Advertisement
ಈಗಾಗಲೇ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಮಳೆ ಹೆಚ್ಚಾದಂತೆ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ರಸ್ತೆ ತಗ್ಗಿನಲ್ಲಿರುವುದರಿಂದ ರಾತ್ರಿ ವೇಳೆ ಮಳೆ ಸಮಯದಲ್ಲಿ ಚಾಲಕರಿಗೆ ರಸ್ತೆ ಪರಿಸ್ಥಿತಿ ಅರಿವಿಲ್ಲದೆ ಒಂದೇ ವೇಗದಲ್ಲಿ ಸಾಗಿದರೆ ಭೀಕರ ಅಪಘಾತ ಕಟ್ಟಿಟ್ಟ ಬುತ್ತಿ. ಈಗಾಗಲೇ ಸಾಕಷ್ಟು ಮಂದಿ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಕೆಳ ಪರ್ಕಳ ರಸ್ತೆಯನ್ನು ಕೆಸರು, ಧೂಳಿನಿಂದ ಮುಕ್ತಿ ಕಲ್ಪಿಸಲು ತಾತ್ಕಾಲಿಕ ನೆಲೆಯಲ್ಲಿ ಡಾಮರು ಹಾಕಿ ಅಭಿವೃದ್ಧಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಮಳೆಗಾಲದ ಶುರುವಿನಲ್ಲೇ ರಸ್ತೆ ಒಂದು ಭಾಗದಲ್ಲಿ ಕುಸಿಯುತ್ತ ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿತ್ತು.
Related Articles
Advertisement
ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರ ತಾತ್ಕಾಲಿಕ ದುರಸ್ತಿಗೆ ಮುಂದಾಗಿ ಕೆಲವು ಪ್ರಯತ್ನಗಳನ್ನು ಮಾಡಲಾಗಿತ್ತು. ವೆಟ್‌ಮಿಕ್ಸ್, ಮಣ್ಣು-ಜಲ್ಲಿಪುಡಿ ತುಂಬಿಸಿದರೂ ಮಳೆಯಲ್ಲಿ ರಸ್ತೆ ಕುಸಿಯುತ್ತಿರುವ ಪರಿಣಾಮ ಪ್ರಸ್ತುತ ಪರಿಹಾರ ಸಾಧ್ಯವಾಗಿರಲಿಲ್ಲ. ಈ ನಿಟ್ಟಿನಲ್ಲಿ ಶಾಸಕ ಕೆ. ರಘುಪತಿ ಭಟ್ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಿದಂತೆ ರಸ್ತೆಯ ಎರಡು ಬದಿಯಲ್ಲಿ ಕಾಂಕ್ರೀಟ್ ಸೈಡ್ ಸೇಫ್ಟಿ ವಾಲ್ ಮತ್ತು ಕಾಂಕ್ರೀಟ್ ಚರಂಡಿಯ ಜತೆ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಚರಂಡಿ ಕಾಮಗಾರಿ ಆರಂಭಗೊಂಡಿದ್ದು, ವಾರದೊಳಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಕೊಡುವ ಬಗ್ಗೆ ರಾ. ಹೆ. ಪ್ರಾಧಿಕಾರದ ಎಂಜಿನಿಯರ್ ಭರವಸೆ ನೀಡಿದ್ದಾರೆ.
ಇಂದು ಪ್ರತಿಭಟನೆ
ರಸ್ತೆ ಅವ್ಯವಸ್ಥೆಯನ್ನು ಸರಿಪಡಿಸಲು ಆಗ್ರ ಹಿಸಿ ಮನೋವೈದ್ಯ ಡಾ| ಪಿ. ವಿ. ಭಂಡಾರಿ ನೇತೃತ್ವದಲ್ಲಿ ಜು. 24 ರಂದು ಪರ್ಕಳ ಗೋಪಾಲಕೃಷ್ಣ ದೇವಸ್ಥಾನದ ಎದುರು ಸ್ಥಳೀಯರು, ವಾಹನ ಸವಾರರು ಸೇರಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಶೀಘ್ರ ಕಾಮಗಾರಿ ಪೂರ್ಣ: ನಿರಂತರ ಮಳೆ ಮತ್ತು ಮಣ್ಣಿನ ಕುಸಿತ ಪರಿಣಾಮ ಕೆಳಪರ್ಕಳ ರಸ್ತೆಗೆ ತಾತ್ಕಾಲಿಕ ದುರಸ್ತಿಯ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಕಾಂಕ್ರಿಟ್ ರಸ್ತೆಯೊಂದೇ ಪರಿಹಾರವಾಗಿದ್ದು, ರಾ. ಹೆ. ಪ್ರಾಧಿಕಾರದ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಪ್ರಾಥಮಿಕ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. – ಕೆ. ರಘುಪತಿ ಭಟ್, ಶಾಸಕರು