Advertisement

ಗಲಭೆ ಗೂಡಾದ ಮಣಿಪುರ; ಬಿಜೆಪಿ ಪಟ್ಟಿ ಹೊರಬೀಳುತ್ತಲೇ ಟಿಕೆಟ್‌ ವಂಚಿತರ ಬೆಂಬಲಿಗರಿಂದ ದಾಂಧಲೆ

12:06 AM Jan 31, 2022 | Team Udayavani |

ಇಂಫಾಲ್‌: ಮಣಿಪುರದ ಎಲ್ಲ 60 ವಿಧಾನ ಸಭಾ ಕ್ಷೇತ್ರಗಳಿಂದ ತಾನು ಸ್ಪರ್ಧಿಸುವುದಾಗಿ ಬಿಜೆಪಿ ರವಿವಾರ ಪ್ರಕಟಿಸಿದ್ದು, ಅದರ ಬೆನ್ನಲ್ಲೇ 60 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಆಗಮಿಸಿದ್ದ 10 ಕಾಂಗ್ರೆಸ್‌ ನಾಯಕರಿಗೆ ಟಿಕೆಟ್‌ ಘೋಷಿಸಲಾಗಿದೆ. ಆದರೆ ಇದರ ಬೆನ್ನಲ್ಲೇ ಟಿಕೆಟ್‌ ವಂಚಿತ ಬಿಜೆಪಿ ನಾಯಕರ ಬೆಂಬಲಿಗರು ರಾಜ್ಯಾದ್ಯಂತ ಹಿಂಸಾಚಾರ, ಪ್ರತಿಭಟನೆಗಳನ್ನು ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪಟ್ಟಿಯಲ್ಲಿರುವ ಪ್ರಮುಖ ನಾಯಕರು: ಮುಖ್ಯಮಂತ್ರಿ ಎನ್‌. ಬೈರೇನ್‌ ಸಿಂಗ್‌ ಅವರು ತಮ್ಮ ಹಳೆಯ ಕ್ಷೇತ್ರವಾದ ಹೇನ್‌ಗಾಂಗ್‌ನಿಂದ ಸ್ಪರ್ಧಿಸಲಿದ್ದಾರೆ. ಮಣಿಪುರ ಸಂಪುಟದ ಮತ್ತೊಬ್ಬ ಪ್ರಮುಖ ಸಚಿವರಾದ ಬಿಸ್ವಜಿತ್‌ ಸಿಂಗ್‌ ಅವರು, ಥೋಂಗ್ಚು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಫುಟ್ಬಾಲ್‌ ಆಟಗಾರ ಸೊಮಾಟೈ ಸೈಜಾ ಅವರು ಉಕ್ರುಲ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯು ಮಣಿಪುರದಲ್ಲಿ 21 ಸ್ಥಾನ ಗೆದ್ದಿತ್ತು. ಹಾಗಾಗಿ ಚಿಕ್ಕ ಪುಟ್ಟ ಪ್ರಾದೇಶಿಕ ಪಕ್ಷಗಳ ಸಹಾ ಯದಿಂದ ಸರಕಾರ ರಚಿಸಿತ್ತು. ಆಗ ಗೆದ್ದಿದ್ದ ವರಲ್ಲಿ 19 ಶಾಸಕರಿಗೆ ಪುನಃ ಟಿಕೆಟ್‌ ನೀಡಲಾ ಗಿದ್ದು ಇಬ್ಬರಿಗೆ ಟಿಕೆಟ್‌ ನೀಡಲಾಗಿಲ್ಲ.

ಭುಗಿಲೆದ್ದ ಹಿಂಸಾಚಾರ: ಬಿಜೆಪಿಯಿಂದ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ, ಮಣಿಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆಗಳು ನಡೆದಿವೆ. ಪಟ್ಟಿಯಿಂದ ಕೈಬಿಡಲಾಗಿರುವ ಇಬ್ಬರು ಹಾಲಿ ಶಾಸಕರು ಸೇರಿದಂತೆ ಹಲವಾರು ಬಿಜೆಪಿ ನಾಯಕರು ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಆದರೆ ಹೈಕಮಾಂಡ್‌ನಿಂದ ರವಿವಾರ ಮಧ್ಯಾಹ್ನ ಪಟ್ಟಿ ಬಿಡುಗಡೆ ಯಾಗುತ್ತಿದ್ದಂತೆ ಇಡೀ ರಾಜ್ಯದಲ್ಲಿ ಶಾಂತಿ ಕದಡಿದಂತಾಗಿದೆ.

ಟಿಕೆಟ್‌ ಸಿಗದ ಬಿಜೆಪಿ ನಾಯಕರ ಆಪ್ತರು, ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮಣಿಪುರ ಮುಖ್ಯಮಂತ್ರಿ ಎನ್‌. ಬೈರೇನ್‌ ಸಿಂಗ್‌ರ ಪ್ರತಿಕೃತಿಗಳನ್ನು ದಹಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಲವಾರು ಭಾಗಗಳಲ್ಲಿರುವ ಬಿಜೆಪಿ ಕಚೇರಿಗಳಿಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿನ ಪೀಠೊಪಕರಣ ಗಳನ್ನು ಧ್ವಂಸಗೊಳಿಸಿದ್ದಾರೆ.

Advertisement

ಸರಣಿ ರಾಜೀನಾಮೆ
ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಕೆಲವು ಬಿಜೆಪಿ ಪದಾಧಿಕಾರಿಗಳು, ಟಿಕೆಟ್‌ ಸಿಗದ್ದಕ್ಕೆ ಆಕ್ರೋಶಗೊಂಡು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೂಂಡಾಗಳಿಗೆ ನಿರ್ಭೀತಿ ಇತ್ತು: ಸಿಂಗ್‌
“ರಾಜಕೀಯ ಧ್ರುವೀಕರಣದ ಸಿದ್ಧಾಂತಗಳನ್ನು ನೆಚ್ಚಿಕೊಂಡು ಬಿಜೆಪಿ ರಾಜಕೀಯ ಮಾಡುವುದಿಲ್ಲ. ಉತ್ತರ ಪ್ರದೇಶದಲ್ಲಿಯೂ ಅಂಥ ಯಾವುದೇ ಪದ್ಧತಿಗಳನ್ನು ಬಿಜೆಪಿ ಹೊಂದಿಲ್ಲ” ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ರವಿವಾರ ನಡೆದ ಪಕ್ಷದ ಪ್ರಚಾರ ಕಾರ್ಯಕ್ರಮಗಳಲ್ಲಿ ಮಾತನಾಡಿದ ಅವರು, “ನಾವು ನಮ್ಮ ಮತದಾರರನ್ನು ಜಾತಿ, ನಂಬಿಕೆ ಅಥವಾ ಧರ್ಮಗಳ ಮೇಲೆ ಪ್ರತ್ಯೇಕ ಮಾಡುವುದಿಲ್ಲ. ಆದರೆ ಸಮಾಜವಾದಿ ಪಕ್ಷವು ಇಂಥ ಎಲ್ಲ ಎಲ್ಲೆಗಳನ್ನು ಮೀರಿ, ಸಮಾಜವನ್ನು ಅಥವಾ ಮತದಾರರನ್ನು ಜಾತಿ, ನಂಬಿಕೆ ಅಥವಾ ಧರ್ಮದ ಆಧಾರದಲ್ಲಿ ವಿಂಗಡಿಸುತ್ತಿದೆ. ಸಮಾಜವನ್ನು ಒಡೆಯುವ ನೀತಿಯ ಮೂಲಕ ಆ ಪಕ್ಷ ಮತಗಳನ್ನು ಗಳಿಸುತ್ತಿದೆ. ಒಂದು ನಿರ್ದಿಷ್ಟ ಸಮುದಾಯದ ಮತಗಳನ್ನು ಪಡೆಯುವದಕ್ಕೋಸ್ಕರ ಅದು ಎಲ್ಲಾ ಮಿತಿಗಳನ್ನೂ ದಾಟಿದೆ” ಎಂದು ಆರೋಪಿಸಿದರು.

ಅಖಿಲೇಶ್ ವಿರುದ್ಧ ಅಪರ್ಣಾ ಸ್ಪರ್ಧೆ?: ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಖಿಲೇಶ್ ಯಾದವ್‌ ಅವರು ಉತ್ತರ ಪ್ರದೇಶದಲ್ಲಿ ಆ ಪಕ್ಷದ ಭದ್ರಕೋಟೆ ಎನಿಸಿರುವ ಕರ್ಹಾಲ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಅಲ್ಲಿ ಅವರು ಸ್ಪರ್ಧೆಗಿಳಿದರೆ ಬಿಜೆಪಿಯು, ತನ್ನಲ್ಲಿ ಇತ್ತೀಚೆಗೆ ಸೇರ್ಪಡೆಯಾದ ಎಸ್‌ಪಿ ಧುರೀಣ ಮುಲಾಯಂ ಸಿಂಗ್‌ ಸೊಸೆ ಅಪರ್ಣಾ ಯಾದವ್‌ರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಗೋವಾದಲ್ಲಿ ಅಮಿತ್‌ ಶಾ ಪ್ರಚಾರ
ಪಣಜಿ: ಚುನಾವಣ ರಂಗೇರಿರುವ ಗೋವಾದಲ್ಲಿ ಪ್ರಚಾರಕ್ಕಾಗಿ ಕೇಂದ್ರ ಸಚಿವ ಅಮಿತ್‌ ಶಾ ರವಿವಾರ‌ ಆಗಮಿಸಿದ್ದಾರೆ. ಅಲ್ಲಿ ಸೋಮವಾರದಂದು ಸಾರ್ವಜನಿಕ ಸಭೆ ಗಳನ್ನು ನಡೆಸಲಿರುವ ಶಾ, ಮನೆ-ಮನೆ ಪ್ರಚಾರದಲ್ಲೂ ತೊಡಗಿಸಿಕೊಳ್ಳಲಿದ್ದಾರೆ.

ಗೋವಾದ ದಾಬೋಲಿಮ್‌ ವಿಮಾನ ನಿಲ್ದಾಣಕ್ಕೆ ರವಿವಾರ ಮಧ್ಯಾಹ್ನ ಬಂದಿಳಿದ ಶಾ ಅವರನ್ನು ಕೇಂದ್ರ ಸಚಿವ ಶ್ರೀಪಾದ್‌ ನಾಯಕ್‌, ಗೋವಾ ಸಿಎಂ ಪ್ರಮೋದ್‌ ಸಾವಂತ್‌, ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫ‌ಡ್ನವೀಸ್‌, ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ತನವಾಡೆ ಹಾಗೂ ಇತರರು ಸ್ವಾಗತಿಸಿದರು.

ಚನ್ನಿಗೆ ಮತ್ತೊಂದು ಕ್ಷೆೇತ್ರದ ಟಿಕೆಟ್‌
ಚಂಡೀಗಢ‌: ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದು ಖಾತ್ರಿಯಾಗಿದೆ. ಪಂಜಾಬ್‌ ಕಾಂಗ್ರೆಸ್‌ ಅಭ್ಯರ್ಥಿಗಳ ಮೂರನೇ ಪಟ್ಟಿ ರವಿವಾರ ಬಿಡುಗಡೆ ಯಾಗಿದ್ದು, ಅದರಲ್ಲಿ ಚನ್ನಿಯವರಿಗೆ ಬದೌರ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಪಟ್ಟಿಯಲ್ಲಿ ಚನ್ನಿ ಅವರಿಗೆ ಚಂಕೌರ್‌ ಸಾಹೀಬ್‌ ಕ್ಷೇತ್ರದಿಂದಲೂ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿಗೆ ಹಾಲಿ ಮುಖ್ಯಮಂತ್ರಿ ಅವರಿಗೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಅವಕಾಶ ಸಿಕ್ಕಂತಾಗಿದೆ.

ಕೇಜ್ರಿವಾಲ್‌ ಟೀಕೆ: ಕಾಂಗ್ರೆಸ್‌ನಿಂದ ಪಟ್ಟಿ ಪ್ರಕಟವಾಗುತ್ತಿದ್ದಂತೆ, ಆಮ್‌ ಆದ್ಮಿ ಪಾರ್ಟಿಯ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ (ಆಪ್‌) ಟೀಕಾಸ್ತ್ರ ಪ್ರಯೋಗಿಸಿದ್ದಾರೆ. “ಚನ್ನಿಯವರು ತಮ್ಮ ಸ್ವಕ್ಷೇತ್ರವಾದ ಚಮ್‌ಕೌರ್‌ ಸಾಹೀಬ್‌ ಕ್ಷೇತ್ರದಲ್ಲಿ ಸೋಲು ಕಾಣಲಿದ್ದಾರೆ ಎಂಬುದು ನಮ್ಮ ಸಮೀಕ್ಷೆಗಳಿಂದ ದೃಢವಾಗಿತ್ತು. ಈಗ ಕಾಂಗ್ರೆಸ್‌ ಪಕ್ಷ, ಅವರಿಗೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಅವಕಾಶ ನೀಡಿರುವುದು ನಮ್ಮ ಸಮೀಕ್ಷೆಗೆ ಪುಷ್ಠಿ ಸಿಕ್ಕಿದೆ” ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next