ಉಡುಪಿ : ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಪ್ರಸಿದ್ಧವಾಗಿರುವ ಮಂಗಳೂರಿನ ಹಾಂಗ್ಯೊ ಮತ್ತು ಮಹಾರಾಜ ಹೊಟೇಲ್‌ಗಳ ಜಂಟಿ ಸಹಭಾಗಿತ್ವದಲ್ಲಿ ಮಣಿಪಾಲ ಮುಖ್ಯ ರಸ್ತೆಯ ಮಣಿಪಾಲ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭ ಗೊಂಡಿರುವ “ಕೋಸ್ಟ್ ಏಷ್ಯಾ’ ಪ್ಯಾನ್ ಏಷ್ಯಾನ್ ಕುಸಿನ್-ಫ್ಯಾಮಿಲಿ ರೆಸ್ಟೋರೆಂಟನ್ನು ಮಾ. 8ರಂದು ಮಣಿಪಾಲದ ಟಿ. ಅಶೋಕ್ ಪೈ ಅವರು ಉದ್ಘಾಟಿಸಿದರು.
ಮಣಿಪಾಲದ ಜನತೆ ಮತ್ತು ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಕೇಂದ್ರವಾಗಲಿದೆ. ಮಹಾರಾಜ ಮತ್ತು ಹಾಂಗ್ಯೊ ಸಂಸ್ಥೆಗಳು ಸೇರಿಕೊಂಡು ಈ ಹೊಟೇಲನ್ನು ಮಾಡಿರುವುದರಿಂದ ಜನರಿಗೆ ಮಣಿಪಾಲದಲ್ಲಿ ಉತ್ತಮ ಹೊಟೇಲ್ ದೊರೆತಂತಾಗಿದೆ ಎಂದು ಟಿ. ಅಶೋಕ್ ಪೈ ಹೇಳಿದರು.
ಇಡೀ ಕುಟುಂಬಕ್ಕೊಂದು ಹೊಟೇಲ್ ಕೋಸ್ಟ್ ಏಷ್ಯಾ ಹೊಟೇಲ್‌ನಿಂದಾಗಿ ಉಡುಪಿ, ಮಣಿಪಾಲದ ಜನರಿಗೆ ಇಡೀ ಕುಟುಂಬ ಸಮೇತವಾಗಿ ಉತ್ತಮ ಊಟ, ತಿಂಡಿಯನ್ನು ಸವಿಯುವ ಅವಕಾಶ ದೊರೆತಂತಾಗಿದೆ. ಉತ್ತಮ ಹೊಟೇಲ್‌ನ ಕೊರತೆಯನ್ನು ಇದು ನೀಗಿಸಿದೆ. ಹೊಟೇಲ್ ಉದ್ಯಮ ದಲ್ಲಿಯೂ ಪ್ರೀತಿ ಮತ್ತು ಆದರ ಅತೀ ಅಗತ್ಯ. ಗ್ರಾಹಕರನ್ನು ಗೌರವ ಮತ್ತು ಪ್ರೀತಿಯಿಂದ ಸ್ವಾಗತಿಸಿ ಉತ್ತಮ ಸೇವೆ ನೀಡಿದಾಗ ಖಂಡಿತಾ ಯಶಸ್ಸು ದೊರೆಯುತ್ತದೆ. ಉತ್ತಮ ಆಹಾರ-ತಿನಿಸುಗಳಿಗೆ ಹೆಸರುವಾಸಿ ಯಾಗಿರುವ ಮಹಾರಾಜ ಮತ್ತು ಹಾಂಗ್ಯೋ ಸಂಸ್ಥೆಗಳ ಸಹಭಾಗಿತ್ವದ ಹೊಟೇಲ್ ಮಣಿಪಾಲದಲ್ಲಿ ಆರಂಭ ವಾಗುತ್ತಿರುವುದು ಅತ್ಯಂತ ಖುಷಿಯ ವಿಚಾರ ಎಂದು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ “ತರಂಗ’ದ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ ಅವರು ಹೇಳಿದರು.
ಮಣಿಪಾಲ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅವರು ಮಾತನಾಡಿ, ಗುಣಮಟ್ಟದ ಆಹಾರ, ಸೇವೆಯಿಂದ ಯಶಸ್ಸು ಸಾಧ್ಯ. ಇದು ಕೋಸ್ಟ್ ಏಷ್ಯಾ ಹೊಟೇಲ್‌ನಲ್ಲಿದೆ ಎಂಬ ಪೂರ್ಣ ವಿಶ್ವಾಸ ಇದೆ ಎಂದು ಹೇಳಿದರು.
ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಆಡಳಿತ ನಿರ್ದೇಶಕ ಟಿ. ಸತೀಶ್ ಯು. ಪೈ, ಉದ್ಯಮಿ ಪುರುಷೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಹಾರಾಜ ಹೊಟೇಲ್ ಮಾಲಕ ಸುಬ್ಬಣ್ಣ ಪ್ರಭು, ಚೀಫ್ ಆಪರೇಟಿಂಗ್ ಆಫೀಸರ್ ಕೋಮಲ್, ಕೋಸ್ಟ್ ಏಷ್ಯಾದ ಕಾರ್ಯನಿರ್ವಹಣಾ ಪಾಲು ದಾರ ಎಂ. ಸುಧೀಂದ್ರ ಪ್ರಭು, ದಿನೇಶ್ ಆರ್. ಪೈ, ಜಗದೀಶ್ ಪೈ, ಪ್ರದೀಪ್ ಪೈ ಮತ್ತು ದೀಪಾ ಪೈ ಉಪಸ್ಥಿತರಿದ್ದರು. ವಿಜೆ ಸಂದೀಪ್ ಭಕ್ತ ಕಾರ್ಯಕ್ರಮ ನಿರ್ವಹಿಸಿದರು.