ಕೆ.ಆರ್.ನಗರ: ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ತಾಲೂಕು ರೈತ ಸಂಘದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಚೀರ್ನಹಳ್ಳಿ ಶ್ರೀನಿವಾಸ್ ನೇತೃತ್ವದಲ್ಲಿ ಇಲ್ಲಿನ ಡಾ.ಬಿ.ಆರ್.ಅಂಬೇಂಡ್ಕರ್ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ರೈತ ಮುಖಂಡರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರ ಗಮನ ಸೆಳದರು.
ಪ್ರತಿಭಟನಾನಿರತ ರೈತರನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಚೀರ್ನಹಳ್ಳಿ ಶ್ರೀನಿವಾಸ್, ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಗೆ ಸುಣ್ಣ ಹಚ್ಚುವ ಕೆಲಸ ಮಾಡಿದೆ. ಇಂತಹ ತಾರತಮ್ಯ ನೀತಿ ಬದಿಗಿಟ್ಟು ರಾಜ್ಯದ ಎಲ್ಲಾ ರೈತರು ಪಡೆದಿರುವ ರಾಷ್ಟ್ರೀಯ ಮತ್ತು ಸಹಕಾರ ಬ್ಯಾಂಕುಗಳ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ಒತ್ತಾಯಿಸಿದರು.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡುತ್ತಿದ್ದ 7 ಕೆ.ಜಿ ಅಕ್ಕಿ ಕಡಿತಗೊಳಿಸಿರುವುದರಿಂದ ಬಡವರ ಅನ್ನವನ್ನು ಕಿತ್ತುಕೊಂಡತ್ತಾಗಿದೆ. ರಾಜ್ಯ ಸರ್ಕಾರ ಕೂಡಲೇ ತನ್ನ ನಿರ್ಧಾರ ಬದಲಿಸಿ ಹಿಂದಿನಂತೆ 7 ಕೆ.ಜಿ ಅಕ್ಕಿ ನೀಡಬೇಕು. ರೈತರ ಎಲ್ಲಾ ರೀತಿಯ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ಕೆ.ಆರ್.ನಗರ ತಾಲುಕು ರೈತ ಸಂಘದ ಅಧ್ಯಕ್ಷರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೂತನ್ ಕುಮಾರ್, ಗೋವಿಂದೇಗೌಡ ತಾಲೂಕು ಪದಾಧಿಕಾರಿಗಳಾದ ಮಂಚನಾಯಕ, ಎಂ.ಶಿವರಾಂ, ಪ್ರಕಾಶ್, ಸಿದ್ದೇಗೌಡ, ಗಣೇಶ್, ನಾಗರಾಜು, ವಜ್ರೆàಶ್ ಮೊದಲಾದವರು ಹಾಜರಿದ್ದರು.