ಮಣಿಪಾಲ: ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ಶಿರನ್ ಶೆಟ್ಟಿ ನೇತೃತ್ವದ ವೈದ್ಯರ ತಂಡ ಡಾ| ಗಣೇಶ್ ಭಟ್, ಡಾ| ಅತಿಶ್ ಶೆಟ್ಟಿ, ಡಾ| ಬಾಲಾಜಿ, ಡಾ| ಸಂದೇಶ್ ಶೇಟ್ (ಅರಿವಳಿಕೆ) ಅವರು ಎಂಡೋಅಲ್ಟ್ರಾಸೌಂಡ್ ಗೈಡೆಡ್ ಗ್ಯಾಸ್ಟ್ರೋಜೆಜುನೋಸ್ಟೋಮಿ ಎಂಬ ಸಂಕೀರ್ಣ ವಿನೂತನ ಎಂಡೋಸ್ಕೋಪಿ ಚಿಕಿತ್ಸೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಇತ್ತೀಚೆಗೆ ನಡೆಸಿದರು.
ಕ್ಯಾನ್ಸರ್‌ನಿಂದಾಗಿ ಗ್ಯಾಸ್ಟ್ರಿಕ್ ಔಟ್ಲೆಟ್ ಅಡಚಣೆ ಹೊಂದಿರುವ ವ್ಯಕ್ತಿಗೆ ಯಶಸ್ವಿಯಾಗಿ ಈ ಚಿಕಿತ್ಸೆ ನಡೆಸಿದರು. ಈ ವಿಧಾನವು ಶಸ್ತ್ರಚಿಕಿತ್ಸೆಗಿಂತ ಕಡಿಮೆ ಗಾಯವನ್ನುಂಟುಮಾಡುವ ಮತ್ತು ಯಾವುದೇ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗದ ರೋಗಿಗಳಿಗೆ ಇದು ಸೂಕ್ತ ವಿಧಾನವಾಗಿದೆ. ಎಂಡೋಸ್ಕೋಪಿಯ ಮರುದಿನವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಮತ್ತು ಇದನ್ನು ಶಸ್ತ್ರಚಿಕಿತ್ಸೆಗಿಂತ ಕಡಿಮೆ ವೆಚ್ಚದಲ್ಲಿ ಮಾಡಬಹುದು.
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಮತ್ತು ಗ್ಯಾಸ್ಟ್ರಿಕ್ ಔಟ್ಲೆಟ್ ಅಡಚಣೆಯೊಂದಿಗೆ ನಿರಂತರ ವಾಂತಿ ಮಾಡುತ್ತಿದ್ದ 55 ವರ್ಷ ವಯಸ್ಸಿನ ಪುರುಷನನ್ನು ಮತ್ತೂಂದು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಕಳುಹಿಸಿದ್ದರು. ವೈದ್ಯರ ತಂಡ ಮತ್ತು ರೋಗಿಯ ಸಂಬಂಧಿಕರೊಂದಿಗೆ ಮಾತುಕತೆ ಮತ್ತು ಚರ್ಚೆಯ ಅನಂತರ, ಆಹಾರದ ಸುಲಭ ಮಾರ್ಗಕ್ಕಾಗಿ ಯುಎಸ್ -ಗ್ಯಾಸ್ಟ್ರೋಜೆಜುನೋಸ್ಟೊಮಿ (ಹೊಟ್ಟೆ ಮತ್ತು ಸಣ್ಣ ಕರುಳಿನ ನಡುವಿನ ಸಂಪರ್ಕ) ಎಂಬ ವಿಶಿಷ್ಟ ಎಂಡೋಸ್ಕೋಪಿಕ್ ಚಿಕಿತ್ಸೆ ನಿರ್ವಹಿಸಲು ನಿರ್ಧರಿಸಲಾಯಿತು. ಚಿಕಿತ್ಸೆಯ ಬಳಿಕ ರೋಗಿಯು ಬಾಯಿಯ ಮೂಲಕ ಆಹಾರ ತೆಗೆದುಕೊಳ್ಳಲು ಸಮರ್ಥರಾದರು.
ಹೊಸ ತಂತ್ರಜ್ಞಾನದಿಂದಾಗಿ ವಿವಿಧ ಸಂಕೀರ್ಣ ರೋಗಗಳಿಗೆ ಎಂಡೋಸ್ಕೋಪಿ ಮೂಲಕವೇ ಹೆಚ್ಚಿನ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ ಮತ್ತು ಇದು ರೋಗಿ ಸ್ನೇಹಿ ಹಾಗೂ ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ವಹಿಸಬಹುದಾಗಿದೆ. ಗ್ರಾಮೀಣ ಬಡ ರೋಗಿಗಳ ನಿರ್ವಹಣೆಗಾಗಿ ಇಂತಹ ಹೊಸ ಎಂಡೋಸ್ಕೋಪಿ ತಂತ್ರಜ್ಞಾನ ಬಳಸಿಕೊಳ್ಳುವ ಭಾರತದ ಮೊದಲ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಲ್ಲಿ ಮಣಿಪಾಲ ಒಂದಾಗಿದೆ ಎಂದು ಡಾ| ಶಿರನ್ ಶೆಟ್ಟಿ , ಮುಖ್ಯ ನಿರ್ವಹಣಾಧಿಕಾರಿ ಡಾ| ಆನಂದ್ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.