Advertisement

ಮಣಿಪಾಲ ವೈರಸ್‌ ಸಂಶೋಧನ ಕೇಂದ್ರ ದೇಶದ ಆಸ್ತಿ

06:00 AM Jun 17, 2018 | Team Udayavani |

ಉಡುಪಿ: ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ನ (ಮಾಹೆ)ಯ ಮಣಿಪಾಲ್‌ ಸೆಂಟರ್‌ ಫಾರ್‌ ವೈರಸ್‌ ರಿಸರ್ಚ್‌ (ಎಂಸಿವಿಆರ್‌) ಮತ್ತಷ್ಟು ಅತ್ಯಾಧುನಿಕವಾಗಿ ರೂಪುಗೊಂಡು ತನ್ನ ಸಂಶೋಧನೆ ಮತ್ತು ಆರೋಗ್ಯ ಸೇವೆಯ ಮೂಲಕ ಮುಂದಿನ ದಿನಗಳಲ್ಲಿ ದೇಶದ ಆಸ್ತಿಯಾಗಲಿದೆ ಎಂದು ಮಾಹೆ ಕುಲಪತಿ ಡಾ| ಎಚ್‌. ವಿನೋದ್‌ ಭಟ್‌ ಹೇಳಿದರು.

Advertisement

ಎಂಸಿವಿಆರ್‌ನ 7.43 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಅತ್ಯಾಧುನಿಕ ಪ್ರಯೋಗಾಲಯಗಳನ್ನು ಹೊಂದುವ ಮೂಲಕ ವಿಶೇಷವಾಗಿ ವೈರಾಲಜಿ ಸಂಬಂಧಿಸಿದ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಎಂಸಿವಿಆರ್‌ನಿಂದ ದೊರೆಯಲಿದೆ ಎಂದು ಡಾ| ಭಟ್‌ ಹೇಳಿದರು.

ರಾಷ್ಟ್ರೀಯ ಸಂಶೋಧನ ಪ್ರಾಧ್ಯಾಪಕ ಹಾಗೂ ಮಾಹೆಯ ನಿವೃತ್ತ ಕುಲಪತಿ ಡಾ| ಎ.ಎಸ್‌. ವಲಿಯತ್ತಾನ್‌ ಅವರು ಮಾತನಾಡಿ, ವೈರಸ್‌ ಹಾಗೂ ಪ್ರಾಣಿಗಳಿಂದ ಹರಡುವ ರೋಗಗಳು ಜಗತ್ತಿಗೆ ಸವಾಲಾಗುತ್ತಿರುವ ಈ ಕಾಲಘಟ್ಟದಲ್ಲಿ ಎಂಸಿವಿಆರ್‌ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ಎಂಸಿವಿಆರ್‌ ಮುಖ್ಯಸ್ಥ ಡಾ| ಅರುಣ್‌ ಕುಮಾರ್‌ ಅವರು ಮಾತನಾಡಿ, ಎಂಸಿವಿಆರ್‌ ದೇಶದಲ್ಲಿ ವೈರಸ್‌ ರೋಗಗಳ ಪತ್ತೆ ಹಚ್ಚುವ ಮತ್ತು ನಿಯಂತ್ರಣ ಕಾರ್ಯದಲ್ಲಿ ಸರಕಾರಗಳ ಜತೆಗೆ ಮಹತ್ವದ ಜವಾಬ್ದಾರಿ ನಿಭಾಯಿಸುತ್ತಿದೆ ಎಂದರು.

ನಿಫಾ ಪತ್ತೆಯಲ್ಲಿ ಮಹತ್ವದ ಪಾತ್ರ
ಇತ್ತೀಚೆಗೆ ಕೇರಳದಲ್ಲಿ ಹಲವರ ಸಾವಿಗೆ ಕಾರಣವಾಗಿ ಆತಂಕ ಸೃಷ್ಟಿಸಿದ ನಿಫಾ ವೈರಸ್‌ ಸೋಂಕಿನ ಪತ್ತೆ ಮತ್ತು ನಿಯಂತ್ರಣ ಕಾರ್ಯದಲ್ಲಿ ಎಂಸಿವಿಆರ್‌ ತಜ್ಞರು ಡಾ| ಅರುಣ್‌ ಕುಮಾರ್‌ ಅವರ ನೇತೃತ್ವದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ನಿಫಾ ನಿಯಂತ್ರಣ: ಎಂಸಿವಿಆರ್‌ ತಂಡ ವಾಪಸ್‌
ಉಡುಪಿ: ಕೇರಳದಲ್ಲಿ ಹಲವರ ಸಾವಿಗೆ ಕಾರಣವಾಗಿ ಆತಂಕ ಸೃಷ್ಟಿಸಿದ್ದ ನಿಫಾ ವೈರಸ್‌ ಸೋಂಕು ಈಗ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಹಾಗಾಗಿ ಅಲ್ಲಿ ವಿಶೇಷ ಕಾರ್ಯಾಚರಣೆ ನಡೆಯುತ್ತಿಲ್ಲ. ಎಂಸಿವಿಆರ್‌ ಸಿಬಂದಿ ಕೂಡ ಮಣಿಪಾಲಕ್ಕೆ ವಾಪಸಾಗಿದ್ದಾರೆ. ತಂಡಕ್ಕೆ ಕೇರಳ ಸರಕಾರ ವಿಶೇಷ ಕೃತಜ್ಞತೆ ಸಲ್ಲಿಸಿದೆ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತಂಡದ ಹಾಗೂ ಮಣಿಪಾಲ್‌ ಸೆಂಟರ್‌ ಫಾರ್‌ ವೈರಸ್‌ ರಿಸರ್ಚ್‌ (ಎಂಸಿವಿಆರ್‌) ಮುಖ್ಯಸ್ಥ ಡಾ| ಅರುಣ್‌ ಕುಮಾರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next