Advertisement

Manipur ರಾಜ್ಯದಲ್ಲಿ ಶಾಂತಿಸ್ಥಾಪಿಸಿ: ರಾಜ್ಯಪಾಲರಿಗೆ ಪ್ರತಿಪಕ್ಷಗಳ ನಿಯೋಗ ಮನವಿ

10:57 PM Jul 30, 2023 | Team Udayavani |

ನವದೆಹಲಿ: ಸಂಘರ್ಷ ಪೀಡಿತ ರಾಜ್ಯವಾದ ಮಣಿಪುರಕ್ಕೆ ಭೇಟಿ ನೀಡಿರುವ ಪ್ರತಿಪಕ್ಷಗಳ 21 ಮಂದಿ ಸದಸ್ಯರ ನಿಯೋಗ ಭಾನುವಾರ ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರನ್ನು ಭೇಟಿ ಮಾಡಿದೆ. ರಾಜ್ಯಪಾಲರೊಂದಿಗೆ ತಮ್ಮ ಭೇಟಿಯ ಅನುಭವಗಳನ್ನು ಹಂಚಿಕೊಂಡ ನಿಯೋಗವು, ಶಾಂತಿ ಸ್ಥಾಪನೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದೆ.

Advertisement

“ರಾಜ್ಯದಲ್ಲಿ ಶಾಂತಿ, ಸಾಮರಸ್ಯವನ್ನು ಮರಳಿ ತರಬೇಕೆಂದರೆ, ಸಂತ್ರಸ್ತರಿಗೆ ಆದಷ್ಟು ಬೇಗ ಪುನರ್ವಸತಿ ಕಲ್ಪಿಸಬೇಕು. ಕಳೆದ 89 ದಿನಗಳಿಂದಲೂ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಕೂಡಲೇ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ ಶಾಂತಿಸ್ಥಾಪನೆಗೆ ನೆರವಾಗಬೇಕು’ ಎಂದು ಮನವಿಪತ್ರದಲ್ಲಿ ಕೇಳಿಕೊಳ್ಳಲಾಗಿದೆ. ಜತೆಗೆ, ಪ್ರಧಾನಿ ನರೇಂದ್ರ ಮೋದಿಯವರ ಮೌನವು ಮಣಿಪುರ ಹಿಂಸಾಚಾರದ ಕುರಿತು ಅವರಿಗಿರುವ ನಿರ್ಲಕ್ಷ್ಯವನ್ನು ತೋರಿಸಿದೆ ಎಂದೂ ಆರೋಪಿಸಲಾಗಿದೆ.

ಜನರ ಪ್ರಾಣವನ್ನು ಮತ್ತು ಆಸ್ತಿಪಾಸ್ತಿಗಳನ್ನು ರಕ್ಷಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫ‌ಲ್ಯದಿಂದ ಎರಡೂ ಸಮುದಾಯದ 140ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 5 ಸಾವಿರಕ್ಕೂ ಹೆಚ್ಚು ಮನೆಗಳು ಸುಟ್ಟು ಹೋಗಿವೆ, 60 ಸಾವಿರಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ. ಕಳೆದ ಮೂರು ತಿಂಗಳಿಂದ ಇಷ್ಟೆಲ್ಲ ನಡೆಯುತ್ತಿದ್ದರೂ, ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫ‌ಲವಾಗಿದೆ ಎಂದೂ ಮನವಿ ಪತ್ರದಲ್ಲಿ ನಿಯೋಗವು ಉಲ್ಲೇಖೀಸಿದೆ. 2 ದಿನಗಳ ಭೇಟಿ ವೇಳೆ ಪ್ರತಿಪಕ್ಷಗಳ ನಾಯಕರು, ಚುರಾಚಾಂದ್‌ಪುರ, ಮೊಯಿರಾಂಗ್‌ ಮತ್ತು ಇಂಫಾಲದಲ್ಲಿನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ, ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

“ಮೇ 4ರಂದು ದುಷ್ಕರ್ಮಿಗಳ ಗುಂಪಿನಿಂದ ನಗ್ನ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರಕ್ಕೀಡಾದ ಮಹಿಳೆಯರಿಬ್ಬರ ಪೈಕಿ ಒಬ್ಬ ಮಹಿಳೆ ಮತ್ತು ಆಕೆಯ ತಾಯಿಯನ್ನು ಭೇಟಿಯಾದೆವು. ಕನಿಷ್ಠಪಕ್ಷ ನನ್ನ ಪತಿ ಮತ್ತು ಮಗನ ಪಾರ್ಥಿವ ಶರೀರವನ್ನು ಕೊನೆಯ ಬಾರಿಗೆ ನೋಡಲು ಅವಕಾಶ ಕಲ್ಪಿಸಿಕೊಡಿ ಎಂದು ಕೇಳಿಕೊಂಡರು’ ಎಂದು ನಿಯೋಗದಲ್ಲಿದ್ದ ಟಿಎಂಸಿ ನಾಯಕಿ ಸುಷ್ಮಿತಾ ದೇವ್‌ ಹೇಳಿದ್ದಾರೆ.
ಒಂದೇ ಹಾಲ್‌ನಲ್ಲಿ 400-500 ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ. ಅವರಿಗೆ ಕೇವಲ ದಾಲ್‌-ಅನ್ನ ನೀಡಲಾಗುತ್ತಿದೆ. ಇಡೀ ದಿನ ಮಕ್ಕಳಿಗೆ ಇದು ಬಿಟ್ಟರೆ ಬೇರೇನೂ ಆಹಾರ ನೀಡುವುದಿಲ್ಲ. ಶೌಚಾಲಯ, ಸ್ನಾನಗೃಹದ ವ್ಯವಸ್ಥೆ ಮಾಡಿಲ್ಲ. ಪರಿಹಾರ ಶಿಬಿರಗಳಲ್ಲಿನ ದುಸ್ಥಿತಿ ವಿದ್ರಾವಕವಾಗಿದೆ ಎಂದೂ ಕಾಂಗ್ರೆಸ್‌ ನಾಯಕಿ ಫ‌ುಲೋದೇವಿ ನೇತಮ್‌ ಹೇಳಿದ್ದಾರೆ.

ಕೇಂದ್ರಾಡಳಿತ ಪ್ರದೇಶಕ್ಕೆ ಆಗ್ರಹ
ಮಣಿಪುರವನ್ನು ಮೂರು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವುದೇ ರಾಜ್ಯದ ಜನಾಂಗೀಯ ಸಂಘರ್ಷ ಪರಿಹಾರಕ್ಕೆ ಇರುವ ಏಕೈಕ ಮಾರ್ಗ ಎಂದು ಕುಕಿ ನಾಯಕ, ಬಿಜೆಪಿ ಶಾಸಕ ಪಾವೋಲಿನ್‌ಲಾಲ್‌ ಹೋಕಿಪ್‌ ಅಭಿಪ್ರಾಯಪಟ್ಟಿದ್ದಾರೆ. ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮಣಿಪುರವನ್ನು 3 ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪುನಾರಚನೆ ಮಾಡಬೇಕು. ಕೇಂದ್ರ ಸರ್ಕಾರವು ಜನಾಂಗೀಯ ಪ್ರತ್ಯೇಕತೆಗೆ ರಾಜ ಕೀಯ ಮತ್ತು ಆಡಳಿತಾತ್ಮಕ ಸಿಂಧುತ್ವ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ಇದಕ್ಕೆ ಮಣಿಪುರ ಸಿಎಂ ಬಿರೇನ್‌ ಸಿಂಗ್‌ ಮತ್ತು ಮೈತೇಯಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ರಾಜ್ಯವನ್ನು ವಿಭಜಿಸುವ ಯಾವುದೇ ಕ್ರಮವನ್ನೂ ನಾವು ಬೆಂಬಲಿಸುವುದಿಲ್ಲ ಎಂದಿದ್ದಾರೆ.

Advertisement

ಹಿಂಸೆಗೆ ತಿರುಗಿದ ಪ್ರತಿಭಟನೆ
ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಸತಾನಾ ನಗರದಲ್ಲಿ ಮಣಿಪುರ ಘಟನೆ ಖಂಡಿಸಿ ನಡೆದ ಪ್ರತಿಭಟನೆಯು ಹಿಂಸಾಚಾರದಲ್ಲಿ ಕೊನೆಗೊಂಡಿದೆ. ಶನಿವಾರ ಸಂಜೆ ಏಕಲವ್ಯ ಆದಿವಾಸಿ ಸಂಘಟನೆಯ ನೇತೃತ್ವದಲ್ಲಿ ಕೆಲವು ಬುಡಕಟ್ಟು ಸಂಘಟನೆಗಳು ಮತ್ತು ವಂಚಿತ ಬಹುಜನ ಅಘಾಡಿ ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದವು. ಸ್ಥಳೀಯ ಬಿಜೆಪಿ ಶಾಸಕರು ನಮ್ಮ ಮನವಿಯನ್ನು ಸ್ವೀಕರಿಸಬೇಕು ಎಂದು ಸತಾನಾ ಪೊಲೀಸ್‌ ಠಾಣೆ ಮುಂದೆ ಪ್ರತಿಭಟನಾಕಾರರು ಆಗ್ರಹಿಸಿದ್ದು, ಶಾಸಕರು ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಿರುವ ಕಾರಣ ಮನವಿ ಸೀಕರಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದರು. ಈ ವೇಳೆ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದ್ದು, 10 ಮಂದಿ ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ 21 ಮಂದಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next