ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ 76ನೇ ವಾರ್ಷಿಕ ಭಜನ ಏಕಾಹದ ಪ್ರಯುಕ್ತ ಮಹಾರಾಷ್ಟ್ರ ಸಿಂಧುದುರ್ಗ ಕುಡಾಳ್‌ನ ಶ್ರೀ ಜಗನ್ನಾಥ ಮ್ಯೂಸಿಕ್ ಸ್ಕೂಲ್ ಪಕ್ವಾಜ್ ಅಲಂಕಾರ್ ಮಹೇಶ್ ವಿಟ್ಠಲ್ ಸಾವಂತ್ ಅವರ ನೇತೃತ್ವದ ನೂರು ಮಂದಿ ಕಲಾವಿದರ ತಂಡದಿಂದ ವಿಶೇಷವಾಗಿ ಪಕ್ವಾಜ್-ತಬಲಾ-ಡೋಲಕ್ ಜುಗಲ್ ಬಂದಿ ಮತ್ತು ಶತ ಮೃದಂಗ ವಾದನ “ಭಜನ ರಂಗ್’ ಶ್ರೀ ಪೂರ್ಣಾನಂದ ಸ್ಮತಿ ಮಂಟಪದಲ್ಲಿ ನೆರವೇರಿತು.
ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನ. 26ರ ಮಧ್ಯಾಹ್ನ 12ರಿಂದ 27ರ ಪೂರ್ವಾಹ್ನ 9ರ ತನಕ 76ನೇ ವಾರ್ಷಿಕ ಭಜನ ಏಕಾಹದೊಂದಿಗೆ ಮಂಗಳವಾಯಿತು. “ಭಜನ ರಂಗ್’ ಕಾರ್ಯಕ್ರಮವನ್ನು ಹಿರಿಯರಾದ ಎಸ್.ಕೆ. ಸಾಮಂತ್ ಉದ್ಘಾಟಿಸಿ ಶುಭ ಹಾರೈಸಿದರು.
ಆಕಾಶವಾಣಿ ಆಲ್ ಇಂಡಿಯಾ ರೇಡಿಯೋ ಕಲಾವಿದರು, ಪಕ್ವಾಜ್ ವಿಶಾರದರು, ಡೋಲಕ್ ಕಲಾವಿದರು, ತಬಲಾ ವಿಶಾರದರು ಸೇರಿದಂತೆ ವೋಕಲ್, ಹಾರ್ಮೋನಿಯಂ ವಾದಕರನ್ನು ಹೊಂದಿದ ಕಲಾ ತಂಡವು ಚಿಕ್ಕ ವಯಸ್ಸಿನಿಂದ ಹಿಡಿದು ಹಿರಿಯರನ್ನು ಒಳಗೊಂಡಿದೆ. 75 ಮಂದಿ ಪಕ್ವಾಜ್ ಕಲಾವಿದರು, ನಾಲ್ವರು ತಬಲಾ ವಾದಕರು, ಇಬ್ಬರು ಡೋಲಕ್ ವಾದಕರು ಹಾಗೂ ಉಳಿದಂತೆ ಇತರೆ ಪಕ್ಕವಾದ್ಯಗಳೊಂದಿಗೆ ಗಾನ ಸಂಗೀತ ವಿಶಾರದರನ್ನು ಸೇರಿದ ನೂರು ಮಂದಿಯ ತಂಡದಿಂದ ಭಜನ ಸಂಕೀರ್ತನೆ ನಡೆಯಿತು.
ಪ್ರಫುಲ್ಲ ವಿಲಾಸ ರೇವಣಕರ್, ಅಮಿತ್ ಉಮ್ಮಳಕರ್ ಹಾಗೂ ಶಿಷ್ಯರಿಂದ ಸಂಗೀತ ಗಾನಸುಧೆ ಮೊಳಗಿತು. ಅಕ್ಷಯ್ ಸಾತರಡೇಕರ್ ಸಂಗೀತ ನಿರ್ವಹಿಸಿದ್ದರು. ಪಕ್ವಾಜ್-ತಬಲಾ-ಡೋಲಕ್ ಜುಗಲ್ ಬಂದಿ ಕಾರ್ಯಕ್ರಮವು ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿತು. ವಿಶೇಷವಾಗಿ ಶಿವತಾಂಡವ, ಶ್ರೀದೇವಿ ನಾಮಾವಳಿ, ಶಿವ, ದುರ್ಗಾ, ವಿಠಲ ಹಾಗೂ ವಿವಿಧ ದೇವರ ಭಜನೆ ಸಂಕೀರ್ತನೆಯನ್ನು ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಹಾಡಿ ನೆರೆದ ಅಪಾರ ಭಕ್ತರನ್ನು ಗಾನ-ನಿನಾದ ಲೋಕದಲ್ಲಿ ತೇಲಾಡಿಸಿದರು.
ಭಜನ ರಂಗ್ ಕಾರ್ಯಕ್ರಮದ ರೂವಾರಿ, ಆಡಳಿತ ಮೊಕ್ತೇಸರ ಮಹೇಶ್ ಠಾಕೂರ್ ಸ್ವಾಗತಿಸಿದರು. ಶಾಶ್ವತ ಟ್ರಸ್ಟಿ ದಿನೇಶ್ ಶ್ರೀಧರ ಸಾಮಂತ್ ಪ್ರಾಸ್ತಾವಿಕ ಮಾತನಾಡಿದರು.
ಆಡಳಿತ ಮೊಕ್ತೇಸರ ಸುಭಾಕರ ಸಾಮಂತ್, ಅಧ್ಯಕ್ಷ ಎಸ್. ದಿನೇಶ್ ಪ್ರಭು, ಉಪಾಧ್ಯಕ್ಷ ಎಚ್. ಪುರುಷೋತ್ತಮ ಪ್ರಭು, ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಕೋಶಾಧಿಕಾರಿ ಶ್ರೀಕಾಂತ ಪ್ರಭು, ಜತೆಕಾರ್ಯದರ್ಶಿ ಅಶೋಕ್ ಸಾಮಂತ್, ಟ್ರಸ್ಟಿಗಳಾದ ಜಿ. ಕೃಷ್ಣರಾಯ ಪಾಟೀಲ್, ಶ್ರೀರಾಮ ಪ್ರಭು, ಸಂಜಯ ಪ್ರಭು, ರಾಮದಾಸ ಪ್ರಭು, ಸತೀಶ್ ಪಾಟೀಲ್, ಪ್ರಕಾಶ ಪ್ರಭು, ಕೆಡಿಜಿಬಿ ಸ್ಥಾಪಕಾಧ್ಯಕ್ಷ ಭರತ ಪ್ರಭು, ಸರಪಂಚ್ ನಾಥ ಮಡಿವಾಳ ಕುಡಾಳ್ ಉಪಸ್ಥಿತರಿದ್ದರು.
ಭಜನ ಏಕಾಹದ ಪ್ರಯುಕ್ತ ನ. 26ರಂದು ಮಹಾಪೂಜೆ, ದೀಪ ಪ್ರಜ್ವಲನೆ, ವಿವಿಧ ಭಜನ ತಂಡಗಳಿಂದ ಭಜನ ಸಂಕೀರ್ತನೆ, ದೀಪ ಸ್ಥಾಪನೆ, ನ. 27ರಂದು ದೀಪ ವಿಸರ್ಜನೆ, ಓಕುಳಿ, ಅವಭೃಥಸ್ನಾನ, ಪ್ರಸನ್ನ ಪೂಜೆ, ಭಜನ ಮಂಗಲ, ಮಹಾಪೂಜೆ, ಅನ್ನಸಂತರ್ಪಣೆ-ವನ ಭೋಜನ, ರಾತ್ರಿ ಪೂಜೆ, ರಂಗಪೂಜೆ ನೆರವೇರಿತು.