ಉಡುಪಿ: ನಗರದ ಮಣಿಪಾಲ-ಅಲೆವೂರು ರಸ್ತೆ ಶಂತಿನಗರ, ಕೈಗಾರಿಕ ಪ್ರದೇಶ ಭಾಗದ ರಸ್ತೆಯು ಸಂಚಾರ ಸಾಧ್ಯವಾಗದ ಭೀಕರ ಸ್ವರೂಪ ಪಡೆದುಕೊಂಡಿದೆ. ರಸ್ತೆ ಹದಗೆಟ್ಟಿರುವ ಪರಿಸ್ಥಿತಿ ಹೇಗಿದೆ ಎಂದರೇ ಇಲ್ಲಿ ಸಂಚರಿಸುವ ವಾಹನ ಸವಾರರಿಗೆ ಬೆನ್ನುಮೂಳೆ ಗಟ್ಟಿಯಾಗಿರಬೇಕು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಶಾಂತಿನಗರ ಬಸ್ ನಿಲ್ದಾಣ ಮತ್ತು ಇಂಡಸ್ಟ್ರಿಯಲ್ ಏರಿಯ, ಅಲೆವೂರು ಸಂಪರ್ಕಿಸುವ ಜಂಕ್ಷನ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮುಂಭಾಗದ ಪರಿಸರ ಸಾಕಷ್ಟು ಹೊಂಡ, ಗುಂಡಿಗಳಿಂದ ಕೂಡಿದ್ದು, ಅಪಾಯಕಾರಿಯಾಗಿದೆ. ವಾಹನ ಓಡಾಟ ಕಷ್ಟಕರವಾಗಿದ್ದು, ನಿತ್ಯ ಸವಾರರು ತತ್ತರಿಸುತ್ತಿದ್ದಾರೆ. ಅಲ್ಲಲ್ಲಿ ಬೃಹತ್ ಗಾತ್ರದ ಗುಂಡಿಗಳು ಸೃಷ್ಟಿಯಾಗಿ, ರಸ್ತೆಯ ಮೇಲ್ಮೈ ಪದರ ಸಂಪೂರ್ಣ ಕಿತ್ತುಹೋಗಿದೆ. ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಅಪಘಾತಗಳು ಆಗಾಗ ಸಂಭವಿಸುತ್ತಿದೆ.
ಮಳೆಯಲ್ಲಿ ಗುಂಡಿಗಳಲ್ಲಿ ಕೆಸರು ನೀರು ತುಂಬಿ ಸಂಚಾರ ಕಷ್ಟಕರವಾಗಿದ್ದರೇ, ಬೇಸಗೆಯಲ್ಲಿ ಧೂಳಿನ ವಾತಾವರಣದಿಂದ ಸಂಚಾರ ದುಸ್ತರವಾಗಿದೆ. ನಿತ್ಯ ಈ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ ಅನುಭವಿಸುವಂತಾಗಿದೆ. ನಗರಸಭೆ, ಜಿಲ್ಲಾಡಳಿತ ಈ ಬಗ್ಗೆ ಶೀಘ್ರ ಕ್ರಮ ತೆಗೆದುಕೊಂಡು ರಸ್ತೆಯನ್ನು ವ್ಯವಸ್ಥಿತವಾಗಿಸಿ ಕೊಡುವಂತೆ ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.
ಯಾವ್ಯಾವ ಭಾಗದ ಜನರಿಗೆ ಸಂಕಷ್ಟ?
ಅಲೆವೂರು, ಮಂಚಿ, ಪ್ರಗತಿನಗರ, ರಾಜೀವ ನಗರ, ನೇತಾಜಿ ನಗರ, ಶಾಂತಿ ನಗರ, ಕೆಳಶಾಂತಿ ನಗರ, ದಶರಥ ನಗರ, ದುಗ್ಲಿಪದವು, ಅರ್ಬಿ, ಹಿರೇಬೆಟ್ಟು. ಆದರ್ಶ ನಗರ, ರಾಹುಲ್ ನಗರ, ಅನಂತ ನಗರ, ಅರ್ಬಿ ಕೋಡಿ, ಕರ್ವಾಲು, ಪಡು ಅಲೆವೂರು ಭಾಗ ಜನರು ಈ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಾರೆ. ಮಣಿಪಾಲ-ಅಲೆವೂರು ಮುಖ್ಯರಸ್ತೆಯೂ ಇದೇ ಆಗಿದೆ. ಶಿಕ್ಷಣ, ಉದ್ಯೋಗ, ವ್ಯಾವಹಾರಿಕ ವಿಚಾರಗಳಿಗೆ ಸಂಬಂಧಿಸಿ ಮಣಿಪಾಲ, ಉಡುಪಿಗೆ ಇದೇ ಮಾರ್ಗದಲ್ಲಿ ಸ್ಥಳೀಯರ ಓಡುತ್ತಿದ್ದಾರೆ.
ಶೀಘ್ರ ಕಾಮಗಾರಿ ಆರಂಭ: ಮಣಿಪಾಲ-ಇಂಡಸ್ಟ್ರೀಯಲ್ ಏರಿಯಾ-ಅಲೆವೂರು ರಸ್ತೆಯ ವ್ಯವಸ್ಥಿತವಾಗಿಸಲು ಯೋಜನೆ ರೂಪಿಸಲಾಗಿದೆ. ಶಾಸಕರ ವಿಶೇಷ ಅನುದಾನ ಮತ್ತು ನಗರೋತ್ಥಾನ ಯೋಜನೆಯಡಿಯಲ್ಲಿ ದುಃಸ್ಥಿತಿಯಲ್ಲಿರುವ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಇದೀಗ ಟೆಂಡರ್ ಹಂತದಲ್ಲಿದ್ದು, ಪ್ರಕ್ರಿಯೆಪೂರ್ಣಗೊಂಡ ಬಳಿಕ ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. –
ಕಲ್ಪನಾ ಸುಧಾಮ, ಸದಸ್ಯರು, ಉಡುಪಿ ನಗರಸಭೆ