ಮಣಿಪಾಲ: ಮಾಹೆ ವಿ.ವಿ.ಯ ಯೋಗ ವಿಭಾಗದಿಂದ ಮರೇನಾ ಕ್ರೀಡಾ ಸಂಕೀರ್ಣದಲ್ಲಿ ಗುರುವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಇದೇ ವೇಳೆ ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಾಗೂ ಯೋಗದ ಬಗ್ಗೆ ಸಾರ್ವಜನಿಕವಾಗಿ ಅರಿವು ಮೂಡಿಸುತ್ತಿರುವ ಮಣಿಪಾಲದ “ಮಣಿಪ್ರಾಣ ಯೋಗ ಸ್ಟುಡಿಯೋ’ದ ಅಯ್ಯಂಗಾರ್ ಯೋಗ ಇನ್‌ಸ್ಟ್ರಕ್ಟರ್ ವನಿತಾ ಪೈ ಹಾಗೂ ಯೋಗ ಥೆರಪಿಸ್ಟ್ ಲಕ್ಷ್ಮೀ ದಿವಾಕರ್ ಅವರನ್ನು ಸಮ್ಮಾನಿಸಲಾಯಿತು.
ಎಂಎಂಎನ್‌ಎಲ್ ಕಾರ್ಯ ನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು.ಪೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಮಾತನಾಡಿ, ಭಾರತವು ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆಗಳಲ್ಲಿ ಯೋಗವೂ ಒಂದು. ಪ್ರಸ್ತುತ ಯೋಗವು ಅತ್ಯಂತ ಮಹತ್ವದ ವಿಷಯವಾಗಿದೆ. ಮನಸ್ಸಿನ ನಿಯಂತ್ರಣ ಹಾಗೂ ಮಾನಸಿಕ ಸಮಸ್ಯೆಗಳ ನಿವಾರಣೆಗೂ ಯೋಗ ಸಹಕಾರಿಯಾಗಲಿದೆ. ನಮ್ಮನ್ನು ಬಾಧಿಸುವ ರೋಗಗಳಲ್ಲಿ ಶೇ.75ರಷ್ಟು ಮನಸ್ಸಿಗೆ ಸಂಬಂಧಿಸಿದ್ದಾಗಿವೆ. ಹೀಗಾಗಿ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಉತ್ತಮ ಗುಣಮಟ್ಟದ ಜೀವನ ನಡೆಸಲು ಯೋಗ ಸಹಕಾರಿಯಾಗಲಿದೆ ಎಂದು ಹೇಳಿದರು.
“ಉದಯವಾಣಿ’ ದಿನಪತ್ರಿಕೆಯಲ್ಲಿ ಶುಕ್ರವಾರ ಪ್ರಕಟವಾಗಿರುವ ಯೋಗ ಗುರು ಬಿಕೆಎಸ್ ಅಯ್ಯಂಗಾರ್ ಅವರ ನುಡಿ ಮತ್ತು ಶ್ವಾಸಗುರು ವಚನಾನಂದ ಸ್ವಾಮೀಜಿಯರ ಲೇಖನದ ತುಣುಕಗಳನ್ನು ಸಭೆಯಲ್ಲಿ ಉಲ್ಲೇಖಿಸುವ ಮೂಲಕ ಗಮನ ಸೆಳೆದರು.
ಸಹ ಕುಲಪತಿ ಡಾ| ಶರತ್ ಕುಮಾರ್ ರಾವ್ ಮಾತನಾಡಿ, ಅಲೋಪತಿಯ ಜತೆಗೆ ಭಾರತೀಯ ಔಷಧ ಪದ್ಧತಿಯೂ ಮುನ್ನೆಲೆಗೆ ಬರಬೇಕಿದೆ. ಮಾಹೆ ವಿ.ವಿ.ಯು ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮ ತೆಗೆದುಕೊಳ್ಳುತ್ತಿದೆ. ಭಾರತೀಯ ವೈದ್ಯ ಪದ್ಧತಿಗೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ವಿಶೇಷ ಯೋಜನೆಗಳನ್ನು ಮಾಹೆ ಹಾಕಿಕೊಂಡಿದೆ. ಭಾರತೀಯ ಸಂಸ್ಕೃತಿಯ ದೊಡ್ಡ ಭಾಗವಾಗಿರುವ ಯೋಗದಿಂದ ಎಲ್ಲವೂ ಸಾಧ್ಯವಿದೆ ಎಂದರು.
ಫಿಲಾಂತ್ರಪಿಸ್ಟ್ ಇಂದಿರಾ ಬಲ್ಲಾಳ್ ಅವರು ಯೋಗ ಸಾಧಕರನ್ನು ಸಮ್ಮಾನಿಸಿದರು.ಮಾಹೆ ಕುಲಸಚಿವ ಡಾ| ಗಿರಿಧರ್ ಕಿಣಿ ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಸಂಶೋಧನ ವಿಭಾಗದ ನಿರ್ದೇಶಕ ಡಾ| ಬಿ.ಎಸ್. ಸತೀಶ್ ಸ್ವಾಗತಿಸಿ, ಯೋಗ ವಿಭಾಗದ ಮುಖ್ಯಸ್ಥೆ ಡಾ| ಅನ್ನಪೂರ್ಣಾ ಕೆ. ಪ್ರಸ್ತಾವಿಸಿದರು. ಡಾ| ನಿತಿನ್ ಕುಮಾರ್ ಪಾಟೀಲ್ ವಂದಿಸಿ, ಡಾ| ಲಾವ್ಯಾ ಶೆಟ್ಟಿ ಹಾಗೂ ಡಾ| ದಿವ್ಯಾ ಪೂಜಾರಿ ನಿರೂಪಿಸಿದರು.
ಡಾ| ಅನ್ನಪೂರ್ಣಾ ಕೆ. ಅವರ ಮುಂದಾಳತ್ವದಲ್ಲಿ ಯೋಗ ಪ್ರದರ್ಶನ ಹಾಗೂ ಪ್ರಯೋಗ ನಡೆಯಿತು.
ಅಯ್ಯಂಗಾರ್ ಯೋಗ ಪದ್ಧತಿಯು ಅತ್ಯಂತ ಪ್ರಚಲಿತವಾದದ್ದು ಮತ್ತು ಮನಸ್ಸಿನ ನೋವು ನಿವಾರಣೆಯ ಜತೆಗೆ ಏಕಾಗ್ರತೆ ಶಕ್ತಿ ಹೆಚ್ಚಿಸಲು ಅನುಕೂಲಕರ. ಇತ್ತೀಚಿನ ದಿನಗಳಲ್ಲಿ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದಕ್ಕಾಗಿ ಯುವ ಜನತೆ ಸೇರಿದಂತೆ ಬಹುತೇಕರು ಯೋಗದ ಮೊರೆ ಹೋಗುತ್ತಿದ್ದಾರೆ. ನಿತ್ಯ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ.
-ವನಿತಾ ಪೈ, ಅಯ್ಯಂಗಾರ್ ಯೋಗ ಇನ್‌ಸ್ಟ್ರಕ್ಟರ್, ಮಣಿಪ್ರಾಣ ಯೋಗ ಸ್ಟುಡಿಯೋ, ಮಣಿಪಾಲ
ಯೋಗವು ಎಲ್ಲ ರೀತಿಯ ನೋವು ನಿವಾರಕವಾಗಿದೆ. ಯೋಗದಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ.
-ಲಕ್ಷ್ಮೀ ದಿವಾಕರ್,
ಯೋಗ ಥೆರಪಿಸ್ಟ್