ಮಂಜೇಶ್ವರ: ಕನ್ನಡ ಪರ ಅಪಾರ ಕಾಳಜಿ ಹೊಂದಿದ್ದ ಕೇರಳದ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಬ್ದುಲ್ ರಜಾಕ್ ಅವರು ಶನಿವಾರ ನಸುಕಿನ ವೇಳೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.ಅವರಿಗೆ 63 ವರ್ಷ ವಯಸ್ಸಾಗಿತ್ತು.
ಹೃದ್ರೋಗಿಯಾಗಿದ್ದ ಅವರು ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಮುಸ್ಲಿಂ ಲೀಗ್‌ನ ಪ್ರಮುಖ ನಾಯಕರಲ್ಲಿ ಅಬ್ದುಲ್ ರಜಾಕ್ ಅವರು ಒಬ್ಬರಾಗಿದ್ದರು. 2011 ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದರು.
2016 ರಲ್ಲಿ ಬಿಜೆಪಿಯ ಸುರೇಂದ್ರನ್ ಅವರ ವಿರುದ್ಧ ಕೇವಲ 85 ಮತಗಳಿಂದ ಅಚ್ಚರಿಯ ಗೆಲುವು ಸಾಧಿಸಿ ಕೇರಳ ವಿಧಾನಸಭೆ ಪ್ರವೇಶಿದ್ದ ರಜಾಕ್ ಅವರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಸುದ್ದಿಯಾಗಿದ್ದರು. ಕಾಸರಗೋಡು ಭಾಗದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ನಡೆಯುತ್ತಿದ್ದ ಹೋರಾಟಕ್ಕೆ ಧ್ವನಿಯಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸಂಜೆ 5 ಗಂಟೆಗೆ ಕಾಸರಗೋಡಿನ ಅಲಂಬಾಡಿ ಜುಮ್ಮಾ ಮಸೀದಿಯಲ್ಲಿ ಅಂತಿಮ ವಿಧಿ ನಡೆಯಲಿದೆ.