ಬ್ಯಾಂಕಾಕ್: ಸ್ಟಾರ್ ಟಿಟಿ ಆಟಗಾರ್ತಿ ಮಣಿಕಾ ಬಾತ್ರಾ ಶುಕ್ರವಾರ ನೂತನ ಇತಿಹಾಸ ನಿರ್ಮಿಸಿದ್ದಾರೆ. ಅವರು ಏಷ್ಯನ್ ಕಪ್ ಟೇಬಲ್ ಟೆನಿಸ್ ಕೂಟದ ಸೆಮಿಫೈನಲ್ ತಲುಪಿದ ಭಾರತದ ಮೊದಲ ವನಿತಾ ಟಿಟಿಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಕೂಟದ ಕ್ವಾರ್ಟರ್ ಫೈನಲ್‌ನಲ್ಲಿ, 44ನೇ ರ್‍ಯಾಂಕಿಂಗ್ ಆಟ ಗಾರ್ತಿ ಮಣಿಕಾ ಬಾತ್ರಾ ತನಗಿಂತ ಉನ್ನತ ರ್‍ಯಾಂಕಿಂಗ್ ಆಟಗಾರ್ತಿಯಾದ ಚೈನೀಸ್ ತೈಪೆಯ ಚೆನ್ ಸು-ಯು (23ನೇ ರ್‍ಯಾಂಕಿಂಗ್) ಅವರನ್ನು ಭಾರೀ ಹೋರಾಟದ ಬಳಿಕ 4-3 ಅಂತರದಿಂದ ಮಣಿಸಿದರು (6-11, 11-6, 11-5, 11-7,
8-11, 9-11, 11-9). ಇದು ಸು-ಯು ವಿರುದ್ಧ ಆಡಿದ 6 ಪಂದ್ಯಗಳಲ್ಲಿ ಮಣಿಕಾ ದಾಖಲಿಸಿದ ಕೇವಲ 2ನೇ ಗೆಲುವು.
ಶ್ರೇಯಾಂಕ ರಹಿತ ಆಟಗಾರ್ತಿ ಮಣಿಕಾ ಬಾತ್ರಾ 16ರ ಸುತ್ತಿನ ಪಂದ್ಯದಲ್ಲೂ ಅಚ್ಚರಿಯ ಫಲಿತಾಂಶ ದಾಖಲಿಸಿದ್ದರು. ಚೀನದ 7ನೇ ರ್‍ಯಾಂಕಿಂಗ್ ಆಟಗಾರ್ತಿ ಚೆನ್ ಕ್ಸಿಂಗ್‌ಟಂಗ್ ಅವರನ್ನು ಮಣಿಸಿದ್ದರು. ಸೆಮಿಫೈನಲ್‌ನಲ್ಲಿ ಮಣಿಕಾ ಬಾತ್ರಾ ವಿಶ್ವದ ನಂ.2 ಹಾಗೂ ದ್ವಿತೀಯ ಶ್ರೇಯಾಂಕದ ಆಟಗಾರ್ತಿ ಜಪಾನ್‌ನ ಮಿಮಾ ಇಟೊ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಜಿ. ಸಥಿಯನ್ ಮತ್ತು ಆಚಂತ ಶರತ್ ಕಮಲ್ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದರು.