Advertisement

ದಕ್ಷಿಣ ಕನ್ನಡ: ವಿಧಾನ ಪರಿಷತ್‌ ಚುನಾವಣೆ: ಸ್ಥಾನ ಉಳಿಸಿಕೊಂಡ ಬಿಜೆಪಿ-ಕಾಂಗ್ರೆಸ್‌

12:13 AM Dec 15, 2021 | Team Udayavani |

ಮಂಗಳೂರು: ವಿಧಾನ ಪರಿಷತ್‌ಗೆ ದಕ್ಷಿಣ ಕನ್ನಡದ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ನಿರೀಕ್ಷೆಯಂತೆ ಜಯ ಗಳಿಸಿದ್ದಾರೆ.
ಡಿ. 10ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಮಂಗಳವಾರ ಪಾಂಡೇಶ್ವರದ ರೊಸಾರಿಯೋ ಕಾಲೇಜಿನಲ್ಲಿ ನಡೆಯಿತು.

Advertisement

ಚಲಾವಣೆಯಾದ 5,955 ಸಿಂಧು ಮತಗಳಲ್ಲಿ ಶ್ರೀನಿವಾಸ ಪೂಜಾರಿ 3,672 ಪ್ರಥಮ ಪ್ರಾಶಸ್ತ್ಯದ ಮತಗಳನ್ನು, ಮಂಜುನಾಥ ಭಂಡಾರಿ 2,079 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದರು. ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಅಭ್ಯರ್ಥಿ ಶಾಫಿ ಕೆ. ಬೆಳ್ಳಾರೆ 204 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದರು. ಒಟ್ಟು 56 ಮತಗಳು ಅಸಿಂಧುವಾಗಿದ್ದವು.

12 ಗಂಟೆಗೇ ಫ‌ಲಿತಾಂಶ
ಬೆಳಗ್ಗೆ 7.30ಕ್ಕೆ ಆರಂಭಗೊಂಡ ಮತ ಎಣಿಕೆ ಪ್ರಕ್ರಿಯೆ 12 ಗಂಟೆ ವೇಳೆಗೆ ಬಹುತೇಕ ಮುಗಿದು ಫಲಿತಾಂಶ ಲಭ್ಯವಾಗಿತ್ತು. ಘೋಷಣೆಗೆ ಚುನಾವಣ ಆಯೋಗದ ಅಧಿಕೃತ ಅನುಮತಿ ಅವಶ್ಯವಾಗಿದ್ದ ಹಿನ್ನೆಲೆಯಲ್ಲಿ ಫಲಿತಾಂಶ ಅಧಿಕೃತ ಘೋಷಣೆ ಸುಮಾರು 2 ತಾಸು ವಿಳಂಬವಾಯಿತು.

ಚುನಾವಣಾ ವೀಕ್ಷಕ ಮಣಿವಣ್ಣನ್‌, ಜಿಲ್ಲಾಧಿಕಾರಿಗಳಾದ ಡಾ| ಕೆ.ವಿ. ರಾಜೇಂದ್ರ, ಕೂರ್ಮಾ ರಾವ್‌, ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌, ಜಿ.ಪಂ. ಸಿಇಒ ಡಾ| ಕುಮಾರ್‌, ಡಿಸಿಪಿಗಳಾದ ಹರಿರಾಂ ಶಂಕರ್‌, ದಿನೇಶ್‌ ಕುಮಾರ್‌, ಎಸಿ ಮದನಮೋಹನ್‌, ವಿವಿಧ ತಾಲೂಕುಗಳ ತಹಶೀಲ್ದಾರ್‌ ಹಾಗೂ ಇತರ ಹಿರಿಯ ಅಧಿಕಾರಿಗಳು ಮತ ಎಣಿಕೆ ಕೇಂದ್ರದಲ್ಲಿದ್ದು ಪರಿಶೀಲನೆ ನಡೆಸಿದರು.

ಕಾಣೆಯಾದ ಒಂದು ಮತ!
ಚುನಾವಣ ಆಯೋಗದ ಲೆಕ್ಕಚಾರದಂತೆ ಒಟ್ಟು 6,040ರಲ್ಲಿ 6,012 ಮತಗಳು ಚಲಾವಣೆಯಾಗಿದ್ದವು. ಆದರೆ ಎಣಿಕೆ ಸಂದರ್ಭ ಎಣಿಕೆಗೆ ಸಿಕ್ಕಿದ್ದು 6,011 ಮತಗಳು. ಹಾಗಾದರೆ 1 ಮತ ಎಲ್ಲಿ ಹೋಯಿತು ಎಂಬ ಗೊಂದಲ ಅವರಿಸಿತು. ಪ್ರತೀ ಬೂತ್‌ನಲ್ಲಿ ಮತಗಳ ಸಂಖ್ಯೆಯನ್ನು ಮರು ಪರಿಶೀಲಿಸಿದಾಗ ಸುಳ್ಯದ ಮತಗಟ್ಟೆಯೊಂದರಲ್ಲಿ ಮತದಾರರೋರ್ವರು ಮತಪತ್ರ ಪಡೆದು ಮತ ಚಲಾಯಿಸದಿರುವುದು ಕಂಡುಬಂತು. ಮತದಾರ ಮತಪತ್ರವನ್ನು ಮತಪತ್ರವನ್ನು ತೆಗೆದುಕೊಂಡು ಹೋಗಿರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

Advertisement

ಇದನ್ನೂ ಓದಿ:ಖಡಕ್‌ ಟೀ ಆಗದ್ದಕ್ಕೆ ನೆಟ್ಟಿಗರ ಕೋಪ; ಎನ್‌ಆರ್‌ಐ ವೈದ್ಯ ಸಂಜಯ ಗುಪ್ತಾರಿಂದ ಮಕ್ಕಳಿಗೆ ಪಾಠ

ನಿರೀಕ್ಷೆ ಮತ್ತು ವಾಸ್ತವ
ಬಿಜೆಪಿ 3,700 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆಯುವ ನಿರೀಕ್ಷೆ ಹೊಂದಿತ್ತು. 3,672 ಮತಗಳನ್ನು ಪಡೆದು ನಿರೀಕ್ಷೆಯ ಸನಿಹ ತಲುಪಿದೆ. ಕಾಂಗ್ರೆಸ್‌ ಸುಮಾರು 1,880 ತನ್ನದೇ ಆದ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಹೊಂದಿದ್ದು, …200 ಮತಗಳು ಇತರ ಕಡೆಯಿಂದ ಬರಬಹುದು ಎಂದು ನಿರೀಕ್ಷೆ ಮಾಡಿದ್ದು ಈ ನಿರೀಕ್ಷೆ
ಯನ್ನು ಬಹುತೇಕ ಮುಟ್ಟಿದೆ. ಎಸ್‌ಡಿಪಿಐ ನಿರೀಕ್ಷೆಯಂತೆ ತನ್ನ ಎಲ್ಲ ಮತಗಳನ್ನು ಪಡೆದುಕೊಂಡಿದೆ.

ಮತ ಗಳಿಕೆ: 2015ರ ಚುನಾವಣೆ ಹಿನ್ನೋಟ
2015ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿದ್ದ ಒಟ್ಟು 6,560 ಮತದಾರರಲ್ಲಿ 6,533 ಮಂದಿ ಮತ ಚಲಾಯಿಸಿದ್ದರು. 231 ಮತಗಳು ಅಸಿಂಧುವಾಗಿದ್ದವು; ಇಬ್ಬರು ನೋಟಾ ಮತ ಚಲಾಯಿಸಿದ್ದರು. ಕಾಂಗ್ರೆಸ್‌ನ ಇಬ್ಬರು ಬಂಡಾಯ ಅಭ್ಯರ್ಥಿಗಳು ಸೇರಿದಂತೆ 8 ಮಂದಿ ಕಣದಲ್ಲಿದ್ದರು. ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ 2,977 ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ 2,237 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನಿಂದ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಜಯಪ್ರಕಾಶ ಹೆಗ್ಡೆ 872 ಮತ ಗಳಿಸಿದ್ದರು.

ಈ ಬಾರಿ ನೋಟ ಮತವಿಲ್ಲ
2015ರ ಚುನಾವಣೆಯಲ್ಲಿ 2 ನೋಟಾ ಮತಗಳು ಚಲಾವಣೆಯಾಗಿದ್ದವು. ಈ ಬಾರಿ ಯಾವುದೇ ನೋಟಾ ಮತ ಚಲಾವಣೆಯಾಗಿಲ್ಲ. ಕಳೆದ ಸಾಲಿಗೆ ಹೋಲಿಸಿದರೆ ಅಸಿಂಧು ಮತಗಳ ಪ್ರಮಾಣವೂ ಗಣನೀಯವಾಗಿ ಕಡಿಮೆ. ಕಳೆದ ಬಾರಿ 231 ಮತ ಅಸಿಂಧುವಾಗಿದ್ದರೆ ಈ ಬಾರಿ 56 ಮಾತ್ರ ಅಸಿಂಧುವಾಗಿವೆ. ಚುನಾವಣಾ ಪ್ರಚಾರದ ವೇಳೆ ರಾಜಕೀಯ ಪಕ್ಷಗಳು ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿದ್ದು ಇದಕ್ಕೆ ಕಾರಣವಾಗಿದೆ.

ಕೋಟ 4ನೇ ಬಾರಿ, ಭಂಡಾರಿ
ಪ್ರಥಮ ಬಾರಿ ಪರಿಷತ್‌ಗೆ
ಶ್ರೀನಿವಾಸ ಪೂಜಾರಿ ನಾಲ್ಕನೇ ಬಾರಿಗೆ ವಿಧಾನ ಪರಿಷತ್‌ಗೆ ಪ್ರವೇಶಿಸುತ್ತಿದ್ದಾರೆ. 1960 ಜ. 1ರಂದು ಕೋಟತಟ್ಟುವಿನಲ್ಲಿ ಅಣ್ಣಪ್ಪ ಪೂಜಾರಿ ಹಾಗೂ ಲಚ್ಚಿ ಪೂಜಾರಿ ದಂಪತಿಯ ಪುತ್ರನಾಗಿ ಜನಿಸಿದ ಶ್ರೀನಿವಾಸ ಪೂಜಾರಿ 1993ರಲ್ಲಿ ಕೋಟತಟ್ಟು ಗ್ರಾ.ಪಂ. ಸದಸ್ಯರಾಗಿ, 996ರಲ್ಲಿ ಉಡುಪಿ ತಾ.ಪಂ. ಸದಸ್ಯರಾಗಿ ಆಯ್ಕೆಯಾದರು. 1996 ಮತ್ತು 2004ರಲ್ಲಿ ಎರಡು ಬಾರಿ ವಿಧಾನಸಭೆಗೆ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. 2008ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಕಾಂಗ್ರೆಸ್‌ನ ಬ್ಲೇಸಿಯಸ್‌ ಎಂ. ಡಿ’ಸೋಜಾ ನಿಧನದ ಹಿನ್ನೆಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಶ್ರೀನಿವಾಸ ಪೂಜಾರಿ ಕಾಂಗ್ರೆಸ್‌ ಅಭ್ಯರ್ಥಿಯ ವಿರುದ್ಧ 293 ಮತಗಳ ಅಂತರದಿಂದ ಜಯಿಸುವ ಮೂಲಕ ಪರಿಷತ್‌ ಪ್ರವೇಶಿಸಿದ್ದರು. 2010ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಹಾಗೂ ಶ್ರೀನಿವಾಸ ಪೂಜಾರಿ ಅವಿರೋಧ ಆಯ್ಕೆಯಾಗಿದ್ದರು. 2015ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಮತ್ತೆ ಜಯ ಗಳಿಸಿದ್ದರು. ಇದೀಗ ನಾಲ್ಕನೇ ಬಾರಿಗೆ ಗೆಲುವಿನ ಯಾತ್ರೆ ಮುಂದುವರಿಸಿದ್ದಾರೆ. ಬಂದರು, ಒಳನಾಡು ಜಲ ಸಾರಿಗೆ, ಮುಜರಾಯಿ ಸಚಿವರಾಗಿ, ವಿಧಾನ ಪರಿಷತ್‌ ವಿಪಕ್ಷ ನಾಯಕನ ಹುದ್ದೆಯನ್ನು ನಿರ್ವಹಿಸಿರುವ ಕೋಟ ಪ್ರಸ್ತುತ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದಾರೆ.

ಇದನ್ನೂ ಓದಿ:ಸಿದ್ಧ ಆಹಾರಕ್ಕೆ ಬಳಸಿದ ಸಾಮಗ್ರಿ ವಿವರ ಕಡ್ಡಾಯ; ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು

ಗೆಲುವು ಕಾರ್ಯಕರ್ತರಿಗೆ ಸಮರ್ಪಣೆ: ಕೋಟ
ಮತ್ತೊಮ್ಮೆ ಗೆಲುವು ಅತ್ಯಂತ ಸಂತಸ ತಂದಿದೆ. ಇದು ಮತದಾರರ ಗೆಲುವು ಆಗಿದೆ. ಶ್ರೇಯಸ್ಸನ್ನು ಕಾರ್ಯಕರ್ತರಿಗೆ ಸಮರ್ಪಿಸುತ್ತೇನೆ. ಬಿಜೆಪಿ ಸುಮಾರು 3,500 ಮತಗಳನ್ನು ಹೊಂದಿತ್ತು. ಆದರೆ ನನಗೆ ಸುಮಾರು 3,672 ಮತಗಳು ಬಂದಿವೆ ಎಂದು ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಾಯತ್‌ ರಾಜ್‌ ವ್ಯವಸ್ಥೆಯ ಸಶಕ್ತೀಕರಣ ಮತ್ತು ಪಕ್ಷದ ಸಂಘಟನೆಗೆ ನನ್ನ ಸಮಯವನ್ನು ವಿನಿಯೋಗಿಸುತ್ತೇನೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಖಾತೆ ಸಚಿವನಾಗಿ ನನ್ನ ಕರ್ತವ್ಯವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ. ಇನ್ನು ಮುಂದೆಯೂ ಇದೇ ಮಾದರಿಯಲ್ಲಿ ಕೆಲಸ ಮಾಡುತ್ತೇನೆ ಎಂದರು.

ಮಂಜುನಾಥ ಭಂಡಾರಿ
ಹೊಸ ಅಧ್ಯಾಯ
ಮಂಜುನಾಥ ಭಂಡಾರಿ ಪರಿಷತ್‌ ಸದಸ್ಯರಾಗಿ ಆಯ್ಕೆ ಯಾಗುವುದರೊಂದಿಗೆ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸಿದ್ದಾರೆ.

ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮ ಕಮ್ಮಾಜೆಯಲ್ಲಿ ಕೊಳಂಬೆಗುತ್ತು ವೆಂಕಪ್ಪ ಭಂಡಾರಿ ಹಾಗೂ ರಾಧಾ ಭಂಡಾರಿ ದಂಪತಿಯ ಪುತ್ರರಾಗಿ ಜನಿಸಿದ ಮಂಜುನಾಥ ಮಂಗಳೂರಿನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾಗಿದ್ದಾರೆ. ಎಂಜಿನಿಯರಿಂಗ್‌ ಪದವೀಧರಾಗಿದ್ದು, ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಂಚಾಯತ್‌ರಾಜ್‌ ವ್ಯವಸ್ಥೆಯ ಬಗ್ಗೆ ಮಂಡಿಸಿರುವ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ.
ಈ ಹಿಂದೆ 2014ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚಿಕ್ಕಮಗಳೂರು ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷರಾಗಿ, ಯುವ ಕಾಂಗ್ರೆಸ್‌ ಅಖಿಲ ಭಾರತ ಕಾರ್ಯದರ್ಶಿ, ಕೆಪಿಸಿಸಿ ಕಾರ್ಯದರ್ಶಿ, ಉಪಾಧ್ಯಕ್ಷರಾಗಿಯೂ ಭಂಡಾರಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಎಐಸಿಸಿ ಸದಸ್ಯರಾಗಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರ
ಗೆಲುವು: ಭಂಡಾರಿ
ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಪಕ್ಷ ಈ ಅವಕಾಶವನ್ನು ನೀಡಿದೆ. ನನ್ನ ಗೆಲುವು ಕಾಂಗ್ರೆಸ್‌ ಪಕ್ಷದ, ಕಾರ್ಯಕರ್ತರ ಗೆಲುವು. ನನ್ನ ಗೆಲುವಿಗೆ ಪಕ್ಷದ ಮತವಲ್ಲದೆ ಸುಮಾರು 300ಕ್ಕೂ ಅಧಿಕ ಪ್ರಥಮ
ಪ್ರಾಶಸ್ತ¤Âದ ಮತಗಳ ಆವಶ್ಯಕತೆ ಇತ್ತು. ಈ 300 ಮತಗಳು 2 ಜಿಲ್ಲೆಗಳ ಜಿಲ್ಲಾಧ್ಯಕ್ಷರು, ನಾಯಕರು,
ಪಕ್ಷದ ಕಾರ್ಯಕರ್ತರ ಶ್ರಮ ಮತ್ತು ಮತದಾರರ ಬೆಂಬಲದಿಂದ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಮಂಜುನಾಥ ಭಂಡಾರಿ ಹೇಳಿದ್ದಾರೆ. ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಪಂಚಾಯತ್‌ ರಾಜ್‌ ವ್ಯವಸ್ಥೆಯ ಬಗ್ಗೆ ನಾನು ಹೊಂದಿರುವ ಜ್ಞಾನವನ್ನು ಈ ವ್ಯವಸ್ಥೆಯನ್ನು ಬಲಪಡಿಸಲು ಯಾವ ರೀತಿಯಾಗಿ ಉಪಯೋಗಿಸಿಕೊಳ್ಳಬಹುದು ಎಂಬ ಬಗ್ಗೆ ಅಧ್ಯಯನ ಮಾಡಿ ಶ್ರಮಿಸುತ್ತೇನೆ ಎಂದರು.

ಒಂದು ಮತದ ಮೌಲ್ಯ 100
ಅಭ್ಯರ್ಥಿಯ ಗೆಲುವಿಗೆ ನಿಗದಿಪಡಿಸಿದ ಕೋಟಾದಷ್ಟು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆಯಬೇಕು. ನಿಗದಿತ ಮತ ಕೋಟಾ ಒಟ್ಟು ಸಿಂಧು ಮತಗಳು ಭಾಗಿಸು ಚುನಾವಣಾ ಕಣದಲ್ಲಿರುವ ಅಭ್ಯರ್ಥಿ ಮತ್ತು ಪ್ಲಸ್‌ 1 ಆಗಿರುತ್ತದೆ. ಇದರಂತೆ ದ.ಕ. ಸ್ಥಳೀಯಾಡಳಿತ ಪ್ರಾಧಿಕಾರ ಕ್ಷೇತ್ರದಲ್ಲಿ ನಿಗದಿತ ಕೋಟಾ ಮತ 1,985 ಆಗಿತ್ತು. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ನಿಗದಿತ ಕೋಟಗಿಂತ ಜಾಸ್ತಿ ಪ್ರಥಮ ಪ್ರಾಶಸ್ತ್ಯಗಳನ್ನು ಪಡೆದ ಹಿನ್ನೆಲೆಯಲ್ಲಿ ದ್ವಿತೀಯ ಪ್ರಾಶಸ್ತ್ಯದ ಮತಗಳ ಎಣಿಕೆಯ ಆವಶ್ಯಕತೆ ಉಂಟಾಗಲಿಲ್ಲ. ಪ್ರಥಮ ಪ್ರಾಶಸ್ತ್ಯದ ಒಂದು ಮತದ ಮೌಲ್ಯ 100 ಆಗಿದ್ದು ಅದರಂತೆ ಶ್ರೀನಿವಾಸ ಪೂಜಾರಿ ಪಡೆದ ಮತಗಳ ಮೌಲ್ಯ 3,67,200 ಹಾಗೂ ಮಂಜುನಾಥ ಭಂಡಾರಿ ಪಡೆದ ಮತಗಳ ಮೌಲ್ಯ2,07,900 ಹಾಗೂ ಶಾಫಿ ಪಡೆದ ಮತಗಳ ಮೌಲ್ಯ 20,400.

ಹಾಲಿ ಅವಧಿ 2022 ಜ. 5ಕ್ಕೆ ಮುಕ್ತಾಯ
ದ.ಕ. ಸ್ಥಳೀಯಾಡಳಿತ ಪ್ರಾಧಿಕಾರ ಕ್ಷೇತ್ರವನ್ನು ಪ್ರಸ್ತುತ ಪ್ರತಿನಿಧಿಸುತ್ತಿರುವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಪ್ರತಾಪಚಂದ್ರ ಶೆಟ್ಟಿ ಅವರ ಸದಸ್ಯತ್ವ ಅವಧಿ 2022ರ ಜ. 5ಕ್ಕೆ ಕೊನೆಗೊಳ್ಳಲಿದೆ. ಇದರಲ್ಲಿ ಕೋಟ ಮರು ಆಯ್ಕೆಯಾಗಿದ್ದಾರೆ. ಪ್ರತಾಪಚಂದ್ರ ಶೆಟ್ಟಿ ಈ ಬಾರಿ ಸ್ಪರ್ಧಿಸದೆ ಬದಲಿಗೆ ಮಂಜುನಾಥ ಭಂಡಾರಿ ಕಣಕ್ಕಿಳಿದಿದ್ದರು

Advertisement

Udayavani is now on Telegram. Click here to join our channel and stay updated with the latest news.

Next