ಕಟಪಾಡಿ: ಮಣಿಪುರ ಗ್ರಾ.ಪಂ. ವ್ಯಾಪ್ತಿಯಲ್ಲಿನ ಪೊಸಮಠದ ಬಳಿ ಪಾಪನಾಶಿನಿ ಹೊಳೆಗೆ ಸೇತುವೆ ನಿರ್ಮಿಸಲು 1997ರ ನ.2ರಂದು ಮುಹೂರ್ತ ನಡೆಸಿದ ಅಮೃತ ಶಿಲೆಯ ಮಾಹಿತಿ ಫಲಕವು ಕಂಡು ಬಂದಿದ್ದು, ಈ ಅಮೃತ ಫಲಕ ಮಾತ್ರ ಬೆಳ್ಳಿಹಬ್ಬ ಆಚರಿಸುವಂತಾಗಿದೆ. ಪಾಪನಾಶಿನಿ ತೀರ್ಥ ಕ್ಷೇತ್ರ ದೇವರಗಿರಿ ಪ್ರದೇಶದಲ್ಲಿ ಇಂದಿಗೂ ಸೇತುವೆ ನಿರ್ಮಾಣಗೊಂಡಿಲ್ಲ.
ಫಲಕದಲ್ಲಿ ಅಂದಿನ ಬಂದರು, ಮೀನುಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕರಾಗಿದ್ದ ಯು.ಆರ್ ಸಭಾಪತಿ, ವಸಂತ ವಿ. ಸಾಲಿಯಾನ್ ಅವರ ಹೆಸರುಗಳಿವೆ. ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿರುವರೆಂದೂ, ಅಮೃತ ಶಿಲೆಯ ಕೊಡುಗೆ ಕೆ. ವಾಮನ ಬಾಳಿಗ (ಹೊಟೇಲ್ ದ್ವಾದಶಿ ಕಲ್ಸಂಕ) ಎಂದೂ ಇದೆ.
ಮಣಿಪುರದ ಪೊಸಮಠ ಹಾಗೂ ಕುಂಜಾರುಗಿರಿಗೆ ಈ ಸಂಪರ್ಕ ಸೇತುವೆಯ ಮೂಲಕ ನೇರ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಲಿದೆ. ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದ ಕುಂಜಾರಮ್ಮನ ಜಳಕಕ್ಕೆ ಬರುವ ಸಂದರ್ಭ ಇಂದಿಗೂ ಒಂದು ಕಿ.ಮೀ. ನಷ್ಟು ದೂರವನ್ನು ದೋಣಿ ಬಳಸಿಯೇ ಪಾಪನಾಶಿನಿ ಹೊಳೆಯನ್ನು ದಾಟಿ ಪೊಸಮಠಕ್ಕೆ ದೇವರು ಬರುವ ಸಂಪ್ರದಾಯ ಚಾಲ್ತಿಯಲ್ಲಿದೆ. ದೇವರ ಸೇವೆಗೆ ದೆಂದೂರು, ಮಣಿಪುರ ಭಾಗದ ಸುಮಾರು 400ಕ್ಕೂ ಅಧಿಕ ಭಕ್ತರು ಇಂದಿಗೂ ಇಲ್ಲಿ ಜಮಾಯಿಸುತ್ತಾರೆ.
25 ವರ್ಷಗಳ ಹಿಂದೆಯೇ ಇಲ್ಲಿ ಸೇತುವೆಯು ನಿರ್ಮಾಣಗೊಂಡಿದ್ದಲ್ಲಿ ಮಣಿಪುರ ಮತ್ತು ಕುರ್ಕಾಲು ಉಭಯ ಗ್ರಾಮಗಳಲ್ಲಿ ಮತ್ತಷ್ಟು ಅಭಿವೃದ್ಧಿಯು ಕಾಣಲು ಸಾಧ್ಯವಾಗುತ್ತಿತ್ತು. ಆದರೆ ಸೇತುವೆ ನಿರ್ಮಾಣಗೊಳ್ಳದೆ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಈ ಭಾಗದಲ್ಲಿ ಸುಸಜ್ಜಿತ ಸಂಪರ್ಕ ಸೇತುವೆಯನ್ನು ನಿರ್ಮಿಸಿ ಶಾಲೆಯ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ದೇವರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲತೆಯನ್ನು ಕಲ್ಪಿಸಿ ಗ್ರಾಮದ ಅಭಿವೃದ್ಧಿಯಲ್ಲಿ ಕೈ ಜೋಡಿಸುವಂತೆ ನಾಗರಿಕರು ಆಗ್ರಹಿಸುತ್ತಿದ್ದಾರೆ.
ಈ ಸೇತುವೆಯಿಂದ ಕುರ್ಕಾಲು ಗ್ರಾಮದ ಕುಂಜಾರುಗಿರಿಗೆ ನೇರ ಸಂಪರ್ಕ ಸಾಧ್ಯವಾಗಲಿದ್ದು ಆನಂದತೀರ್ಥ ವಿದ್ಯಾಲಯಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಹತ್ತಿರದ ದಾರಿಯಾಗಲಿದೆ. ಕುಂಜಾರುಗಿರಿಯಿಂದ ಸುತ್ತು ಬಳಸಿ ಉಡುಪಿ, ಮಣಿಪಾಲಕ್ಕೆ ಸಾಗುವ ಬದಲಿಗೆ ಬಹಳಷ್ಟು ಹತ್ತಿರದ ಸಂಪರ್ಕ ಸೇತುವೆಯಾಗಲಿದೆ.
-ಸಂತೋಷ್ ಶೆಟ್ಟಿ,ಸದಸ್ಯರು, ಮಣಿಪುರ ಗ್ರಾ.ಪಂ
ವೆಂಟೆಡ್ ಡ್ಯಾಂ ನಿರ್ಮಾಣ ಆಗಬೇಕೆಂಬ ಜನರ ಬೇಡಿಕೆ ಇದ್ದಲ್ಲಿ ಸಣ್ಣ ನೀರಾವರಿ ಇಲಾಖೆಯು ಹೊಸ ಪ್ರಸ್ತಾವನೆ ಮೂಲಕ ಯೋಜನೆಯನ್ನು ರೂಪಿಸಲಾಗುತ್ತದೆ.
-ಮಮತಾ, ಎ.ಇ., ಸಣ್ಣ ನೀರಾವರಿ ಇಲಾಖೆ
ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಲ್ಲಿ ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಆದ್ಯತೆಯ ಮೇರೆಗೆ ಶಾಸಕರ ಶಿಫಾರಸ್ಸಿನಂತೆ ಯೋಜನೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ಮುಂದಾಗಲಿದ್ದೇವೆ.
-ಸವಿತಾ, ಎ.ಇ.
ಲೋಕೋಪಯೋಗಿ ಇಲಾಖೆ
ವಿಜಯ ಆಚಾರ್ಯ ಉಚ್ಚಿಲ