರಿಸರದಲ್ಲಿ 44 ಎಕ್ರೆಯಷ್ಟು ಕೆರೆ ಇದೆ. ಪರ್ಕಳ, ಇಂದ್ರಾಳಿ, ಅಲೆವೂರುವರೆಗೆ ಇದುವೇ ಪ್ರಮುಖ ಜಲಮೂಲ. ಕಾಲಕಾಲಕ್ಕೆ ಮಳೆ ನೀರನ್ನು ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿ ನೀರಿನ ಮೂಲವಾಗಿರುವ ಮಣ್ಣಪಳ್ಳ ಸಂರಕ್ಷಣೆಗೆ ಪ್ರಮುಖವಾಗಿ ತ್ಯಾಜ್ಯವನ್ನು ಸಂಪೂರ್ಣ ನಿಷೇಧಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು. ಇಲ್ಲಿಗೆ ಬರುವ ಕಿಡಿಗೇಡಿಗಳಿಂದಾಗಿ ತ್ಯಾಜ್ಯಗಳಿಗೆ ಕಡಿವಾಣ ಇಲ್ಲದ ಪರಿಸ್ಥಿತಿ ಇದೆ. ಮಳೆ ನೀರು ಸೇರುವ ಸಂಪರ್ಕ ತೋಡುಗಳಿಗೆ ಯುಜಿಡಿ ಅಥವ ಪ್ಲಾಸ್ಟಿಕ್ ತ್ಯಾಜ್ಯ ಸೇರದಂತೆ ವ್ಯವಸ್ಥಿತ ಕ್ರಮ ರೂಪಿಸಬೇಕಿದೆ. ಒಳಚರಂಡಿ ಪಿಟ್‌ಗಳನ್ನು ಈ ತೋಡಿಗೆ ಸಂಪರ್ಕವಾಗದ ರೀತಿಯಲ್ಲಿ ನಿರ್ವಹಿಸಬೇಕು. ಇಲ್ಲದಿದ್ದರೆ ಕೆರೆ ನೀರು ಕಲುಷಿತಗೊಂಡು ಉಡುಪಿ ನಗರದಂತೆ ಜಲಮೂಲ ವ್ಯವಸ್ಥೆ ಸಂಪೂರ್ಣ ಹದಗೆಡಲಿದೆ.
ಜಲಮೂಲ ಸಂರಕ್ಷಣೆ, ಹೂಳು ತೆಗೆಯುವ ಕಾಮಗಾರಿ, ವಿವಿಧ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ 2019ರಲ್ಲಿ 2.50 ಕೋ. ರೂ. ವೆಚ್ಚದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. 2019ರ ಅನಂತರ ಯಾವುದೆ ಅಭಿವೃದ್ಧಿ ಕಾರ್ಯ ಮಣ್ಣಪಳ್ಳದಲ್ಲಿ ನಡೆಯದೆ ಪಾಳುಬಿದ್ದ ಸ್ಥಿತಿಯಲ್ಲಿದೆ. ಅಂದಿನ ಪ್ರಸ್ತಾವನೆಯಲ್ಲಿ ಕೆರೆಯ ಲ್ಯಾಟರೈಟ್ ಕಲ್ಲನ್ನು ಅಗೆದು ಇನ್ನಷ್ಟು ಆಳಮಾಡಿ ಮಳೆ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಳ್ಳುವಂತೆ ಮಾಡುವುದು, 59 ಲಕ್ಷ ರೂ. ವೆಚ್ಚದಲ್ಲಿ ಸೈಕ್ಲಿಂಗ್ ಟ್ರ್ಯಾಕ್ ನಿರ್ಮಿಸುವ ಯೋಜನೆಯೂ ಇದರಲ್ಲಿತ್ತು. ಈ ಮೊದಲು ಕಾರ್ಯಗತಗೊಂಡ ವಾಕಿಂಗ್ ಟ್ರ್ಯಾಕ್, ಗ್ರಂಥಾಲಯ, ಶೌಚಗೃಹ ವ್ಯವಸ್ಥೆ ಉತ್ತಮವಾಗಿಯೇ ಇವೆ. ಈ ಹಿಂದೆ ಶುಲ್ಕ ಪಾವತಿಸಿ ನಡೆಸಲಾಗುತ್ತಿದ್ದ ದೋಣಿ ವಿಹಾರವು ನಿಂತಿದೆ. ಬರಬರುತ್ತ ಸ್ವತ್ಛತೆ ವಿಚಾರದಲ್ಲಿನ ನಿರ್ವಹಣೆ ವ್ಯವಸ್ಥೆ ಸೊರಗಿದೆ. 100ಕ್ಕೂ ಅಧಿಕ ಜಾತಿ ಪಕ್ಷಿಗಳು
ಚಿಟ್ಟೆ ಮತ್ತು ಪಕ್ಷಿಗಳಿದ್ದಲ್ಲಿ ಅದನ್ನು ಆರೋಗ್ಯಕರ ಪರಿಸರ ಎನ್ನಲಾಗುತ್ತದೆ. ಮಣ್ಣಪಳ್ಳವು ಚಿಟ್ಟೆ ಮತ್ತು ಪಕ್ಷಿ ಸಂಕುಲಗಳನ್ನು ತನ್ನೊಡಲಿನಲ್ಲಿ ಇರಿಸಿಕೊಂಡಿದೆ. ಕಳೆದ 12 ವರ್ಷಗಳಲ್ಲಿ ಮಣ್ಣಪಳ್ಳದಲ್ಲಿ 100ಕ್ಕೂ ಅಧಿಕ ಜಾತಿ ಪಕ್ಷಿಗಳನ್ನು ಮಣಿಪಾಲ ಬರ್ಡರ್ಸ್ ಸಂಸ್ಥೆಯೂ ಗುರುತಿಸಿತ್ತು. ಸ್ಥಳೀಯ ಪಕ್ಷಿಗಳ ಸಂತಾನಭಿವೃದ್ಧಿ ಮತ್ತು ಆಹಾರಕ್ಕೆ ಪರಿಸರ ಪೂರಕವಾಗಿದೆ. ಅಲ್ಲದೆ ಪ್ರತೀವರ್ಷ ವಿದೇಶಗಳಿಂದ ಹಕ್ಕಿಗಳು ಇಲ್ಲಿಗೆ ವಲಸೆ ಬರುತ್ತವೆ. ಇದನ್ನು ಮಿನಿ ಪಕ್ಷಿಧಾಮವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ಯೋಜನೆ ರೂಪಿಸಬಹುದು ಎನ್ನುತ್ತಾರೆ ಮಣಿಪಾಲದ ಪಕ್ಷಿಪ್ರೇಮಿಗಳು.
Related Articles
ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ, ಕಾಲಕಾಲಕ್ಕೆ ವ್ಯವಸ್ಥಿತ ನಿರ್ವಹಣೆ, ಅಭಿವೃದ್ಧಿಗಾಗಿ ಮಣ್ಣಪಳ್ಳ ಪರಿಸರವನ್ನು ಸಂಪೂರ್ಣ ವಹಿಸಿಕೊಡುವಂತೆ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಮಂಡಿಸಿ ಜಿಲ್ಲಾಧಿಕಾರಿಗೆ ಈ ಹಿಂದೆಯೇ ಕಳುಹಿಸಲಾಗಿತ್ತು. ಈ ಪ್ರಸ್ತಾವಕ್ಕೆ ಜಿಲ್ಲಾಡಳಿತ ಸ್ಪಂದಿಸಿರಲಿಲ್ಲ. ಮಣ್ಣಪಳ್ಳ ಸಂಬಂಧಿಸಿ ಸ್ಥಳೀಯರಿಂದ ಎಲ್ಲ ದೂರು, ಬೇಡಿಕೆಗಳು ನಗರಸಭೆಗೆ ಹೆಚ್ಚು ಬರುತ್ತವೆ, ನಗರದೊಳಗಿನ ಸುಂದರ ಸ್ಥಳ ಮಣ್ಣಪಳ್ಳವನ್ನು ಉತ್ತಮವಾಗಿ ಅಭಿವೃದ್ಧಿಪಡಿಸಿ, ನಿರ್ವಹಿಸುವ ಕೆಲಸ ಆಗಬೇಕು. ಇದು ನಗರಸಭೆಯಿಂದ ಸಾಧ್ಯವಿದೆ. ಈ ಬಗ್ಗೆ ಶಾಸಕರು, ಜಿಲ್ಲಾಧಿಕಾರಿಯೊಂದಿಗೆ ಮತ್ತೂಮ್ಮೆ ಚರ್ಚಿಸುತ್ತೇವೆ.
– ಸುಮಿತ್ರಾ ನಾಯಕ್, ಅಧ್ಯಕ್ಷೆ, ನಗರಸಭೆ, ಉಡುಪಿ
Advertisement
ಕೋ.ರೂ. ಮಂಜೂರು ಮಣ್ಣಪಳ್ಳ ಅಭಿವೃದ್ಧಿ ಕಾರ್ಯ ಮತ್ತು ಕೆರೆ ಹೂಳೆತ್ತುವ ಕೆಲಸಕ್ಕೆ ಒಂದು ಕೋಟಿ ಅನುದಾನದ ಅನುಮೋದನೆ ಸರಕಾರದಿಂದ ಸಿಕ್ಕಿದ್ದು, ಕಳೆದ ವರ್ಷ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಈ ವಿಶೇಷ ಅನುದಾನ ಮಂಜೂರಾಗಿತ್ತು. ಹೂಳೆತ್ತುವ ಕೆಲಸ, ಅಭಿವೃದ್ಧಿ ಕಾರ್ಯಕ್ಕೆ ಅನುದಾನವು ಪ್ರಾಧಿಕಾರದಲ್ಲಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಣ್ಣಪಳ್ಳ ಅಭಿವೃದ್ಧಿ ಸಮಿತಿ ಸುಪರ್ದಿಯಲ್ಲಿ ಮಣ್ಣಪಳ್ಳ ಪ್ರದೇಶವಿದೆ.
– ರಾಘವೇಂದ್ರ ಕಿಣಿ, ಮಾಜಿ ಅಧ್ಯಕ್ಷ, ನಗರಾಭಿವೃದ್ಧಿ ಪ್ರಾಧಿಕಾರ, ಉಡುಪಿ ಕಾಯಕಲ್ಪ ಹೇಗೆ?
– ಕೆರೆಗೆ ಮಳೆ ನೀರು ಸಂಪರ್ಕಿಸುವ ತೋಡು ತ್ಯಾಜ್ಯ ಸೇರದಂತೆ ವ್ಯವಸ್ಥಿತವಾಗಿಸಬೇಕು.
– ರಾತ್ರಿ ಹಗಲು ಎರಡು ಪಾಳಿಯಲ್ಲಿ ಖಾಸಗಿ ಭದ್ರತ ಸಿಬಂದಿ ನಿಯೋಜನೆ.
– ಎಲ್ಲ ದ್ವಾರಗಳನ್ನು ಬಂದ್ ಮಾಡಿ, ಒಂದೇ ಮುಖ್ಯ ದ್ವಾರದಲ್ಲಿ ಆಗಮನ, ನಿರ್ಗಮನ ವ್ಯವಸ್ಥೆ ಮಾಡಬೇಕು.
– ಪಾರ್ಕ್‌ಗೆ ಭೇಟಿ ಕೊಡುವರಿಗೆ ಪ್ಲಾಸ್ಟಿಕ್ ತಿಂಡಿ ಪೊಟ್ಟಣ, ಪ್ಲಾಸ್ಟಿಕ್ ಬಾಟಲಿ, ಇತರ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವುದು.
– ಮಹಿಳೆಯರು, ಹೆಣ್ಣುಮಕ್ಕಳ ಸುರಕ್ಷತೆಗಾಗಿ, ಅನೈತಿಕ ಚಟುವಟಿಕೆ ಕಡಿವಾಣಕ್ಕೆ ಸಿಸಿಟಿವಿ ವ್ಯವಸ್ಥೆ ಅಳವಡಿಕೆ .
– ಸಸ್ಯ ಮತ್ತು ವನ್ಯಜೀವಿ ತಜ್ಞರ ಸಲಹೆ ಪಡೆದು ಪರಿಸರಕ್ಕೆ ಪೂರಕವಾದ ಗಿಡ, ಮರಗಳನ್ನು ಬೆಳೆಸಬೇಕು.
– ಕಾಲಕಾಲಕ್ಕೆ ಸ್ವತ್ಛತೆ, ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರಬುದ್ಧ ಚಿಂತನೆಯುಳ್ಳ ಸ್ಥಳೀಯ ಮಟ್ಟದ ನಿರ್ವಹಣೆ ಸಮಿತಿ ರಚನೆ ಅಗತ್ಯ.
– ಪಕ್ಷಿ ತಜ್ಞರೊಂದಿಗೆ ಚರ್ಚಿಸಿ ಮಣ್ಣಪಳ್ಳವನ್ನು ಮಿನಿ ಪಕ್ಷಿಧಾಮವಾಗಿ ರೂಪಿಸುವ ಯೋಜನೆ ಅಗತ್ಯ.
– ಕೇವಲ ಪದನಿಮಿತ್ತ ಅಧಿಕಾರಿಗಳ ಉಸ್ತುವಾರಿಯ ಬದಲು ಜನಪ್ರತಿನಿಧಿಗಳು, ಪ್ರಜ್ಞಾವಂತ ನಾಗರಿಕರು, ಪದನಿಮಿತ್ತ ಅಧಿಕಾರಿಗಳನ್ನು ಒಳಗೊಂಡ ಸಮಿತಿಯ ಉಸ್ತುವಾರಿ ಅಗತ್ಯ.