ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಶ್ರಯದಲ್ಲಿ ನಡೆಯುತ್ತಿರುವ ಆರು ಪ.ಪೂ. ಕಾಲೇಜುಗಳಾದ ಉಡುಪಿಯ ಎಂಜಿಎಂ ಪ.ಪೂ. ಕಾಲೇಜು, ಕಾರ್ಕಳದ ಶ್ರೀ ಭುವನೇಂದ್ರ ಪ.ಪೂ. ಕಾಲೇಜು, ಕುಂದಾಪುರದ ಭಂಡಾರ್‌ಕಾರ್ಸ್ ಪ.ಪೂ. ಕಾಲೇಜು, ಮೂಲ್ಕಿಯ ವಿಜಯ ಪ.ಪೂ. ಕಾಲೇಜು, ಮೂಡುಬಿದಿರೆಯ ಶ್ರೀ ಮಹಾವೀರ ಪ.ಪೂ. ಕಾಲೇಜು, ಶೃಂಗೇರಿಯ ಶ್ರೀ ಜೆ.ಸಿ.ಬಿ.ಎಂ. ಪ.ಪೂ. ಕಾಲೇಜುಗಳಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗಾಗಿ ವಿವಿಧ ವೃತ್ತಿಪರ ಕೋರ್ಸ್‌ಗಳಾದ ಸಿಇಟಿ, ನೀಟ್, ಎಂಇಟಿ, ಜೆಇಇ, ಐಐಟಿ ಮುಂತಾದ ಪರೀಕ್ಷೆಗಳಿಗೆ ಸೂಕ್ತ ತರಬೇತಿಯನ್ನು ದೇಶದ ಪ್ರತಿಷ್ಠಿತ ಎಜುಕೇಶನ್ ಕಂಪೆನಿ ಎಕ್ಸ್‌ಟ್ರಾಮಾರ್ಕ್ಸ್ ಸಹಯೋಗದಲ್ಲಿ ನಡೆಸಲಾಗುತ್ತಿದೆ.
ಈ ತರಬೇತಿಯು ಪ್ರಥಮ, ದ್ವಿ.ಪಿಯುಸಿ 2 ವರ್ಷಗಳೂ ನಿರಂತರವಾಗಿ ನಡೆಯಲಿದ್ದು, ರಾಜ್ಯ, ಹೊರರಾಜ್ಯಗಳ ಅನುಭವಿ ಅಧ್ಯಾಪಕರನ್ನು ನಿಯೋಜಿಸಲಾಗುತ್ತದೆ.
ಮಣಿಪಾಲ ಅಕಾಡೆಮಿ ಆಡಳಿತಕ್ಕೊಳಪಟ್ಟ ಎಲ್ಲ ಪ.ಪೂ. ಕಾಲೇಜುಗಳಲ್ಲಿ ಕಲಿತು ಮುಂದೆ ಉನ್ನತ ಶಿಕ್ಷಣವನ್ನು ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿರುವ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನಲ್ಲಿ ಮುಂದುವರಿಸುವ ವಿದ್ಯಾರ್ಥಿಗಳಿಗೆ ಮೆಡಿಕಲ್, ಎಂಜಿನಿಯರಿಂಗ್, ಲ್ಯಾಬ್ ಟೆಕ್ನಿಷಿಯನ್ ಫಾರ್ಮಸಿ, ಹೊಟೇಲ್ ಮ್ಯಾನೇಜ್‌ಮೆಂಟ್ ಮೊದಲಾದ ಸುಮಾರು 300ಕ್ಕೂ ಹೆಚ್ಚು ವೃತ್ತಿಪರ ಪದವಿ ಕೋರ್ಸ್‌ಗಳಲ್ಲಿ ಶೇ.10ರಿಂದ 75ರ ವರೆಗೆ ಕೋರ್ಸ್ ಶುಲ್ಕದಲ್ಲಿ ರಿಯಾಯಿತಿ
ಎಸ್‌ಎಜಿಇಎಸ್ (ಸ್ಕಾಲರ್‌ಶಿಪ್ ಫಾರ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸ್ಟುಡೆಂಟ್ಸ್) ಎನ್ನುವ ಯೋಜನೆಯಡಿ ದೊರಕಲಿದೆ ಎಂದು ಎಜಿಇ ಮಣಿಪಾಲದ ಪತ್ರಿಕಾ ಪ್ರಕಟನೆ ತಿಳಿಸಿದೆ.