ಬೆಂಗಳೂರು: “ಕ್ಯಾಮೆರಾ ಎದುರಿಸದ, ಮೈಕ್ ಹಿಡಿಯದ ಅನಕ್ಷರಸ್ಥರು, ದುರ್ಬಲವರ್ಗದವರು, ಮಂಗಳಮುಖೀಯರು, ವೇಶ್ಯೆಯರು ಸೇರಿದಂತೆ ಎಲೆಮರೆಕಾಯಿಯಂತಿದ್ದ ಪ್ರತಿಭೆಗಳಿಗೆ “ಮಧುರ ಮಧುರವೀ ಮಂಜುಳಗಾನ…’ ಮೂಲಕ ವೇದಿಕೆ ಕಲ್ಪಿಸಿದ್ದು ನನ್ನ ಜೀವನದ ಪ್ರಮುಖ ಘಟ್ಟ’ ಎಂದು ದೂರರ್ಶನ ದಕ್ಷಿಣ ಭಾಗದ ಹೆಚ್ಚವರಿ ನಿರ್ದೇಶಕ ನಾಡೋಜ ಡಾ. ಮಹೇಶ್ ಜೋಶಿ ಹೇಳಿದರು.
ಭಾನುವಾರ ದಯಾನಂದಸಾಗರ ಕಾಲೇಜಿನಲ್ಲಿ ಮಹೇಶ್ ಜೋಶಿ ಅಭಿಮಾನಿ ಬಳಗ ಆಯೋಜಿಸಿದ್ದ” ಷಷ್ಠ್ಯಭ್ಧಿ ಅಭಿನಂದನಾ’ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಚಂದನ ವಾಹಿನಿಯಲ್ಲಿ ನಾನು ರೂಪಿಸಿದ ಮಧುರ ಮಧುರವೀ ಮಂಜುಳಗಾನ ನನ್ನ ಜೀವನದ ಪ್ರಮುಖ ಘಟ್ಟ. ಅದು ಬೆಂಗಳೂರಿಗೆ ಸೀಮಿತವಾಗದೇ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ಗಳಿಸಿದ್ದು ಅವಿಸ್ಮರಣೀಯ,’ ಎಂದರು.
“ಏರುಪೇರಿನಿಂದ ಕೂಡಿದ ಬಾಳಪಯಣ ಬದುಕಿಗೆ ಜೀವಂತಿಕೆ, ಪ್ರಬುದ್ಧತೆ ತಂದುಕೊಟ್ಟಿದೆ. ಜೀವನದ ಪಯಣವೇ ಕುರುಕ್ಷೇತ್ರದಂತೆ ಸಾಗುತ್ತಿದ್ದಾಗ ಬೆನ್ನೆಲುಬಾಗಿ ಸಹಕರಿಸಿದ ಅಭಾರಿಯಾಗಿರುವೆ. ಜೂನ್ 30ರಂದು ಸೇವೆಯಿಂದ ನಿವೃತ್ತನಾದರೂ ಕನ್ನಡ, ಕನ್ನಡಿಗರ ಸೇವೆ ಮುಂದುವರಿಸುತ್ತೇನೆ. ಅದಕ್ಕೆ ಎಲ್ಲರ ಸಹಕಾರ ಬೇಕು,’ ಎಂದು ಕೋರಿದರು.
ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ವೆಂಕಟಾಚಲಯ್ಯ ಮಾತನಾಡಿ, “ಸದಾ ಕ್ರೀಯಾಶೀಲವಾಗಿ, ಪ್ರಾಮಾಣಿಕ ಹಾಗೂ ಬದ್ಧತೆಯಿಂದ ಮಹೇಶ್ ಜೋಶಿ ಕೆಲಸ ಮಾಡುತ್ತಾರೆ. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅನೇಕ ಕಾರ್ಯಕ್ರಮಗಳನ್ನು ಜೋಶಿ ಕೊಟ್ಟಿದ್ದಾರೆ. ಅವರ ಈ ಸೇವೆ ಮತ್ತಷ್ಟು ಮುಂದುವರಿಯಲಿ,’ ಎಂದು ಹಾರೈಸಿದರು.
ಮಾಜಿ ಸಚಿವ ಪಿ.ಜಿ ಆರ್ ಸಿಂಧ್ಯಾ ಮಾತನಾಡಿ, ” ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ದೆಹಲಿಗೆ ತಲುಪಿಸಿದ ಸಾಧಕ ಜೋಶಿ. ಅರವತ್ತರ ಪ್ರಾಯದಲ್ಲೂ 20ರ ತರುಣರ ಉತ್ಸಾಹದಲ್ಲಿ ಅವರು ಜವಾಬ್ದಾರಿ ನಿರ್ವಹಿಸುತ್ತಾರೆ’ ಎಂದರು.
ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲಸ್ವಾಮೀಜಿ, ಚನ್ನಗಿರಿ ಮಠದ ಬಸವಲಿಂಗಸ್ವಾಮೀಜಿ, ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್ ವೆಂಕಟಾಚಲಯ್ಯ, ನ್ಯಾ. ವಿ ಗೋಪಾಲಗೌಡ, ಶಿವರಾಜ್ ಪಾಟೀಲ್, ಹೈಕೋರ್ಟ್‌ನ ನ್ಯಾಯಮೂರ್ತಿ ರವಿ ಮಳೀಮಠ, ನಿವೃತ್ತ ರಾಜ್ಯಪಾಲ ರಾಮಜೋಯಿಸ್, ಡಿಜಿಪಿ ಆರ್.ಕೆ ದತ್ತಾ, ಮಾಜಿ ಸಚಿವೆಯರಾದ ಬಿ.ಟಿ ಲಲಿತಾನಾಯಕ್, ಲೀಲಾವತಿ ಪ್ರಸಾದ್‌ರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಪ್ರಧಾನಿ ಮೋದಿಯಿಂದ ಅಭಿನಂದನೆ: ಷಷ್ಠ್ಯಭ್ಧಿಯ ಸಂಭ್ರಮದಲ್ಲಿರುವ ಜೋಶಿಯವರಿಗೆ ಪ್ರಧಾನಿ ನರೇಂದ್ರಮೋದಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಸಿಎಂ ಸಿದ್ದರಾಮಯ್ಯ, ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರೀ ದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪತ್ರದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.