Advertisement

ಯಾರಿಗೆ ಒಲಿಯುವುದು ಮಣಿಪುರ: ಈಶಾನ್ಯ ರಾಜ್ಯದಲ್ಲಿ ಕೈಯೋ, ಕೇಸರಿಯೋ?

12:36 PM Jan 17, 2022 | Team Udayavani |

ಮಣಿಪುರ : ದೇಶದ ಗಡಿಭಾಗದ ವ್ಯೂಹಾತ್ಮಕವಾಗಿ ಸೂಕ್ಷ್ಮ ವೆನಿಸಿದ ಮಣಿಪುರದಲ್ಲಿ ಈಗ ಚುನಾವಣಾ ಉನ್ಮಾದ ಆರಂಭಗೊಂಡಿದೆ. ಬುಡಕಟ್ಟು ಸಮುದಾಯ ಹಾಗೂ ಕ್ರಿಶ್ಚಿಯನ್ ಪ್ರಾಬಲ್ಯದ ಈ ಪುಟ್ಟ ರಾಜ್ಯದಲ್ಲಿ ಈ ಬಾರಿ ಅಧಿಕಾರ ಹಿಡಿಯುವುದು ಯಾರು ? ಎಂಬ ಬಗ್ಗೆ ಈಗ ಲೆಕ್ಕಾಚಾರಗಳು ಆರಂಭಗೊಂಡಿದೆ.

Advertisement

ಮಣಿಪುರದಲ್ಲಿ ಇದುವರೆಗೆ ಕಾಂಗ್ರೆಸ್ ಹೊಂದಿದ್ದ ಪ್ರಾಬಲ್ಯವನ್ನು ಮುರಿದ ಬಿಜೆಪಿ ಮಿತ್ರಪಕ್ಷಗಳೊಂದಿಗೆ ಸೇರಿದ ಅಧಿಕಾರ ಸ್ಥಾಪಿಸಿತ್ತು. 2017 ರಲ್ಲಿ 21  ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಈ ಬಾರಿ ಮತ್ತೆ ಅಧಿಕಾರ ಗಳಿಸುವುದು ಅಷ್ಟೊಂದು ಸುಲಭವಲ್ಲ ಎಂಬ ವ್ಯಾಖ್ಯಾನಗಳಿವೆ. ಆದರೆ ಈ ಬಾರಿ ಯಾವುದೇ ಪಕ್ಷದ ಜತೆಗೆ ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಈ ಮೂಲಕ ಸ್ವತಂತ್ರವಾಗಿ ಅಧಿಕಾರ ಗಳಿಕೆಯ ಲೆಕ್ಕಾಚಾರ ಹಾಕುತ್ತಿದೆ. ಆದರೆ ಇದು ಅಷ್ಟೊಂದು ಸುಲಭದ ಮಾತಲ್ಲ.

ಕಾಂಗ್ರೆಸ್ ಕತೆ ಏನು ?

“ನಾಗಾ’’ಗಳ ಸಂಗ್ರಾಮ ಭೂಮಿಯ ಮಗ್ಗುಲಲ್ಲೇ ಇರುವ ಮಣಿಪುರದಲ್ಲಿ ಈ ಬಾರಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಫೆ.27 ಹಾಗೂ ಮಾರ್ಚ್ 3 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗುತ್ತದೆ. ಪಂಚರಾಜ್ಯಗಳ ಪೈಕಿ ಪಂಜಾಬ್ ಬಿಟ್ಟರೆ ಕಾಂಗ್ರೆಸ್ ಕೊಂಚ ಆಶಾಭಾವ ಹೊಂದಿರುವುದು ಮಣಿಪುರದಲ್ಲಿ. ಆದರೆ ಕಾಂಗ್ರೆಸ್ ಸಾಂಪ್ರದಾಯಿಕವಾಗಿ ನೆಚ್ಚಿಕೊಂಡು ಬಂದಿದ್ದ ಬುಡಕಟ್ಟು ಕ್ರಿಶ್ಚಿಯನ್ನರೇ ಈಗ ಆ ಪಕ್ಷದಿಂದ ದೂರ ಸರಿಯುತ್ತಿರುವುದು ಕಾಂಗ್ರೆಸ್‌ನ ಆತಂಕಕ್ಕೆ ಕಾರಣವಾಗಿದೆ.

ಮಣಿಪುರ ವಿಧಾನಸಭೆ 60 ಸದಸ್ಯ ಬಲವನ್ನು ಹೊಂದಿದೆ. 2017ರಲ್ಲಿ ಬಿಜೆಪಿ 21, ಕಾಂಗ್ರೆಸ್ 28 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದ ಮಣಿಪುರ “ಆಪರೇಷನ್ ಕಮಲ’’ ಪ್ರಕರಣದ ಬಳಿಕವೂ ತಾನು ಗೆದ್ದ ಶಾಸಕರ ಪೈಕಿ ಈಗ 13  ಜನರನ್ನು ಮಾತ್ರ ಜತೆಯಲ್ಲಿ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

Advertisement

ಪುರಾತನ ಪಕ್ಷ ಕಾಂಗ್ರೆಸ್‌ಗೆ ಮಣಿಪುರದಲ್ಲಿ ಈಗಲೂ ವಯೋವೃದ್ಧ ನಾಯಕ ಓಕ್ರಮ್ ಇಬೋಬಿ ಸಿಂಗ್ ಅವರೇ ಆಧಾರವಾಗಿದ್ದು, 73 ವರ್ಷದ ಓಬೋಬಿ ಕಾಂಗ್ರೆಸ್‌ನ ಗೆಲುವಿನ ಊರುಗೋಲಾಗಬಲ್ಲರೇ ? ಎಂಬ ಪ್ರಶ್ನೆಗೆ ಕೆಲವೇ ದಿನದಲ್ಲಿ ಉತ್ತರ ಲಭಿಸಲಿದೆ.

ಪ್ರಾದೇಶಿಕರದ್ದೇ ಮೇಲುಗೈ 
ಮಣಿಪುರದ ಚುನಾವಣಾ ಕಣದ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಪ್ರಕಾರ, ಪ್ರಾದೇಶಿಕ ಪಕ್ಷಗಳೇ ಅಧಿಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಅಂದರೆ ಈ ಬಾರಿಯೂ ಜಯ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಹೊಯ್ದಾಟ ನಡೆಸಿ ಯಾರಿಗೂ ಬಹುಮತ ಲಭ್ಯವಾಗದೇ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ. ಆಗ ಬಲ ಹೊಂದಿರುವ ಪ್ರಾದೇಶಿಕ ಪಕ್ಷ ಯಾರತ್ತ ಒಲಿಯುತ್ತದೋ ಅವರಿಗೆ ಲಾಭವಾಗಬಹುದು.

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ.ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ ಪಾರ್ಟಿ (ಎನ್‌ಪಿಪಿ), ನಾಗಾ ಪೀಪಲ್ ಫ್ರಂಟ್ (ಎನ್‌ಪಿಎಫ್), ಟಿಎಂಸಿ, ಎಲ್‌ಜೆಪಿ ಹಲವು ಪಕ್ಷಗಳು ಮಣಿಪುರದಲ್ಲಿ ತಮ್ಮ ನೆಲೆ ಹೊಂದಿವೆ. ಬಿಜೆಪಿ ಪರ ಮೃಧು ಧೋರಣೆ ಹೊಂದಿದ್ದ ಎನ್‌ಪಿಪಿ ಕಳೆದ ಬಾರಿ ೯ ಕಡೆ ಸ್ಫರ್ಧೆ ನಡೆಸಿ ೪ ಕಡೆ ಜಯಗಳಿಸಿತ್ತು. ಈ ಬಾರಿ ೪೦ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಎನ್‌ಪಿಪಿ ಸಿದ್ಧತೆ ನಡೆಸಿದೆ. ಎನ್‌ಪಿಪಿ ಜತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳು ಕ್ಷೀಣವಾದ ಹಿನ್ನೆಲೆಯಲ್ಲಿ ಬಿಜೆಪಿ ಈ ಬಾರಿ ಸ್ವತಂತ್ರವಾಗಿ ಸ್ಪರ್ಧೆ ನಡೆಸುತ್ತಿದೆ. ಆದರೂ ಎನ್‌ಪಿಪಿ ಜತೆಗೆ ಅಲ್ಲಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಮತ್ತೆ ಆಪರೇಷನ್ ?
ಮಿತ್ರ ಪಕ್ಷಗಳ ಜತೆ ಸೇರಿ ಅಧಿಕಾರ ರಚನೆ ಮಾಡಿರುವ ಬಿಜೆಪಿಯ ಆಡಳಿತದ ಬಗ್ಗೆ ಬುಡಕಟ್ಟು ರಾಜ್ಯದಲ್ಲಿ ಹೇಳಿಕೊಳ್ಳುವಂತ ಮೆಚ್ಚುಗೆ ಇಲ್ಲ. ಆದರೆ ಕಾಂಗ್ರೆಸ್‌ನ್ನು ನಂಬುವ ಸ್ಥಿತಿಯಲ್ಲಿ ಇಲ್ಲಿನ ಜನರಿಲ್ಲ. ಮೂರು ಬಾರಿ ಅಧಿಕಾರ ಅನುಭವಿಸಿದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಿಗದ ಶಾಂತಿ ಬಿಜೆಪಿ ಕಾಲದಲ್ಲಿ ಮಣಿಪುರದ ಜನತೆಗೆ ಸಿಕ್ಕಿದೆ. ಇದೊಂದೆ ಬಿಜೆಪಿಗೆ ದೊಡ್ಡ ಅಸ್ತ್ರ. ಆದರೆ ನಾಗಾ ಬಂಡುಕೋರರಿಗೆ ಪುನರ್‌ವಸತಿ ಕಲ್ಪಿಸುವಲ್ಲಿ ಬಿಜೆಪಿ ಸೋತಿರುವುದು ಹೊಡೆತ ನೀಡಬಹುದೆಂದು ವ್ಯಾಖ್ಯಾನಿಸಲಾಗುತ್ತಿದೆ. ಹೀಗಾಗಿ ಬಿಜೆಪಿ ಈ ರಾಜ್ಯದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಬಿಜೆಪಿ ಘೋಷಿಸಿಲ್ಲ. ಇದರರ್ಥ “ಹಂಗಿನ ಅರಮನೆ’’ ಸೃಷ್ಟಿಯಾಗಿದ್ದು, ಆ ಕ್ಷಣಕ್ಕೆ ಒಪ್ಪಿತವಾಗುವ ವ್ಯಕ್ತಿಗೆ ಪಟ್ಟಕಟ್ಟುವ ಲೆಕ್ಕಾಚಾರ ಬಿಜೆಪಿಯದು.

ಇನ್ನು ಕಾಂಗ್ರೆಸ್‌ನಲ್ಲೂ ಇದೇ ಬಗೆಯ ವಾತಾವರಣ ಇದೆ. 2021 ರ ಆಗಷ್ಟ್ ತಿಂಗಳಲ್ಲಿ ಮಣಿಪುರ ಕಾಂಗ್ರೆಸ್ ಘಟಕದ ಅಧ್ಯಕ್ಷ ಗೋವಿಂದದಾಸ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಚುನಾವಣೆಗೆ ವರ್ಷಪೂರ್ವದಲ್ಲೇ ಕಾಂಗ್ರೆಸ್‌ನಿಂದ ವಲಸೆ ಪರ್ವ ಆರಂಭವಾಗಿದ್ದು, ಫಲಿತಾಂಶದ ಬಳಿಕ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹಾರಾಟ ನಡೆಯುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next