Advertisement
ಗಾಂಜಾ ಮಾರಾಟದ ಬಗ್ಗೆ ಹಫ್ತಾ ನೀಡುವಂತೆ ಒತ್ತಾಯಿಸಿ ಯುವಕನಿಗೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಉದ್ಯಾವರ ಕಂಪನ್‌ಬೆಟ್ಟು ನಿವಾಸಿ ಮೊಹಮ್ಮದ್ ಪರ್ವೇಜ್ ಉಮರ್ (25)ಗೆ ಪರಿಚಯದ ಪೈಝಲ್ ಕರೆ ಮಾಡಿ ನಿನ್ನ ಬಳಿ ಮಾತನಾಡಲು ಇದೆ ಎಂದು ಮಣಿಪಾಲಕ್ಕೆ ಕರೆಸಿಕೊಂಡಿದ್ದಾನೆ. ಪೈಝಲ್ ಜತೆಗೆ ದಾವುದ್ ಇಬ್ರಾಹಿಂ, ಇಸಾಕ್ ಮೂವರು ಜತೆಗೆ ಸೇರಿ ಪರ್ವೇಜ್ ಉಮರ್‌ನನ್ನು ಬಲತ್ಕಾರದಿಂದ ಕಾರಿನಲ್ಲಿ ಎಳೆದು ಹಾಕಿಕೊಂಡು ಅಪರಿಚಿತ ಜಾಗಕ್ಕೆ ಕೊಂಡೊಯ್ದಿದ್ದಾರೆ. ಅನಂತರ ಪರ್ವೇಜ್ ಉಮರ್‌ಗೆ ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯ ಎಂದು ನಮಗೆ ಮಾಹಿತಿ ಬಂದಿದ್ದು, ಮಣಿಪಾಲದಲ್ಲಿ ನೀನು ಗಾಂಜಾ ಮಾರಾಟ ಮಾಡಿದರೆ ನಮಗೆ ತಿಂಗಳ ಮಾಮೂಲಿ ಹಣ ಕೊಡಬೇಕು. ಇದಕ್ಕೆ ಒಪ್ಪದದ್ದಿರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ.
ತಂಡದಲ್ಲಿದ್ದ ದಾವೂದ್ ಇಬ್ರಾಹಿಂ ಎಂಬವನು ಪರ್ವೇಜ್‌ಗೆ ದೊಣ್ಣೆಯಿಂದ ಕಾಲಿಗೆ, ಕೈಗೆ, ಬೆನ್ನಿಗೆ ಹೊಡೆದಿದ್ದು, ಅದೇ ಕೋಲಿನಿಂದ ಇಸಾಕ್ ಬೆನ್ನಿಗೆ ಮತ್ತು ಕಾಲಿಗೆ ಹೊಡೆದಿದ್ದಾನೆ. ಫೈಝಲ್ ಕೈಯಿಂದ ಕೆನ್ನೆಗೆ, ಬೆನ್ನಿಗೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.
Related Articles
Advertisement
ಪತ್ತೆಯಾಗದ ಆರೋಪಿಗಳು ಹಲ್ಲೆ ಮಾಡಿದ ಆರೋಪಿಗಳು ಇದುವರೆಗೆ ಪತ್ತೆಯಾಗಿಲ್ಲ. ಮಣಿಪಾಲದಲ್ಲಿ ಯುವಕರ ನಡುವಿನ ಗಲಾಟೆ ಗಮನಿಸಿದ್ದ ಸಾರ್ವಜನಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ರಾತ್ರಿ ಎರಡು ಮೂರು ತಂಡವಾಗಿ ಮಣಿಪಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗೆ ಇಳಿದಿದ್ದಾರೆ. ಪ್ರಕರಣದ ಎಫ್ಐಆರ್ ದಾಖಲಿಸಿದ್ದು, ಆರೋಪಿಗಳು ಕೃತ್ಯಕ್ಕೆ ಕಾರನ್ನು ಬಳಕೆ ಮಾಡಿರುವುದು ತಿಳಿದು ಬಂದಿದೆ. ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಆರೋಪಿಗಳನ್ನು ಶೀಘ್ರ ಪತ್ತೆ ಮಾಡುತ್ತೇವೆ ಎಂದು ಮಣಿಪಾಲ ಇನ್‌ಸ್ಪೆಕ್ಟರ್ ದೇವರಾಜ್ ತಿಳಿಸಿದ್ದಾರೆ. ಒಟ್ಟಾರೆ ಪ್ರಕರಣದ ಹಿಂದೆ ಗಾಂಜಾ ದಂಧೆಯ ನಂಟು ಇರಬಹುದೇ ಎಂದು ಪೊಲೀಸರು ಶಂಕಿಸಿದ್ದು, ಎಲ್ಲ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.