ಕೆ.ಆರ್.ಪುರ: ಬಸವನಪುರ ವಾರ್ಡ್ ಮಂಜುನಾಥ ಬಡಾವಣೆಗೆ ಹೊಂದಿಕೊಂಡಿರುವ ರಾಜಕಾಲುವೆ ಇಲ್ಲಿನ ನಿವಾಸಿಗಳಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಬಸವನಪುರ ಮಂಜುನಾಥ ಬಡಾವಣೆ 1ನೇ ಬಿ ಅಡ್ಡರಸ್ತೆಯಲ್ಲಿ ಹಾದುಹೋಗಿರುವ ರಾಜಕಾಲುವೆಯು ಚಿಕ್ಕದೇವಸಂದ್ರ ಕೆರೆಯಿಂದ ಸೀಗೆಹಳ್ಳಿಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯಲ್ಲಿ ಮಹದೇವಪುರ, ಗರುಡಚಾರ್ಯಪಾಳ್ಯ, ಕಾವೇರಿ ನಗರ ಸೇರಿ ಮುಂತಾದ ಕಡೆಯಿಂದ ಕೊಳಚೆ ನೀರು ಹರಿಸಲಾಗುತ್ತಿದೆ.
ನಿತ್ಯ ಕೋಳಿತ್ಯಾಜ್ಯ, ಚರಂಡಿನೀರು ಸೇರಿದಂತೆ ಮತ್ತಿತರ ಪದಾರ್ಥಗಳ ತ್ಯಾಜ್ಯ ಕಾಲುವೆ ಸೇರುತ್ತಿರುವುದರಿಂದ ಸುತ್ತಮುತ್ತಲಿನ ಬಡಾವಣೆ ನಿವಾಸಿಗಳಿಗೆ ಕೆಟ್ಟ ವಾಸನೆ ಹಾಗೂ ಸೊಳ್ಳೆಗಳ ಕಾಟ ತಾಳಲಾರದೆ ನರಕಯಾತನೆಯಿಂದ ಜನತೆ ಹೈರಾಣಾರಾಗಿದ್ದಾರೆ.
ಮನೆ ಬಾಗಿಲು, ಕಿಟಿಕಿ ತೆರೆಯುವಂತಿಲ್ಲ, ಸಮೀಪದಲ್ಲೇ ಚೈತನ್ಯ ಶಾಲೆ ಸಹ ಇದ್ದು ಗಬ್ಬುವಾಸನೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗಿದೆ. ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದ್ದು ರೋಗರುಜಿನಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ರಾಜಕಾಲುವೆಯಲ್ಲಿ ತೇಲಿಬರುವ ವಿಷಜಂತುಗಳು ಏಕಾಏಕಿ ಮನೆಗಳಿಗೆ ನುಗ್ಗುತ್ತವೆ ಎಂಬುದು ಇಲ್ಲಿನ ಸಾರ್ವಜನಿಕರ ಆರೋಪವಾಗಿದೆ.
ಈ ಬಗ್ಗೆ ಜನಪ್ರತಿನಿಗಳಿಗೆ, ಅಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ, ಅಲ್ಲದೆ ಮಳೆಗಾಲ ಪ್ರಾರಂಭವಾದರೆ ಇಲ್ಲಿನ ಬಡಾವಣೆ ಜಲಾವೃತವಾಗುತ್ತವೆ, ಹೂಳು ತುಂಬಿಕೊಂಡಿದ್ದು ಗಿಡಗಂಟಿಗಳು ಬೆಳೆದು ನಿಂತಿದ್ದು ಕಾಲುವೆ ನೀರು ಹರಿವಿಗೆ ಅಡ್ಡಿಯಾಗಿದೆ, ಕಳೆದ ಎರಡು ವರ್ಷದ ಹಿಂದೆ ಸುರಿದ ಧಾರಾಕಾರ ಮಳೆಗೆ ಮಂಜುನಾಥ ಬಡಾವಣೆ ಸೇರಿ ಅಕ್ಕಪಕ್ಕದ ಬಡಾವಣೆಗಳು ಜಲಾವೃತವಾಗಿದ್ದವು.
ಅಂದಿನಿಂದ ಇದುವರೆಗೂ ರಾಜಕಾಲುವೆಯಲ್ಲಿರುವ ಗಿಡಗಂಟಿಗಳ ಹೂಳೆತ್ತುವ ಕಾರ್ಯ, ಸ್ಲಾಬ್‌ಗಳ ಅಳವಡಿಕೆ ಕಾರ್ಯಕ್ಕೆ ಮುಂದಾಗದಿರುವುದು ವಿಪರ್ಯಾಸ ಸಂಗತಿಯಾಗಿದೆ. ಬಸವನಪುರ ವಾರ್ಡ್ ಮಂಜುನಾಥ ಬಡಾವಣೆಯಲ್ಲಿ ಹಲವು ವರ್ಷ ಕಳೆದರೂ ಅಭಿವೃದ್ ಮಾತ್ರ ಮರೀಚಿಕೆಯಾಗಿದೆ. ಹದಗೆಟ್ಟ ರಸ್ತೆಗಳು, ಒಳಚರಂಡಿಗಳು ಅವ್ಯವಸ್ಥೆಯಿಂದೆ ಕೂಡಿದ್ದು ಮಳೆಗಾಲದಲ್ಲಿ ರಸ್ತೆ ಮೇಲೆ ಕೊಳಚೆ ನೀರು ಉಕ್ಕಿ ಹರಿಯುತ್ತವೆ.
ಹಲವು ಬಾರಿ ದೂರು ನೀಡಿದರೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಕಾರಿಗಳು ಹಾಗೂ ಜನಪ್ರತಿನಿಗಳು ಎಚ್ಚೆತ್ತುಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.