ಮಣಿಪುರ: ಧಾರಾಕಾರ ಮಳೆಯ ಪರಿಣಾಮ ಭಾರೀ ಭೂ ಕುಸಿತದಿಂದಾಗಿ 14 ಮಂದಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿರುವ ಘಟನೆ ಮಣಿಪುರದಲ್ಲಿ ಶುಕ್ರವಾರ (ಜುಲೈ 01) ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ:ವಿದ್ಯುತ್ ಕಂಬಕ್ಕೆ ಬಿಯರ್ ಸಾಗಿಸುತ್ತಿದ್ದ ಲಾರಿ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು
ಡಿಜಿಪಿ ದೌಂಗೆಲ್ ಅವರ ಮಾಹಿತಿ ಪ್ರಕಾರ, ಅವಶೇಷಗಳಡಿ ಸಿಲುಕಿದ್ದ 23 ಮಂದಿಯನ್ನು ಹೊರತೆಗೆಯಲಾಗಿದೆ. 14 ಜನರು ಸಾವನ್ನಪ್ಪಿದ್ದಾರೆ. ಆದರೆ ಎಷ್ಟು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂಬುದು ಖಚಿತವಾಗಿಲ್ಲ, ಅಂದಾಜಿನ ಪ್ರಕಾರ 60ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವುದಾಗಿ ತಿಳಿಸಿದ್ದಾರೆ.
ಭಾರೀ ಭೂ ಕುಸಿತದಲ್ಲಿ ಗ್ರಾಮಸ್ಥರು, ಯೋಧರು, ರೈಲ್ವೆ ಸಿಬ್ಬಂದಿಗಳು ಹಾಗೂ ಕಾರ್ಮಿಕರು ಅವಶೇಷಗಳಡಿ ಸಿಲುಕಿರುವುದಾಗಿ ವರದಿ ವಿವರಿಸಿದೆ. ಇಂಡಿಯನ್ ಆರ್ಮಿ ಅಸ್ಸಾಂ ರೈಫಲ್ಸ್ , ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಪ್ರತಿಕೂಲ ಹವಾಮಾನ ಪರಿಣಾಮ ಮಣಿಪುರದ ನೋನಿ ಜಿಲ್ಲೆಯ ತುಪುಲ್ ರೈಲ್ವೆ ನಿಲ್ದಾಣದ ಸಮೀಪ ಈ ಘಟನೆ ಸಂಭವಿಸಿದೆ. ಮಣಿಪುರದಲ್ಲಿನ ಭೂಕುಸಿತ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಿರೇನ್ ಸಿಂಗ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿ, ಕೇಂದ್ರ ಸರ್ಕಾರದ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿರುವುದಾಗಿ ವರದಿ ತಿಳಿಸಿದೆ.