ಇಂಫಾಲ್: ಮಣಿಪುರ ಸರ್ಕಾರ ಕಾಂಗ್ರೆಸ್ ಗೆ ಶಾಕ್ ನೀಡಿದೆ. ರಾಜ್ಯ ಎನ್ ಬಿರೇನ್ ಸಿಂಗ್ ಸರ್ಕಾರವು ಜನವರಿ 14 ರಂದು ಇಂಫಾಲ್ ಪೂರ್ವ ಜಿಲ್ಲೆಯ ಪ್ರಸಿದ್ಧ ಮೈದಾನ ಹಫ್ತಾ ಕಾಂಗ್ಜೆಬುಂಗ್‌ನಿಂದ ಪ್ರಾರಂಭವಾಗಲಿರುವ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯನ್ನು ಪ್ರಾರಂಭಿಸಲು ಅನುಮತಿ ನಿರಾಕರಿಸಿದೆ.
ಇದಾದ ಬಳಿಕ ಯಾತ್ರೆ ಆರಂಭಿಸಲು ಪರ್ಯಾಯ ಸ್ಥಳದ ವ್ಯವಸ್ಥೆ ಮಾಡುವಂತೆ ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.
ಇದನ್ನು ದೃಢಪಡಿಸಿರುವ ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಮೇಘಚಂದ್ರ ಅವರು, ಭಾರತ್ ಜೋಡೋ ನ್ಯಾಯ ಯಾತ್ರೆಯ ಸ್ಥಳಕ್ಕೆ ಅನುಮತಿ ನೀಡುವ ಕುರಿತು ನಾವು ಇಂದು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದು. ಈ ವೇಳೆ ಹಫ್ತಾ ಕಂಗ್ಜಿಬಂಗ್, ಅರಮನೆ ಕಾಂಪೌಂಡ್ ನಲ್ಲಿ ಯಾತ್ರೆ ನಡೆಸಲು ಮುಖ್ಯಮಂತ್ರಿ ಅನುಮತಿ ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಮೇಘಚಂದ್ರ, ಇದು ಅತ್ಯಂತ ದುರದೃಷ್ಟಕರ ವಿಚಾರ. ಜನರ ಹಕ್ಕುಗಳ ಉಲ್ಲಂಘನೆಯಾಗಿದೆ ಮತ್ತು ಜನರ ರಾಜಕೀಯ ಹಕ್ಕುಗಳ ಉಲ್ಲಂಘನೆಯಾಗಿದೆ, ವಿಶೇಷವಾಗಿ ಮಣಿಪುರದ ಸಾರ್ವಜನಿಕ ಸ್ಥಳದಲ್ಲಿ ಯಾತ್ರೆಗೆ ಅನುಮತಿ ನೀಡಲು ಸರ್ಕಾರ ನಿರಾಕರಿಸಿದರೂ ಅದಕ್ಕೆ ಪರ್ಯಾಯ ಸ್ಥಳವನ್ನು ನಾವು ಹುಡುಕುತ್ತೇವೆ ಎಂದು ಹೇಳಿದ್ದಾರೆ.
ಮಣಿಪುರದಿಂದ ಮುಂಬೈಗೆ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಜನವರಿ 14 ರಂದು ಇಂಫಾಲ್‌ನಿಂದ ಪ್ರಾರಂಭವಾಗಲಿದೆ. ರಾಹುಲ್ ಗಾಂಧಿ ಸೇರಿದಂತೆ ಹಿರಿಯ ಎಐಸಿಸಿ ನಾಯಕರು ಇದರ ನೇತೃತ್ವ ವಹಿಸಲಿದ್ದಾರೆ. ಯಾತ್ರೆಯು ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದ್ದು, 66 ದಿನಗಳಲ್ಲಿ 15 ರಾಜ್ಯಗಳಲ್ಲಿ 6700 ಕಿ.ಮೀ. ಈ ಯಾತ್ರೆಯು 110 ಜಿಲ್ಲೆಗಳು, 100 ಲೋಕಸಭಾ ಸ್ಥಾನಗಳು ಮತ್ತು 337 ವಿಧಾನಸಭಾ ಸ್ಥಾನಗಳನ್ನು ಒಳಗೊಂಡಿದೆ.
ಸೋಮವಾರ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ನೇತೃತ್ವದ ಎಐಸಿಸಿ ತಂಡವು ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಪೂರ್ವ ಸಿದ್ಧತಾ ಕಾರ್ಯಗಳ ಮೇಲ್ವಿಚಾರಣೆಗಾಗಿ ಇಂಫಾಲ್‌ಗೆ ತಲುಪಿತ್ತು. ಈ ವೇಳೆ ಮಣಿಪುರಕ್ಕೆ ನ್ಯಾಯ ಸಿಗಬೇಕು ಎಂದು ಭಾವಿಸಿ ಇಲ್ಲಿಂದ ಪ್ರಯಾಣ ಆರಂಭಿಸುತ್ತಿದ್ದೇವೆ ಎಂದು ವೇಣುಗೋಪಾಲ್ ಹೇಳಿದ್ದರು. ಮಣಿಪುರದಲ್ಲಿ ಆಗಿರುವ ಗಾಯ ಮಾಸಬೇಕು, ಮಣಿಪುರದ ಬಗ್ಗೆ ಜನರಿಗೆ ಪ್ರೀತಿ ವಾತ್ಸಲ್ಯದ ಸಂದೇಶ ಬರಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: Goa: 4 ವರ್ಷದ ಮಗನ ಹಂತಕಿ ವಿಚಾರಣೆಯಲ್ಲಿ ಹೇಳಿದ್ದೇನು? ಮರಣೋತ್ತರ ಪರೀಕ್ಷೆ ವರದಿ ಬಹಿರಂಗ!