ಕಲಬುರಗಿ: ಸಂಸದ ಡಾ| ಉಮೇಶ ಜಾಧವ ತಮ್ಮ ಜನಾಂಗದ ಪರ ಮಾತ್ರ ಕೆಲಸ ಮಾಡುವುದನ್ನು ನೋಡಿದರೆ ಅವರು ಲಂಬಾಣಿಗರ ಮತದಿಂದ ಮಾತ್ರ ಗೆದ್ದಿದ್ದಾರೆಯೇ? ಎಂಬ ಪ್ರಶ್ನೆ ಮೂಡುತ್ತಿದೆ ಎಂದು ದಲಿತ ಮುಖಂಡರು ಪ್ರಶ್ನಿಸಿದರು.
ಸರ್ಕಾರದ ಎಲ್ಲ ಮೀಸಲಾತಿ ಲಾಭವನ್ನು ಕೇವಲ ಬಂಜಾರ ಸಮಾಜದ ಫಲಾನುಭವಿಗಳಿಗೆ ತಲುಪಿಸುತ್ತಿದ್ದಾರೆ. ಲಿಂಗಾಯಿತರು, ದಲಿತರು ಸೇರಿದಂತೆ ಎಲ್ಲ ಸಮುದಾಯಗಳ ಮತಗಳನ್ನು ಪಡೆದ ಜಾಧವ ಈಗ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ದಲಿತ ಹಿರಿಯ ನಾಯಕ ಡಾ| ವಿಠ್ಠಲ ದೊಡ್ಡಮನಿ ಟೀಕಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲಾನುಭವಿಗಳ ಪಟ್ಟಿಯಲ್ಲಿ ಲಂಬಾಣಿಗರು ಮಾತ್ರ ಇರೋದನ್ನು ಕಾಣಬಹುದು. ಈ ಮೂಲಕ ದಲಿತರಿಗೆ ಅನ್ಯಾಯ ಎಸಗಲಾಗುತ್ತಿದೆ ಎಂದು ಆರೋಪಿಸಿದರು. ಜಾತಿಯತೆ ವ್ಯಾಪಕವಾಗಿ ಮಾಡಲಾಗುತ್ತಿದೆ. ಇದಕ್ಕೆ ದಲಿತರ ಮೇಲೆ ಈಗ ನಡೆಯುತ್ತಿರುವ ಹಲ್ಲೆ, ಶೋಷಣೆಯೇ ಸಾಕ್ಷಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ಪರಿವರ್ತನೆ ಹೊಂದಲು ಹೇಗೆ ಸಾಧ್ಯ? ಬಿಜೆಪಿ ಸರ್ಕಾರವಂತು ಕಡೆಗಣಿಸುತ್ತಿದೆ. ಇನ್ಮುಂದೆಯಾದರೂ ತನ್ನ ನಡತೆ ಬದಲಾಯಿಸಿಕೊಳ್ಳಬೇಕು ಎಂದರು.
ಮಣಿಕಂಠ ಗಡಿಪಾರಿಗೆ ಆಗ್ರಹ
ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಮಾತನಾಡಿ, ಸಂಸದ ಡಾ| ಉಮೇಶ ಜಾಧವ್ ಬಲಗೈ ಬಂಟನಾಗಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೊಡ ಅಕ್ರಮ ಅಕ್ಕಿ ಸಾಗಾಣಿಕೆ ಪ್ರಕರಣದಲ್ಲಿ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಹಾಗೂ ಮಹಾರಾಷ್ಟ್ರದ ಉಮರ್ಗಾ ಸೇರಿದಂತೆ ವಿವಿಧೆಡೆ ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ರಾಠೊಡ ಅವರನ್ನು ಕೂಡಲೆ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಇದೇ ಜು.14ರಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ ಅವರು ಕಲಬುರಗಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಇದೇ ಸಂದರ್ಭದಲ್ಲಿ ಅವರಿಗೆ ಮತ್ತೂಮ್ಮೆ ಮಣಿಕಂಠ ರಾಠೊಡ ವಿರುದ್ಧ ದೂರು ನೀಡಲಾಗುವುದು ಎಂದರು. ದಲಿತ ಮುಖಂಡರಾದ ಅರ್ಜುನ ಭದ್ರೆ, ಎ.ಬಿ.ಹೊಸಮನಿ, ಹಣಮಂತ ಬೋಧನ್ ಮಾತನಾಡಿ, ದಲಿತರ ಮೇಲೆ ವಿನಾಕಾರಣ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ದೂರಿದರು. ಮಲ್ಲಪ್ಪ ಹೊಸಮನಿ, ಸಂತೋಷ ಮೇಲಿನಮನಿ, ಲಿಂಗರಾಜ ತಾರಫೈಲ್ ಇದ್ದರು.