ಹೊಸದಿಲ್ಲಿ: ಮಣಿಪುರದ ಸೇನಾಪತಿ ಜಿಲ್ಲೆಯ ಲಿಸಾಂಗ್ ಗ್ರಾಮಕ್ಕೆ ಶನಿವಾರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಈ ಮೂಲಕ ಸರಕಾರ ಗುರುತಿಸಿದ ಗ್ರಾಮಗಳ ಪೈಕಿ ಕಟ್ಟಕಡೆಯ ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಮಹತ್ವದ ಯಶಸ್ಸು ಸಾಧಿಸಿದಂತಾಗಿದೆ. ಈ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಣೆ ಮಾಡಿದ್ದಾರೆ
ರವಿವಾರ ಟ್ವೀಟ್ ಮಾಡಿರುವ ಅವರು, ‘2018ರ ಎ.28 ಭಾರತದ ಅಭಿವೃದ್ಧಿ ಇತಿಹಾಸದಲ್ಲಿ ನೆನಪಿಡಬೇಕಾದ ದಿನ. ದೇಶದ ಇತರ ಭಾಗಗಳಂತೆ ಮಣಿಪುರದ ಲಿಸಾಂಗ್ ಗ್ರಾಮಕ್ಕೂ ಈಗ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಮಾಹಿತಿ ದೇಶದ ಪ್ರತಿಯೊಬ್ಬರು ಹೆಮ್ಮೆಪಡುವಂಥದ್ದಾಗಿದೆ. ಜತೆಗೆ ಭಾರತದ ಪ್ರತಿ ಗ್ರಾಮದಲ್ಲಿಯೂ ಈಗ ವಿದ್ಯುತ್ ಸಂಪರ್ಕ ಇದೆ ಎಂದು ಹೇಳಲು ಸಂತೋಷವಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಕೇಂದ್ರ ಸರಕಾರ ನೀಡಿದ ಮಾಹಿತಿ ಪ್ರಕಾರ, 5,97,464 ಗ್ರಾಮಗಳಿಗೆ ಈಗ ವಿದ್ಯುತ್ ಸಂಪರ್ಕ ಪೂರ್ಣಗೊಂಡಿದೆ. ಅದಕ್ಕಾಗಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (ಡಿಡಿಯುಜಿಜೆವೈ)ಯನ್ನು ಸರಕಾರಿ ಸ್ವಾಮ್ಯದ ಗ್ರಾಮೀಣ ವಿದ್ಯುದೀಕರಣ ನಿಗಮ (ಆರ್‌ಇಸಿ) ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಗಾಗಿ ಕೇಂದ್ರ ಈ ವರೆಗೆ 75,893 ಕೋ.ರೂ. ವೆಚ್ಚ ಮಾಡಿದೆ.
ಯೋಜನೆ ಜಾರಿ ಮಾಡುವ ಸಂದರ್ಭದಲ್ಲಿ 18,452 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಹೆಚ್ಚಿನ ಸಮೀಕ್ಷೆ ನಡೆಸಿದ ವೇಳೆ ವಿದ್ಯುತ್ ಸಂಪರ್ಕ ಇರದ ಹೆಚ್ಚುವರಿ 1,275 ಗ್ರಾಮಗಳು ಪತ್ತೆಯಾಗಿದ್ದವು. ಎ.28ರ ಬಳಿಕ 1,236 ಗ್ರಾಮಗಳಲ್ಲಿ ಜನವಸತಿ ಇಲ್ಲದಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಲಿಸಾಂಗ್ ಗ್ರಾಮದಲ್ಲಿ ಹತ್ತು ಕುಟುಂಬಗಳಿದ್ದು, 65 ಮಂದಿ ಇದ್ದಾರೆ. 2015ರ ಸ್ವಾತಂತ್ರ್ಯ ದಿನ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 1 ಸಾವಿರ ದಿನಗಳ ಒಳಗಾಗಿ ‘ದೀನ್ ದಯಾಳ್ ಗ್ರಾಮ ಜ್ಯೋತಿ ಯೋಜನೆ’ ವ್ಯಾಪ್ತಿಯಲ್ಲಿ ದೇಶದ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ವಾಗ್ಧಾನ ನೀಡಿದ್ದರು.
ಒಂದು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದ್ದರೆ ಅದಕ್ಕೆ ಬೇಕಾಗಿರುವ ಮೂಲ ಸೌಕರ್ಯಗಳು ಇರಬೇಕು, ಶೇ.10ರಷ್ಟು ಮನೆಗಳಿರಬೇಕು, ಶಾಲೆ, ಪಂಚಾಯತ್ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕು. 2019ರ ಮಾರ್ಚ್ ಒಳಗಾಗಿ ದೇಶದ 4 ಕೋಟಿ ಕುಟುಂಬಗಳಿಗೆ ಪ್ರಧಾನಮಂತ್ರಿ ಸಹಜ್ ಬಿಜಿಲಿ ಹರ್ ಘರ್ ಯೋಜನಾ (ಸೌಭಾಗ್ಯ- Saubhagya), ಅಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕೇಂದ್ರ ಸರಕಾರ ಗುರಿ ಹಾಕಿಕೊಂಡಿದೆ.
5,97,464- ಸಮೀಕ್ಷೆ ನಡೆಸಲಾಗಿರುವ ಒಟ್ಟು ಗ್ರಾಮಗಳು.
18,452 - 2015 ಎ.1ರ ಮಾಹಿತಿ ಪ್ರಕಾರ ವಿದ್ಯುತ್ ಸಂಪರ್ಕ ಇರದಿದ್ದ ಗ್ರಾಮಗಳು.
1,275- ವಿದ್ಯುತ್ ಇರದಿದ್ದ ಹೆಚ್ಚುವರಿ ಗ್ರಾಮಗಳು.
988- ದಿನಗಳಲ್ಲಿ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಹೆಗ್ಗಳಿಕೆ.
ಒಂದು ದಿನದಲ್ಲಿ 16 ಗ್ರಾಮಗಳು ಮತ್ತು ಅರ್ಧ ಗ್ರಾಮಕ್ಕೆ ವಿದ್ಯುತ್ ಸಂಪರ್ಕ