Advertisement
ಕಾಸರಗೋಡಿನ ಮಂಜೇಶ್ವರದಲ್ಲಿ ಜನಿಸಿದ ಮಂಜೇಶ್ವರ ಗೋವಿಂದ ಪೈಯವರು ಕರ್ನಾಟಕದ ಪ್ರಥಮ “ರಾಷ್ಟ್ರಕವಿ’ ಬಿರುದಾಂಕಿತರು. 1893ರ ಮಾ.23ರಿಂದ 1963ರ ಸೆ. 6ರ ವರೆಗೆ ಇವರ ಜೀವಿತಾವಧಿ. ಚೆನ್ನೈಯಲ್ಲಿ ಡಾ| ಎಸ್.ರಾಧಾಕೃಷ್ಣನ್ ಅವರು ಪೈಯವರ ಸಹಪಾಠಿಯಾಗಿದ್ದರು. ಪಂಜೆ ಮಂಗೇಶ ರಾಯರು ಇವರ ಗುರುಗಳು. ತಂದೆಯವರ ಮರಣದಿಂದ ಬಿ.ಎ. ಪರೀಕ್ಷೆಯನ್ನು ಬರೆಯಲಾಗದಿದ್ದರೂ ಇವರ ಅಪೂರ್ವ ಸಾಂಸ್ಕೃತಿಕ, ಐತಿಹಾಸಿಕ, ಸಾಮಾಜಿಕ ಸಂಶೋಧನ ಸೇವೆ ನಾಡಿಗೆ ಸಮರ್ಪಣೆಯಾಯಿತು.
Related Articles
ಗೋವಿಂದ ಪೈಯವರು 1963ರಲ್ಲಿ ನಿಧನ ಹೊಂದಿದ ಬಳಿಕ 1965ರಲ್ಲಿ ಅವರ ಬಂಧುಗಳು ಅವರ ಗ್ರಂಥ ಭಂಡಾರವನ್ನು ಉಡುಪಿ ಎಂಜಿಎಂ ಕಾಲೇಜಿಗೆ ಹಸ್ತಾಂತರಿಸಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ| ಕು.ಶಿ. ಹರಿದಾಸ ಭಟ್ಟರ ನೇತೃತ್ವದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಆರಂಭವಾಯಿತು. ಪೈಯವರ ಗ್ರಂಥ ಪ್ರಕಾಶನ, ವಿಚಾರಗೋಷ್ಠಿಗಳನ್ನು ನಡೆಸಲಾಗುತ್ತಿತ್ತು. 1979ರಲ್ಲಿ ಮಹತ್ವದ ತುಳು ನಿಘಂಟು ಯೋಜನೆ ಆರಂಭವಾಯಿತು. ಸಂಶೋಧನ ಕೇಂದ್ರದಿಂದ ಇತ್ತೀಚೆಗೆ ಸಂಶೋಧನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಗೋವಿಂದ ಪೈಯವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಮಂಜೇಶ್ವರದಲ್ಲಿ “ಗಿಳಿವಿಂಡು’ ಮತ್ತು ಗೋವಿಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಸ್ಮಾರಕಗಳಾಗಿವೆ.
Advertisement