Advertisement

ಮನ್‌ ಕಿ ಬಾತ್‌ @ 100: ರೆಕಾರ್ಡಿಂಗ್‌ ಕೊಠಡಿಯ ವಿಡಿಯೋ ಬಿಡುಗಡೆ

09:15 PM Apr 29, 2023 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ “ಮನದ ಮಾತು” ಮಾಸಿಕ ಬಾನುಲಿ ಕಾರ್ಯಕ್ರಮಕ್ಕೆ ಇಂದು 100ರ ಸಂಭ್ರಮ. ಭಾನುವಾರ 100ನೇ ಆವೃತ್ತಿಯ ಮನ್‌ ಕಿ ಬಾತ್‌ ಪ್ರಸಾರವಾಗಲಿದೆ. ಅದರ ಮುನ್ನಾದಿನವಾದ ಶನಿವಾರ ರೇಡಿಯೋ ಶೋ ರೆಕಾರ್ಡಿಂಗ್‌ ಕೊಠಡಿಯಲ್ಲಿ ಏನೇನು ನಡೆಯುತ್ತದೆ ಎಂಬ ಮಾಹಿತಿ ಹೊಂದಿರುವ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಲಾಗಿದೆ.

Advertisement

ಈ ಬಿಟಿಎಸ್‌(ಬಿಹೈಂಡ್‌ ದಿ ಸೀನ್‌) ವಿಡಿಯೋದಲ್ಲಿ, ಮನ್‌ ಕಿ ಬಾತ್‌ ಪ್ರಸಾರವಾಗುವ ಕಟ್ಟಡಕ್ಕೆ ಮೋದಿ ಆಗಮಿಸುತ್ತಿರುವುದು, ಅಲ್ಲಿನ ಸಿಬ್ಬಂದಿಯೊಂದಿಗೆ ಮಾತನಾಡುತ್ತಿರುವುದು, ನಂತರ 30 ನಿಮಿಷಗಳ ರೇಡಿಯೋ ಕಾರ್ಯಕ್ರಮ ನೀಡಲು ಕೊಠಡಿಯೊಳಗೆ ಪ್ರವೇಶಿಸುತ್ತಿರುವುದು ಮುಂತಾದ ದೃಶ್ಯಗಳಿವೆ. ಅಲ್ಲದೆ, ಯಾವುದೇ ಲಿಖೀತ ಪ್ರತಿ ಇಲ್ಲದೆಯೇ ಅವರು ರೇಡಿಯೋದಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವುದು ಕೂಡ ಕಾಣಿಸುತ್ತದೆ.

ಮರಳುಶಿಲ್ಪ ರಚನೆ
ಒಡಿಶಾದ ಖ್ಯಾತ ಮರಳುಶಿಲ್ಪಿ ಸುದರ್ಶನ್‌ ಪಟ್ನಾಯಕ್‌ ಅವರು ಪುರಿಯ ಬೀಚ್‌ನಲ್ಲಿ ವಿಶಿಷ್ಟ ಮರಳುಶಿಲ್ಪವೊಂದನ್ನು ರಚಿಸಿದ್ದಾರೆ. 100 ರೇಡಿಯೊ ಸೆಟ್‌ಗಳೊಂದಿಗೆ ಪ್ರಧಾನಿ ಮೋದಿ ಕುಳಿತಿರುವಂತೆ ಕಾಣುವ ಮರಳುಶಿಲ್ಪ ಇದಾಗಿದೆ. 8 ಅಡಿ ಎತ್ತರದ ಮರಳುಶಿಲ್ಪಕ್ಕೆ 7 ಟನ್‌ ಮರಳನ್ನು ಬಳಸಲಾಗಿದೆ.

ಗಂಡು ಮಗುವಿಗೆ ಜನ್ಮ
ದೆಹಲಿಯಲ್ಲಿ ಮನ್‌ ಕಿ ಬಾತ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರಿಗೆ ಕಾರ್ಯಕ್ರಮದ ವೇಳೆಯೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಉ.ಪ್ರದೇಶದ ಲಖೀಂಪುರ ಖೇರಿಯಲ್ಲಿ ಸ್ವಸಹಾಯ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೂನಂ ದೇವಿ ಅವರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮದ ವೇಳೆಯೇ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈಗ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next