ಇಂಫಾಲ : ಹಿಂಸಾಚಾರ ಪೀಡಿತ ಮಣಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಎನ್.ಬಿರೇನ್ ಸಿಂಗ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
”ಈ ನಿರ್ಣಾಯಕ ಘಟ್ಟದಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ.” ಎಂದು ಬಿರೇನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಗುರುವಾರ ರಾಜ್ಯದಲ್ಲಿ ಮತ್ತೆ ಹಿಂಸಾಚಾರ ನಡೆದು ಮೂವರು ಜೀವಗಳನ್ನು ಕಳೆದುಕೊಂಡು 5 ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಚಿಂತನೆಯಲ್ಲಿದ್ದಾರೆ ಎಂಬ ವದಂತಿಗಳು ಇಂಫಾಲ್‌ನಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಕೇಳಿಬರುತ್ತಿದ್ದವು.
ಸಿಂಗ್ ಅವರ ಬೆಂಗಾವಲು ಪಡೆ ರಾಜಭವನದತ್ತ ಸಾಗದಂತೆ ಸಾವಿರಾರು ಪ್ರತಿಭಟನಾಕಾರರು ತಡೆದು ಹೈಡ್ರಾಮಾ ಸೃಷ್ಟಿಸಿದರು . ಸಿಎಂ ಬಿರೇನ್ ಸಿಂಗ್ ಅವರ ಬೆಂಬಲಿಗ ಮಹಿಳೆಯರು ರಾಜೀನಾಮೆ ಪತ್ರವನ್ನು ಹರಿದು ಹಾಕಿದರು. ”ಸಿಎಂ ರಾಜೀನಾಮೆ ನೀಡದಂತೆ ಪ್ರತಿಭಟನೆ ನಡೆಸುತ್ತಿದ್ದೇವೆ. ಅವರು ನಮ್ಮ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದ್ದಾರೆ, ಅದನ್ನು ನಾವು ಪ್ರಶಂಸಿಸುತ್ತೇವೆ. ಅವರು ಮಣಿಪುರಕ್ಕಾಗಿ ಮಾತ್ರವಲ್ಲದೆ ಇಡೀ ರಾಷ್ಟ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಮಹಿಳಾ ಬೆಂಬಲಿಗರೊಬ್ಬರು ಹೇಳಿಕೆ ನೀಡಿದರು.
ಮಣಿಪುರದಲ್ಲಿ ಇನ್ನೂ ಉದ್ವಿಗ್ನತೆ ಇರುವ ಹಿನ್ನೆಲೆಯಲ್ಲಿ ಸರ್ಕಾರವು ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಜುಲೈ 5ರ ಮಧ್ಯಾಹ್ನ 3 ರವರೆಗೆ ವಿಸ್ತರಿಸಿದೆ.
ಮಣಿಪುರಕ್ಕೆ ಎರಡು ದಿನಗಳ ಭೇಟಿಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಗೆ ಮರಳಿದ್ದಾರೆ.